ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕಳೆದ 30 ವರ್ಷಗಳಿಂದ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿರುವ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಈ ಚುನಾವಣೆಯಲ್ಲಿ ಮತ ಬಹಿಷ್ಕಾರ ಘೋಷಿಸಿದ್ದ ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾ. ಪಂ. ವ್ಯಾಪ್ತಿಯ ಅಂಬಟ್ಟಿಯ ಮತದಾರರು ಮತಬಹಿಷ್ಕಾರ ಹಿಂಪಡೆದು ಶುಕ್ರವಾರ ನಡೆದ ಮತದಾನದಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿದರು.ಅಂಬಟ್ಟಿ ಗ್ರಾಮಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲ. ಬಹುತೇಕ ಬಡತನ ರೇಖೆಗಿಂತ ಕೆಳಗಿನ ಜನರು ಹೆಚ್ಚಾಗಿ ನೆಲೆಸಿರುವ ಈ ಗ್ರಾಮದಲ್ಲಿ ಸರ್ಕಾರದ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಿ ಎಂದು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಮನವಿ ನೀಡುತ್ತಾ ಬಂದಿದ್ದರೂ ಅಂಬಟ್ಟಿ ಗ್ರಾಮವನ್ನು ಜನಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಇದೆ.
ಈ ಕಾರಣದಿಂದ ಈ ಲೋಕಸಭಾ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳದೆ ಮತ ಬಹಿಷ್ಕಾರ ಮಾಡಲಾಗುವುದು ಎಂಬ ಮಾಹಿತಿಯುಳ್ಳ ಬ್ಯಾನರ್ ಗಳನ್ನು ಗ್ರಾಮಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಪ್ರದರ್ಶಿಸಿದ್ದರು. ‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ, ಚರಂಡಿ, ಶುದ್ಧ ಕುಡಿಯುವ ನೀರು, ದಾರಿದೀಪ ಮೊದಲಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವವರೆಗೂ ಯಾವುದೇ ಪಕ್ಷಗಳು ಮತ್ತು ಮುಖಂಡರು ಮತಯಾಚನೆಗಾಗಿ ನಮ್ಮ ಗ್ರಾಮವನ್ನು ಪ್ರವೇಶಿಸಬೇಡಿ’ ಎಂದು ಬ್ಯಾನರ್ ನಲ್ಲಿ ಬರೆದು ಗಮನ ಸೆಳೆಯಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.ಮಾಧ್ಯಮಗಳಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ ಎ.ಎಸ್. ಪೊನ್ನಣ್ಣ ರಾತ್ರೋರಾತ್ರಿ ಕಾಂಗ್ರೆಸ್ ಪ್ರಮುಖರೊಂದಿಗೆ ಅಂಬಟ್ಟಿ ಗ್ರಾಮಕ್ಕೆ ತೆರಳಿ ಸ್ಥಳೀಯರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಶಾಸಕರು, ಗ್ರಾಮಸ್ಥರು ಎದುರಿಸುತ್ತಿರುವ ಮೂಲಭೂತ ಸೌಲಭ್ಯಗಳ ಸಮಸ್ಯೆ ಸರಿದೂಗಿಸಲು ಮತಬಹಿಷ್ಕಾರದಿಂದ ಯಾವುದೇ ಪರಿಹಾರವಾಗುವುದಿಲ್ಲ. ಆದರಿಂದ ಮತಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದು ಮತದಾನದಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.
ಚುನಾವಣೆಯ ನಂತರ ಅಂಬಟ್ಟಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು. ಚುನಾವಣೆಯ ನೀತಿ ಸಂಹಿತೆ ಪೂರ್ಣಗೊಂಡ ಕೂಡಲೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಆರಂಭಿಸಲು ಕ್ರಮ ಜರುಗಿಸುದಾಗಿ ಭರವಸೆ ನೀಡಿದ ಶಾಸಕರು, ಯಾವುದೇ ಕಾರಣಕ್ಕೂ ಮತ ಬಹಿಷ್ಕಾರಕ್ಕೆ ಮುಂದಾಗದಂತೆ ಕೋರಿದರು.ಶಾಸಕರ ಭರವಸೆಯಂತೆ ಮತ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದ ಅಂಬಟ್ಟಿ ಗ್ರಾಮಸ್ಥರು, ಶುಕ್ರವಾರ ನಡೆದ ಮತದಾನದಲ್ಲಿ ಬೆಳಿಗ್ಗೆಯೇ ಉತ್ಸಾಹದಿಂದ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು.