ವಿವಾಹಿತೆಗೆ 13 ಸಲ ಇರಿದು ಕೊಂದ ಬಾಯ್ ಫ್ರೆಂಡ್!

KannadaprabhaNewsNetwork |  
Published : Jun 10, 2025, 10:18 AM IST
Harini | Kannada Prabha

ಸಾರಾಂಶ

ತನ್ನಿಂದ ದೂರವಾಗಲು ಯತ್ನಿಸಿದ್ದಳು ಎಂಬ ಕಾರಣಕ್ಕೆ ಸ್ನೇಹಿತೆಯನ್ನು ಲಾಡ್ಜ್‌ಗೆ ಕರೆಸಿಕೊಂಡು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಸುಮಾರು 13 ಬಾರಿ ಮನಬಂದಂತೆ ಚಾಕುನಿಂದ ಇರಿದು ಭೀಕರವಾಗಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನಿಂದ ದೂರವಾಗಲು ಯತ್ನಿಸಿದ್ದಳು ಎಂಬ ಕಾರಣಕ್ಕೆ ಸ್ನೇಹಿತೆಯನ್ನು ಲಾಡ್ಜ್‌ಗೆ ಕರೆಸಿಕೊಂಡು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಸುಮಾರು 13 ಬಾರಿ ಮನಬಂದಂತೆ ಚಾಕುನಿಂದ ಇರಿದು ಭೀಕರವಾಗಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಉಪನಗರದ ನಿವಾಸಿ ಆರ್‌. ಯಶಸ್ (26) ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ಉತ್ತರಹಳ್ಳಿ ಮುಖ್ಯರಸ್ತೆಯ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿ ತನ್ನ ಸ್ನೇಹಿತೆ ಹರಿಣಿಯನ್ನು (32) ಚಾಕುವಿನಿಂದ ಹತ್ಯೆಗೈದಿದ್ದ.

ಈ ಕೃತ್ಯ ಎಸಗಿದ ಬಳಿಕ ಬಂಧನ ಭೀತಿಗೊಳಗಾಗಿ ಎದೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯಶಸ್‌, ತನ್ನ ಗೆಳೆಯನಿಗೆ ಕರೆ ಮಾಡಿ ಕೊಲೆ ಸಂಗತಿ ತಿಳಿಸಿದ್ದ. ಬಳಿಕ ಆತನ ಸ್ನೇಹಿತ, ಯಶಸ್ ತಂದೆಗೆ ತಿಳಿಸಿದ್ದಾನೆ. ಈ ವಿಷಯ ಗೊತ್ತಾಗಿ ಆತಂಕಗೊಂಡ ಯಶಸ್‌ ತಂದೆ, ಕೂಡಲೇ ಉತ್ತರಹಳ್ಳಿ ರಸ್ತೆಗೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಆಸ್ಪತ್ರೆ ಸಿಬ್ಬಂದಿಯಿಂದ ಈ ವಿಷಯ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಆಸ್ಪತ್ರೆಗೆ ತೆರಳಿ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.

ಊರ ಹಬ್ಬದಲ್ಲಿ ಅರಳಿದ ಪ್ರೇಮ

12 ವರ್ಷಗಳ ಹಿಂದೆ ಕೆಂಗೇರಿ ಸಮೀಪದ ಹೆಮ್ಮಿಗೆಪುರದ ಕೃಷಿಕ ದಾಸೇಗೌಡ ಅವರನ್ನು ಹರಿಣಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಮೃತಳ ಪತಿ ಕೋಟ್ಯಂತರ ರು. ಮೌಲ್ಯದ ಆಸ್ತಿ ಒಡೆಯನಾಗಿದ್ದು, ಕೃಷಿ ಜತೆ ಇತರೆ ಬ್ಯುಸಿನೆಸ್‌ನಲ್ಲಿ ಸಹ ದಾಸೇಗೌಡ ತೊಡಗಿದ್ದ.

ಐದು ವರ್ಷಗಳ ಹಿಂದೆ ಆ ಊರ ಹಬ್ಬದಲ್ಲಿ ಹರಿಣಿಗೆ ತನ್ನ ಸಂಬಂಧಿ ರಾಕೇಶ್‌ ಮೂಲಕ ಆತನ ಸ್ನೇಹಿತ ಯಶಸ್ ಪರಿಚಯವಾಗಿದೆ. ಬಳಿಕ ಸ್ನೇಹ ಆತ್ಮೀಯತೆ ಮೂಡಿದ್ದು, ಇಬ್ಬರು ಪರಸ್ಪರ ಮೊಬೈಲ್‌ ನಂಬರ್ ವಿನಿಮಿಯ ಮಾಡಿಕೊಂಡಿದ್ದರು. ಮೊಬೈಲ್ ಮಾತುಕತೆ ಶುರುವಾದ ನಂತರ ಆಗಾಗ್ಗೆ ಈ ಜೋಡಿ ‘ವಿಹಾರ’ ಸಹ ನಡೆಸಿದೆ. ಹೀಗಿರುವಾಗ ಐದು ತಿಂಗಳ ಹಿಂದೆ ತನ್ನ ಪತ್ನಿಯ ಅನೈತಿಕ ಸಂಬಂಧ ಸಂಗತಿ ಹರಿಣಿ ಪತಿ ದಾಸೇಗೌಡನಿಗೆ ಗೊತ್ತಾಯಿತು. ಈ ವಿಷಯ ತಿಳಿದು ಕೆರಳಿದ ಆತ, ಮನೆಯಲ್ಲಿ ಪತ್ನಿ ಮೇಲೆ ಗಲಾಟೆ ಮಾಡಿ ಕೊನೆಗೆ ಆಕೆಯ ಮೊಬೈಲ್ ಕಸಿದು ಗೃಹಬಂಧನ ವಿಧಿಸಿದ್ದ. ಈ ರಾದ್ಧಾಂತದ ಬಳಿಕ ಕೆಲ ತಿಂಗಳು ಸ್ನೇಹಿತ ಯಶಸ್‌ ಸಂಪರ್ಕದಿಂದ ಆಕೆ ದೂರವಾಗಿದ್ದಳು ಎಂದು ತಿಳಿದು ಬಂದಿದೆ.

ತವರು ಮನೆಗೆ ಬಂದಿದ್ದ ಹರಿಣಿ

ಕೆಲ ದಿನಗಳ ಗೃಹ ಬಂಧನದಿಂದ ಮುಕ್ತಗೊಂಡ ನಂತರ ಮತ್ತೆ ಸ್ನೇಹಿತನೊಂದಿಗೆ ಆಕೆಯ ಸಂಪರ್ಕದ ಬೆಸುಗೆ ಬಿತ್ತು. ಆದರೆ ತನ್ನ ಪ್ರಿಯತಮೆ ಕಾಣದೆ ಕಂಗಾಲಾಗಿದ್ದ ಯಶಸ್‌, ತನಗೆ ದಕ್ಕದೆ ಹೋದರೆ ಆಕೆಯ ಸಾಂಗತ್ಯ ಮತ್ಯಾರಿಗೂ ಸಿಗಲೇ ಬಾರದು ಎಂದು ನಿರ್ಣಯಿಸಿ ಪ್ರಿಯತಮೆ ಹತ್ಯೆಗೆ ಆತ ನಿರ್ಧರಿಸಿದ್ದ. ಇದಕ್ಕೆ ಆತ ಚಾಕು ಸಹ ಖರೀದಿಸಿದ್ದ.

ಇದೇ ತಿಂಗಳ 6 ರಂದು ಚಾಮರಾಜಪೇಟೆ ಸಮೀಪದ ಕಸ್ತೂರಿ ಬಾ ನಗರದಲ್ಲಿರುವ ತನ್ನ ತವರು ಮನೆಗೆ ಅತ್ತಿಗೆ ಕರೆ ಮೇರೆಗೆ ಹರಿಣಿ ಹೋಗಿದ್ದಳು. ಅಂದು ಕೆಂಗೇರಿಗೆ ಸಂಜೆ 4 ಗಂಟೆಗೆ ಆಕೆಯನ್ನು ಪತಿ ದಾಸೇಗೌಡ ಡ್ರಾಪ್ ಮಾಡಿದ್ದರು. ತವರು ಮನೆಯಿಂದ 6 ಗಂಟೆಗೆ ಹೊರಟ ಆಕೆ, ತಾನು ಅರ್ಧ ತಾಸಿನಲ್ಲಿ ಕೆಂಗೇರಿಗೆ ಬರುವುದಾಗಿ ಪತಿಗೆ ಕರೆ ಮಾಡಿ ಹೇಳಿದ್ದಳು. ಆದರೆ ಪ್ರಿಯಕರನ ಆಹ್ವಾನದ ಮೇರೆಗೆ ಆತನೊಂದಿಗೆ ಉತ್ತರಹಳ್ಳಿಯ ಲಾಡ್ಜ್‌ಗೆ ಹರಿಣಿ ಹೋಗಿದ್ದಳು. ಇತ್ತ ಪತ್ನಿ ಬಾರದೆ ಹೋದಾಗ ಆತಂಕಗೊಂಡ ದಾಸೇಗೌಡ, ತನ್ನ ಬಾಮೈದುನನಿಗೆ (ಹರಿಣಿ ಸೋದರ) ಕರೆ ಮಾಡಿ ವಿಚಾರಿಸಿದರು. ಆದರೆ ಸಂಜೆ 6 ಗಂಟೆಗೆ ಸೋದರಿ ಮನೆಯಿಂದ ಹೊರಟ ಸಂಗತಿ ಖಚಿತವಾಯಿತು. ಆದರೆ ಆಕೆಯನ್ನು ಸಂಪರ್ಕಿಸಲು ಯತ್ನಿಸಿದರೆ ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅತ್ತ ಆ ಲಾಡ್ಜ್‌ನಲ್ಲಿ ಎರಡು ತಾಸಿಗೂ ಅಧಿಕ ಹೊತ್ತು ಏಕಾಂತವಾಗಿ ಈ ಜೋಡಿ ಕಳೆದಿದೆ.

ಆನಂತರ ರಾತ್ರಿ 9.30ರ ಸುಮಾರಿಗೆ ತಾನು ಮನೆಗೆ ಹೋಗುವುದಾಗಿ ಹೇಳಿ ಹರಿಣಿ ಹೊರಟಿದ್ದಾಳೆ. ಇದಕ್ಕೆ ಆಕ್ಷೇಪಿಸಿ ತನ್ನೊಂದಿಗಿರುವಂತೆ ಆತ ಒತ್ತಾಯಿಸಿದ್ದಾನೆ. ಆಗ ಪರಸ್ಪರ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಪೂರ್ವನಿಯೋಜಿತನಾಗಿ ತಾನು ತಂದಿದ್ದ ಚಾಕುವಿನಿಂದ ಆಕೆಗೆ ಮನಸೋಯಿಚ್ಛೆ 12-13 ಬಾರಿ ಇರಿದು ಕೊಂದಿದ್ದಾನೆ.

ಈ ಹತ್ಯೆ ಬಳಿಕ ಅದೇ ಚಾಕುವಿನಿಂದ ಎದೆಗೆ ಇರಿದುಕೊಂಡು ಸ್ನೇಹಿತನಿಗೆ ಕರೆ ಮಾಡಿ ಹತ್ಯೆ ವಿಷಯವನ್ನು ಯಶಸ್ ತಿಳಿಸಿದ್ದಾನೆ. ತಕ್ಷಣವೇ ಆತನ ತಂದೆಗೆ ಕರೆ ಮಾಡಿ ಮೃತನ ಸ್ನೇಹಿತ ವಿಷಯ ಮುಟ್ಟಿಸಿದ್ದ. ಕೂಡಲೇ ಉತ್ತರಹಳ್ಳಿ ರಸ್ತೆಗೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಗನನ್ನು ಖಾಸಗಿ ಆಸ್ಪತ್ರೆಗೆ ಯಶಸ್‌ ತಂದೆ ಚಿಕಿತ್ಸೆಗೆ ದಾಖಲಿಸಿದರು. ಆಗ ತಮ್ಮ ಆಸ್ಪತ್ರೆಗೆ ಚಾಕುವಿನಿಂದ ಹಲ್ಲೆಗೊಳಗಾಗಿರುವ ವ್ಯಕ್ತಿ ದಾಖಲಾಗಿರುವ ವಿಚಾರವನ್ನು ಕೆಂಗೇರಿ ಪೊಲೀಸರಿಗೆ ಆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದರು. ಈ ವಿಷಯ ತಿಳಿದು ಆಸ್ಪತ್ರೆಗೆ ತೆರಳಿ ಆತನನ್ನು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಕೃತ್ಯವು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಾರಣಕ್ಕೆ ಆರೋಪಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್

ಸಾಮಾಜಿಕ ಜಾಲತಾಣಗಳಲ್ಲಿ ಹರಿಣಿ ತುಂಬಾ ಸಕ್ರಿಯವಾಗಿದ್ದಳು. ಜಾತ್ರೆಯಲ್ಲಿ ಪರಿಚಯವಾದ ನಂತರ ಫೇಸ್ ಬುಕ್ ನಲ್ಲಿ ಯಶಸ್ ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಗೆ ಆಕೆ ಒಪ್ಪಿಗೆ ಸೂಚಿಸಿದ್ದಳು. ಅಲ್ಲಿಂದ ಇಬ್ಬರ ಮಧ್ಯೆ ಚಾಟಿಂಗ್ ಶುರುವಾಗಿ ಅನೈತಿಕ ಸಂಬಂಧಕ್ಕೆ ತಿರುಗಿದೆ ಎಂದು ಮೂಲಗಳು ಹೇಳಿವೆ.

ವೋಟರ್ ಐಡಿ ಹಿಡಿದು ಮನೆಗೆ ಬಂದ್ರು

ಲಾಡ್ಜ್‌ನಲ್ಲಿ ರೂಮ್ ಪಡೆಯುವಾಗ ಕೊಟ್ಟಿದ್ದ ವೋಟರ್ ಐಡಿ ಆಧರಿಸಿ ಹರಿಣಿ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಮನೆಗೆ ಪೊಲೀಸರು ತೆರಳಿದ್ದಾಗಲೇ ಆಕೆ ಹತ್ಯೆ ಸಂಗತಿ ಮೃತಳ ಕುಟುಂಬದವರಿಗೆ ಗೊತ್ತಾಗಿದೆ.

ವೆಬ್ ಸೀರಿಸ್ ನೋಡಿ ಸಂಚು

ತನ್ನಿಂದ ದೂರವಾದ ಸ್ನೇಹಿತೆ ಹತ್ಯೆಗೆ ಕ್ರೈಂ ವೆಬ್‌ ಸಿರೀಸ್‌ಗಳನ್ನು ವೀಕ್ಷಿಸಿ ಆತ ಸಂಚು ರೂಪಿಸಿದ್ದ. ಐದಾರು ತಿಂಗಳಿಂದ ಓಟಿಟಿ ಆ್ಯಪ್‌ಗಳ ಮೂಲಕ ನಿರಂತರವಾಗಿ ವೆಬ್‌ ಸಿರೀಸ್‌ಗಳನ್ನು ಆರೋಪಿ ವೀಕ್ಷಿಸಿದ್ದ ಎಂದು ತಿಳಿದು ಬಂದಿದೆ.

ತಂದೆ ಬಿಎಂಟಿಸಿ ಬಸ್ ಚಾಲಕ ಎಂಜಿನಿಯರಿಂಗ್ ಓದು ಮುಗಿಸಿದ ಬಳಿಕ ವೈಟ್‌ಫೀಲ್ಡ್ ಸಮೀಪದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಯಶಸ್‌ಗೆ ಉದ್ಯೋಗ ಸಿಕ್ಕಿತು. ಬಿಎಂಟಿಸಿಯಲ್ಲಿ ಆತನ ತಂದೆ ಚಾಲಕರಾಗಿದ್ದು, ಕೆಂಗೇರಿ ಉಪನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ತನ್ನ ಕುಟುಂಬ ಜತೆ ಅವರು ನೆಲೆಸಿದ್ದಾರೆ. ತಮ್ಮ ಒಬ್ಬನೇ ಮಗನನ್ನು ಅವರು ಮುದ್ದಾಗಿ ಸಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''