ಕಾಲ್ತುಳಿತ ಪ್ರಕರಣ ಸಿಬಿಐಗೆ ವಹಿಸಿ : ರೇಣುಕಾಚಾರ್ಯ

KannadaprabhaNewsNetwork |  
Published : Jun 10, 2025, 10:10 AM ISTUpdated : Jun 10, 2025, 11:29 AM IST
ಕ್ಯಾಪ್ಷನ9ಕೆಡಿವಿಜಿ32, 33 ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

 ಬೆಂಗಳೂರಿನಲ್ಲಿ ಐಪಿಎಲ್ ಸಂಭ್ರಮಾಚರಣೆ ವೇಳೆ ಮೃತರಾದ 11 ಜನರ ಸಾವಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರೆ ಹೊಣೆ :  ಎಂ.ಪಿ.ರೇಣುಕಾಚಾರ್ಯ  

  ದಾವಣಗೆರೆ  : ಬೆಂಗಳೂರಿನಲ್ಲಿ ಐಪಿಎಲ್ ಸಂಭ್ರಮಾಚರಣೆ ವೇಳೆ ಮೃತರಾದ 11 ಜನರ ಸಾವಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರೆ ಹೊಣೆಯಾಗಿದೆ. ಮುಖ್ಯಮಂತ್ರಿ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಜೊತೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.

ದಾವಣಗೆರೆಯ ವರದಿಗಾರರ ಕೂಟದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣವನ್ನು ಸಿಐಡಿ, ಎಸ್‌ಐಟಿಗೆ ವಹಿಸಿದ್ದೀರಿ. ಈ ಎರಡೂ ಇಲಾಖೆಗಳು ನಿಮ್ಮ ಅಧೀನದಲ್ಲಿ ಇರುವ ಕಾರಣ ನಿಷ್ಪಕ್ಷಪಾತ ತನಿಖೆ ನಡೆಯುವ ಸಾಧ್ಯತೆಗಳು ಕಡಿಮೆ ಇದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.

ಅಧಿಕಾರಿಗಳ ಸೂಚನೆ ಪರಿಗಣಿಸಿಲ್ಲ:

ಐಪಿಎಲ್ ಸಂಭ್ರಮಾಚರಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬಾರದು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ಕಡಿಮೆ ಪ್ರಮಾಣ ಜನ ಸೇರುವಂತೆ ಸೂಚನೆ ನೀಡಿದ್ದರು. ಆದರೂ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಎಲ್ಲವನ್ನೂ ನಿರ್ಲಕ್ಷಿಸಿ, ನೂರಕ್ಕೂ ಹೆಚ್ಚು ಜನ ಸೇರುವಂತೆ ಮಾಡಿದ್ದರು. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಕಾರಣ ಎಂದು ಟೀಕಿಸಿದರು.

ದೊಡ್ಡ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಇಲ್ಲದೇ ತರಾತುರಿಯಲ್ಲಿ ಸನ್ಮಾನ ಆಯೋಜನೆ ಮಾಡಲಾಗಿತ್ತು. 11 ಜನರ ಸಾವಿಗೆ ಕಾರಣರೇ ಅಲ್ಲದವರನ್ನು ಅಮಾನತು ಮಾಡಲಾಗಿದೆ, ರಾಜೀನಾಮೆ ಪಡೆಯಲಾಗಿದೆ. ಇದಲ್ಲದೇ ಖಾಸಗಿ ಕಾರ್ಯಕ್ರಮಗಳನ್ನು ವಿಧಾನಸೌಧ ಬಳಿ ಮಾಡುವ ಅಗತ್ಯವಿರಲಿಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಇಡೀ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಸರ್ಕಾರದಿಂದ ಮಾಡಲಾಗಿದೆ ಎಂದು ಕಿಡಿಕಾರಿದರು.

ಕನ್ನಡ ನಾಡಿಗೇ ಅಪಮಾನ:

ವೇದಿಕೆಯಲ್ಲಿ ಆಟಗಾರರನ್ನು ಸನ್ಮಾನ ಮಾಡಬೇಕಿತ್ತು. ಆದರೆ, ಆಟಗಾರರೇ ಕಾಣದ ರೀತಿಯಲ್ಲಿ ರಾಜಕಾರಣಿಗಳ ಕುಟುಂಬದ ಸದಸ್ಯರೇ ಅಲ್ಲಿ ತುಂಬಿಕೊಂಡಿದ್ದರು. ಕೊಲೆಗಡುಕತನದ ಸರ್ಕಾರ ಮಾಡಿದ ಹೇಡಿತನದಿಂದಾಗಿ ಇಂತಹ ಕೃತ್ಯ ನಡೆದಿದೆ. ಇದು ಕೇವಲ ಆಟಗಾರರಿಗೆ ಮಾಡಿದ ಅಪಮಾನವಲ್ಲ. ಇಡೀ ಕನ್ನಡ ನಾಡಿಗೆ ಮಾಡಿದ ಅಪಮಾನ ಎಂದು ರೇಣುಕಾಚಾರ್ಯ ಸರ್ಕಾರಕ್ಕೆ ಚಾಟಿ ಬೀಸಿದರು.

ಗೃಹಮಂತ್ರಿ ಮೌನದ ಅರ್ಥವೇನು?:

ಕಾಲ್ತುಳಿತದ ವೇಳೆ ಮೃತರಾದ ಕುಟುಂಬಗಳು ಈಗಲೂ ಕಣ್ಣೀರು ಹಾಕುತ್ತಿವೆ. ಅವರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ. ಇದಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಮಂತ್ರಿ ಮೌನ ವಹಿಸಿದ್ದಾರೆ. ಇದರ ಅರ್ಥ ಏನು? ಪ್ರಕರಣಕ್ಕೆ ಸಂಬಂಧವೇ ಇಲ್ಲದವರನ್ನು ಅಮಾನತು ಮಾಡಲಾಗಿದೆ. ಅದರ ಬದಲು ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜು ವೀರಣ್ಣ, ಪಂಜು ಪೈಲ್ವಾನ್, ಕೆ.ಎನ್.ವೆಂಕಟೇಶ, ಪ್ರವೀಣ್ ಜಾಧವ್, ಜಯರುದ್ರಪ್ಪ, ಸುಮಂತ್, ರವಿಗೌಡ, ಚೇತನ, ಅಜೇಯ, ಮಂಜುನಾಥ್, ರಾಜು ಇತರರು ಇದ್ದರು. 

PREV
Read more Articles on

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ