ಕರಾವಳಿ, ಮಲೆನಾಡಿನ ಅಡಕೆ, ತೆಂಗು ತೋಟಗಳಿಗೆ ಉತ್ತರದ ಕುರಿ ಗೊಬ್ಬರ!

KannadaprabhaNewsNetwork |  
Published : Jun 10, 2025, 10:14 AM ISTUpdated : Jun 10, 2025, 11:38 AM IST
ಪೋಟೋ ಇದೆ. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಹೊಲಗಳ ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿರುವ ಕುರಿ ಹಿಕ್ಕಿ (ಗೊಬ್ಬರ) ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ, ಶಿವಮೊಗ್ಗ ಜಿಲ್ಲೆಗಳಿಗೂ ಈ ಭಾಗದಿಂದ ಸಾಗಾಟ 

ಶಿವಾನಂದ ಅಂಗಡಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೊಲಗಳ ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿರುವ ಕುರಿ ಹಿಕ್ಕಿ (ಗೊಬ್ಬರ) ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ, ಶಿವಮೊಗ್ಗ ಜಿಲ್ಲೆಗಳಿಗೂ ಈ ಭಾಗದಿಂದ ಸಾಗಾಟವಾಗುತ್ತಿದ್ದು, ತೆಂಗು, ಅಡಕೆ ಕೃಷಿಕಾರರು ಗೊಬ್ಬರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.

ಸಾವಯವ ಗೊಬ್ಬರವೆಂದೇ ಹೆಸರುವಾಸಿಯಾಗಿರುವ ಕುರಿ ಹಿಕ್ಕಿಯನ್ನು ಉತ್ತರ ಕರ್ನಾಟಕದ ಹೊಲ ಹೊಲಗಳಲ್ಲಿ ನೀವು ಕಂಡಿದ್ದೀರಿ, ಹಿಂಗಾರಿ ಬೆಳೆ ಕಟಾವು ಮುಗಿಯುತ್ತಿದ್ದಂತೆ ಇಲ್ಲಿಯ ಪ್ರತಿಯೊಬ್ಬ ರೈತರು ಹೊಲಗಳಲ್ಲಿ ಕುರಿಗಳನ್ನು ನಿಲ್ಲಿಸುತ್ತಾರೆ. ಎರಡ್ಮೂರು ದಿನ ಅದೇ ಹೊಲದಲ್ಲೇ ಜಾಗ ಬದಲಾಯಿಸಿ ಕುರಿ ನಿಲ್ಲಿಸುವುದರಿಂದ ಅಲ್ಲೆಲ್ಲ ಕುರಿ ಹಿಕ್ಕಿ ಮತ್ತು ಮೂತ್ರ ನೇರವಾಗಿ ಮಣ್ಣಿಗೆ ಸೇರಿ ಬೆಳೆಗಳ ಬೆಳವಣಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಬೇಸಿಗೆ ಆ ದಿನಗಳು ಕುರಿಗಾರರಿಗೆ ಹಂಗಾಮಿನ ದಿನಗಳೂ ಆಗಿದ್ದು, ಕುರಿ ನಿಲ್ಲಿಸಲು ಬಹಳ ಬೇಡಿಕೆ ಇರುತ್ತದೆ. ಹೊಲ ಹೊಲಗಳಲ್ಲಿ ಕುರಿಗಳನ್ನು ನಿಲ್ಲಿಸಿ ಕುರಿಗಳ ಸಂಖ್ಯೆಗೆ ತಕ್ಕಂತೆ ಜೋಳ, ಹಣ ಪಡೆಯುತ್ತಾರೆ.

ಕುರಿಯು ಕಾಡು ಮೇಡುಗಳಲ್ಲಿ ನಾನಾ ತಪ್ಪಲುಗಳನ್ನು ತಿನ್ನುವುದರಿಂದ ಅದರಲ್ಲಿನ ಆಯುರ್ವೇದ ಔಷಧೀಯ ಗುಣಗಳು ಮತ್ತು ಅಗತ್ಯ ಪೋಷಕಾಂಶಗಳು ಗೊಬ್ಬರದ ಮೂಲಕ ಬೆಳೆಗಳಿಗೆ ಲಭ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಕುರಿಗಾರರು.ಈ ಕುರಿ ಹಿಕ್ಕಿ ಸಾರಜನಕ (ನೈಟ್ರೋಜನ್‌), ರಂಜಕ (ಫಾಸ್ಪರಸ್‌) ಮತ್ತು ಪೋಟ್ಯಾಷ್‌ನಂತಹ ಪೋಷಕಾಂಶಗಳನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಮಲೆನಾಡು, ಪಶ್ಚಿಮ ಕರಾವಳಿ ಜಿಲ್ಲೆಗಳ ತೆಂಗು ಹಾಗೂ ಅಡಕೆ ಬೆಳೆಗಾರರು ಸಹ ಕುರಿ ಗೊಬ್ಬರದ ಮೊರೆ ಹೋಗಿದ್ದಾರೆ.

ಗದಗ, ಶಿರಹಟ್ಟಿ, ಕೊಪ್ಪಳ, ಮುನಿರಾಬಾದ್‌, ಕುಷ್ಟಗಿ, ವಿಜಯಪುರ, ವಿಜಯನಗರ ಜಿಲ್ಲೆಯ ಹೊಸಪೇಟೆ, ಧಾರವಾಡ, ಬೆಳಗಾವಿ ಜಿಲ್ಲೆಯ ಗೋಕಾಕ, ಯರಗಟ್ಟಿ, ಸವದತ್ತಿ ಸೇರಿ ಬಹುತೇಕ ಕುರಿಗಾರು ಹೆಚ್ಚಿರುವ ಪ್ರದೇಶಗಳಿಂದ ಕುರಿ ಗೊಬ್ಬರ ಅಡಕೆ, ತೆಂಗು ಬೆಳೆಯುವ ಜಿಲ್ಲೆಗಳಿಗೆ ರವಾನೆಯಾಗುತ್ತದೆ.

ಯಲ್ಲಾಪುರ, ಹಳಿಯಾಳ, ಜೋಯಿಡಾ, ಕುಮಟಾ, ಹೊನ್ನಾವರ, ದಕ್ಷಿಣ ಕನ್ನಡದ ಮಂಗಳೂರು, ಕುಂದಾಪುರ, ಶಿವಮೊಗ್ಗ, ಸಾಗರಕ್ಕೂ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಕುರಿ ಗೊಬ್ಬರ ರವಾನೆಯಾಗುತ್ತದೆ.

ಅಡಕೆ ಬೆಳೆಗಾರರು ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ನಲ್ಲಿ ಅಡಕೆ ಗಿಡಗಳಿಗೆ ಕುರಿ ಗೊಬ್ಬರ ಹಾಕುತ್ತಾರೆ. ತೆಂಗಿನ ಬೆಳೆಗಾರರು ಪ್ರತಿ ವರ್ಷ ಕುರಿ ಗೊಬ್ಬರವನ್ನು ಗಿಡಗಳಿಗೆ ಹಾಕುವ ರೂಢಿ ಇದೆ. ಕುರಿ ಗೊಬ್ಬರ ಮಾರಾಟಕ್ಕೆ ವಿವಿಧೆಡೆ ಮಧ್ಯವರ್ತಿಗಳೇ ಹುಟ್ಟಿಕೊಂಡಿದ್ದು, ಇಲ್ಲಿ ಕುರಿಗಾರರಿಂದ ಕುರಿ ಹಿಕ್ಕಿಯನ್ನು ₹80ರಿಂದ ₹90ರ ವರೆಗೆ 50 ಕಿಲೋ ಬ್ಯಾಗ್‌ನಲ್ಲಿ 30ರಿಂದ 35 ಕಿಲೋವರೆಗೆ ತುಂಬಿಸಿ ಖರೀದಿಸುತ್ತಾರೆ. ತಮ್ಮದೇ ಗೂಡ್ಸ್‌ ವಾಹನಗಳಲ್ಲಿ ಉತ್ತರ ಕನ್ನಡದ ಬೇಡಿಕೆ ಇರುವ ಪ್ರದೇಶಕ್ಕೆ ತೆಗೆದುಕೊಂಡ ಹೋಗಿ ಬ್ಯಾಗ್‌ ಲೆಕ್ಕದಲ್ಲಿ ಹೆಚ್ಚೆಚ್ಚು ಲಾಭದ ಮೇಲೆ ಮಾರಾಟ ಮಾಡಿ ಬರುತ್ತಾರೆ. ಹೀಗಾಗಿ ನಿರಾಯಾಸವಾಗಿ ಅಲ್ಲಿನ ಬೆಳೆಗಾರರಿಗೆ ಪೋಷಕಾಂಶಗಳ ಗೊಬ್ಬರ ಸಿಗುತ್ತಿದೆ.

ದೊಡ್ಡಿಗೆ ಬಂದು ಖರೀದಿ:100 ಕುರಿಗಳಿಗೆ ತಿಂಗಳಲ್ಲೇ 50ರಿಂದ 60 ಚೀಲ ಕುರಿ ಗೊಬ್ಬರ ಬರುತ್ತದೆ. ಈ ಹಿಕ್ಕಿಯನ್ನು ಕುರಿದೊಡ್ಡಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ಅಕ್ಟೋಬರ್‌ನಲ್ಲಿ ಮಧ್ಯವರ್ತಿಗಳೇ ಬಂದು ಈ ಗೊಬ್ಬರ ಖರೀದಿಸಿಕೊಂಡು ಹೋಗುತ್ತಾರೆ ಎಂದು ತಿಳಿಸುತ್ತಾರೆ ಶಿರಹಟ್ಟಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ದೇವಪ್ಪ ಬಟ್ಟೂರ ಅವರು.

ಕುರಿ ಹಿಕ್ಕಿಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ಅತ್ಯುತ್ತಮ ಸಾವಯವ ಗೊಬ್ಬರವಾಗಿದೆ. ಕೃಷಿಗೆ ಇದು ಅತೀ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ಅಡಕೆ ಹಾಗೂ ತೆಂಗು ಬೆಳೆಗಾರರು ಕುರಿ ಗೊಬ್ಬರದ ಮೊರೆ ಹೋಗಿದ್ದಾರೆ ಎಂದು ಗಂಗಾವತಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ವಿ. ಗಡಾದ್ ಹೇಳಿದರು.

ಪ್ರತಿ ವರ್ಷ ಉತ್ತರ ಕರ್ನಾಟಕದ ಎಲ್ಲ ಕಡೆಯಿಂದ ಇಲ್ಲಿಗೆ ಬಂದು ಕುರಿ ಗೊಬ್ಬರ ಕೊಡುತ್ತಾರೆ. ನಾವು ಧಾರವಾಡ, ಕಲಘಟಗಿಯಿಂದ ಕುರಿ ಗೊಬ್ಬರ, ಕೊಟ್ಟಿಗೆ ಗೊಬ್ಬರ ತರಿಸುತ್ತೇವೆ. ಅಕ್ಟೋಬರ್‌ನಲ್ಲಿ ಅಡಕೆ ಸಸಿಗೆ ಅರ್ಧ ಕಿಲೋ ಲೆಕ್ಕದಲ್ಲಿ ಪ್ರತಿ ವರ್ಷ ಕೊಡುತ್ತೇವೆ. ತೆಂಗಿನ ಗಿಡಕ್ಕೆ ಕೊಟ್ಟಿಗೆ ಗೊಬ್ಬರ, ಜತೆಗೆ ಕುರಿ ಹಿಕ್ಕಿ ಗೊಬ್ಬರ ಕೊಡುತ್ತೇವೆ. ಒಂದು ಲೋಡ್‌ಗೆ ಗೊಬ್ಬರದ ಗುಣಮಟ್ಟಕ್ಕೆ ತಕ್ಕಂತೆ ₹30ರಿಂದ 40 ಸಾವಿರ ವರೆಗೆ ಕೊಡುತ್ತೇವೆ ಎಂದು ಯಲ್ಲಾಪುರ ತಾಲೂಕಿನ ಕೈಗಡಿ-ಅರಬೈಲ್‌ ಅಡಕೆ ಬೆಳೆಗಾರ ವಿನಯ ಹೆಗಡೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ