ಕನ್ನಡಪ್ರಭ ವಾರ್ತೆ ಮಂಡ್ಯ
ಶುಕ್ರವಾರ ಪಿ.ಇ.ಎಸ್. ಕಾಲೇಜಿನ ಕೆ.ವಿ.ಶಂಕರೇಗೌಡ ಕಾಲೇಜಿನಲ್ಲಿ ನಡೆದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೋ) ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎರಡೂ ಬೇರೆ ಬೇರೆ. ಎರಡಕ್ಕೂ ಸಹ ವ್ಯತ್ಯಾಸ ಇದೆ. ಕಾಯ್ದೆಯಲ್ಲಿ ಪ್ರತಿಯೊಂದಕ್ಕೂ ಶಿಕ್ಷೆ ಇದೆ ಎಂದು ನುಡಿದರು.
ಪೋಕ್ಸೋ ಕಾಯ್ದೆ ತಿಳಿವಳಿಕೆಯಿಲ್ಲದೆ 16 ರಿಂದ 20 ವರ್ಷದೊಳಗಿನವರು ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಮಕ್ಕಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೋ) ಕಾಯ್ದೆ- 2012 ರ ಅರಿವು ಅವಶ್ಯಕ ಎಂದರು.ಫೇಸ್ ಬುಕ್, ಇನ್ಸಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹಿತರಾಗಿ ತಮ್ಮ ವೈಯಕ್ತಿಕ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಹಣದ ಬೇಡಿಕೆ ಇಟ್ಟಾಗ ಮನೆಯಲ್ಲಿ ವಿಷಯ ತಿಳಿಸುವ ಧೈರ್ಯ ಮಾಡದೇ ಆತ್ಮಹತ್ಯೆಗೆ ಒಳಗಾಗಿರುವ ಉದಾಹರಣೆಗಳೂ ಇವೆ. ಮಕ್ಕಳು ತಮ್ಮ ಮೇಲೆ ಲೈಂಗಿಕ ಕಿರುಕುಳವಾಗುತ್ತಿದೆ ಎನ್ನಿಸಿದಾಗ ಅದನ್ನು ವಿರೋಧಿಸಬೇಕು. ಶಿಕ್ಷಕರು ಹಾಗೂ ಪೋಷಕರಿಗೆ ತಿಳಿಸಿ ರಕ್ಷಣೆ ಪಡೆದುಕೊಳ್ಳಬೇಕು. ಮನೆಯಲ್ಲಿ ವಿಷಯ ತಿಳಿಸಲು ಹೆದರಿ ನೋವನ್ನು ಅನುಭವಿಸುತ್ತಾ ಆತ್ಮಹತ್ಯೆಯಂತಹ ದಾರಿ ತುಳಿಯಬಾರದು ಎಂದು ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚು. ಇದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವ ಹೆಚ್ಚಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಈ ಹಿಂದೆ ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಪೋಕ್ಸೋ ಕಾಯ್ದೆಯಲ್ಲಿ ಅಪರಾಧಿಗಳಿಗೆ ಹೆಚ್ಚಿನ ಪ್ರಮಾಣದ ಶಿಕ್ಷೆ ಇದೆ ಎಂದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ಟಿ.ರಾಜೇಂದ್ರ, ಜನತಾ ಶಿಕ್ಷಣ ಟ್ರಸ್ಟ್ ನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಸಣ್ಣಮೊಗ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಲಕ್ಷ್ಮಿ ಪ್ರಸನ್ನ, ಎಂ.ಮಹೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ ಉಪಸ್ಥಿತರಿದ್ದರು.