ಗೃಹ ಲಕ್ಷ್ಮಿ ಯೋಜನೆ ಹಣ ಹೊಂದಿಸಲು ಈ ಕ್ರಮ । ಪಕ್ಷದ ಕಾರ್ಯಕರ್ತರು ಡಿಸಿಗೆ ದೂರು ಸಲ್ಲಿಸಬೇಕು । ಬಿಜೆಪಿ ಸದಸ್ಯತ್ವ ಅಭಿಯಾನ
ಗೃಹಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಕರೆ ನೀಡಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸದಸ್ಯತ್ವ ಅಭಿಯಾನ ಸಂಬಂಧ ನಡೆದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 50 ಸಾವಿರ ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಈ ಸಂಬಂಧ ರಾಜ್ಯ ಸರ್ಕಾರ ಸಮೀಕ್ಷೆ ಸಹ ನಡೆಸುತ್ತಿದೆ. ಸಾವಿರಾರು ಬಡ ಜನರಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮಹಿಳಾ ಮೋರ್ಚಾ ಅಥವಾ ಬೇರೆ ಯಾವುದಾದರೂ ಘಟಕದಿಂದ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಬಡವರ ಪಡಿತರ ಚೀಟಿಗಳನ್ನು ರದ್ದು ಪಡಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಬೇಕು. ಇದರಿಂದ ಬಿಪಿಎಲ್ ಕಾರ್ಡ್‌ಗಳಿಗೆ ಸ್ವಲ್ಪ ಮಟ್ಟಿನ ರಿಯಾಯ್ತಿಯಾದರೂ ಸಿಗಬಹುದು, ಬಡವರಿಗೆ ಅನುಕೂಲ ವಾಗಬಹುದು ಎಂದರು.
ಇಡೀ ದೇಶದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ನಮ್ಮ ನಮ್ಮ ಬೂತ್‌ಗಳಲ್ಲಿ ಅಭಿಯಾನಕ್ಕೆ ವೇಗ ನೀಡಬೇಕು. ಕೆಲವೆಡೆ ತುಂಬಾ ಚೆನ್ನಾಗಿ ನಡೆದಿದೆ. ಪ್ರಮುಖವಾಗಿ ಮಹಾಶಕ್ತಿ ಕೇಂದ್ರಗಳು, ಮಂಡಲಗಳಲ್ಲಿ ಇನ್ನಷ್ಟು ಚುರುಕಾಗಿ ಸದಸ್ಯತ್ವ ಅಭಿಯಾನ ನಡೆಯಬೇಕಿದೆ ಎಂದು ಕರೆ ನೀಡಿದರು.ಮಂಡಲಗಳು ಮತ್ತು ಶಕ್ತಿ ಕೇಂದ್ರದ ನಿಜವಾದ ಶಕ್ತಿ ಅರಿವಿಗೆ ಬರುವುದೇ ಸದಸ್ಯತ್ವ ನೋಂದಣಿ ಆಧಾರದ ಮೇಲೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮೋರ್ಚಾಗಳು ಜವಾಬ್ದಾರಿಯನ್ನುತೆಗೆದುಕೊಂಡು ಆಯಾ ಬೂತ್, ಶಕ್ತಿಕೇಂದ್ರ ಹಾಗೂ ಮಂಡಲಗಳ ಪ್ರಮುಖರನ್ನು ಜೋಡಿಸಿಕೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಸದಸ್ಯತ್ವ ಅಭಿಯಾನ ಕೇವಲ ಸಂಖ್ಯಾತ್ಮಕವಾಗಿಯಾದರೆ ಸಾಲದು, ಅದು, ಗುಣಾತ್ಮಕ ವಾಗಿರಬೇಕು. ಕೇವಲ ತಾಂತ್ರಿಕವಾಗಿ ಸದಸ್ಯರಾದರೆ ಸಾಕಾಗುವುದಿಲ್ಲ. ಪಕ್ಷದೊಂದಿಗೆ ನೂತನ ಸದಸ್ಯರನ್ನು ಭಾವನಾತ್ಮಕವಾಗಿ ಬೆರೆತು ಕೊಳ್ಳುವಂತೆ ಮಾಡಬೇಕು. ಅಂತವರನ್ನೇ ಸದಸ್ಯರನ್ನಾಗಿ ನೋಂದಾಯಿಸಬೇಕು. ಯಾವ ಕಾರಣಕ್ಕೆ ಸದಸ್ಯತ್ವ ತೆಗೆದುಕೊಂಡಿದ್ದೇನೆ ಎನ್ನುವುದು ಅವರಿಗೆ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ನೂತನವಾಗಿ ಸದಸ್ಯತ್ವ ಪಡೆಯುವವರಿಗೆ ಕೇಂದ್ರದ ನಾಯಕತ್ವ, ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಮನವರಿಕೆ ಮಾಡಬೇಕು ಎಂದರು.
21 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸದಸ್ಯತ್ವ ಅಭಿಯಾನ ಸಂಬಂಧ ನಡೆದ ಪ್ರಮುಖರ ಸಭೆಯಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಪುಷ್ಪರಾಜ್ ಇದ್ದರು.