ಮೇ 15ರಿಂದ ಸುಕ್ಷೇತ್ರ ಗುರುಪುರ ಶ್ರೀಗುರು ಮಹಾಕಾಲೇಶ್ವರ ಪ್ರತಿಷ್ಠಾ ಬ್ರಹ್ಮಕಲಶ

KannadaprabhaNewsNetwork | Published : May 10, 2025 1:02 AM
Follow Us

ಸಾರಾಂಶ

ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯು ಗುರುಪುರ ಫಲ್ಗುಣಿ ನದಿ ತಟದ ಗೋಳಿದಡಿಗುತ್ತಿನ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿದ್ದು, ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೇದ ಕೃಷಿಕ ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಮೇ 15ರಿಂದ 17ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಭಾರತದ ಪ್ರಪ್ರಥಮ ಹಾಗೂ ಏಕೈಕ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯು ಗುರುಪುರ ಫಲ್ಗುಣಿ ನದಿ ತಟದ ಗೋಳಿದಡಿಗುತ್ತಿನ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿದ್ದು, ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೇದ ಕೃಷಿಕ ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಮೇ 15ರಿಂದ 17ರವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ದಕ್ಷಿಣ ಮಾತ್ರವಲ್ಲ ದೇಶದಲ್ಲೇ ಇಷ್ಟು ಎತ್ತರದ ಮಹಾಕಾಲ ದೇವರ ಏಕಶಿಲಾ ವಿಗ್ರಹ ಇಲ್ಲ. 22.5 ಅಡಿ ಎತ್ತರದ ಪೀಠದ ಮೇಲೆ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಇಲ್ಲಿ ಪ್ರತಿಷ್ಠಾಪನೆಯಾಗಲಿದೆ. ವೇದೋಕ್ತ ವಿಧಿ ವಿಧಾನಗಳಿಂದ ಪ್ರತಿಷ್ಠಾ, ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.

ಕಾರ್ಯಕ್ರಮ ವಿವರ: ಮೇ 15ರಂದು ಗುರುವಾರ ಶುದ್ಧಿ ಪ್ರಕ್ರಿಯೆ, ವಾಸ್ತುಶುದ್ಧಿ ಸಹಿತ ವೇದೋಕ್ತ ವಿಧಿ ವಿಧಾನಗಳು ಆರಂಭವಾಗಲಿವೆ. ಬೆಳಗ್ಗೆ 9ರಿಂದ 2ರವರೆಗೆ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ 2.30ರಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಯಕ್ಷಗಾನ ಶ್ರೀ ಶಿವಮಹಾತ್ಮೆ, ಸಂಜೆ 5ರಿಂದ ಡಾ.ಬಿ.ವಿ. ಕುಮಾರಸ್ವಾಮಿ ಬೆಂಗಳೂರು ಅವರಿಂದ ಭಗವದ್ಗೀತಾ ಪ್ರವಚನ, ರಾತ್ರಿ 7ರಿಂದ ರಶ್ಮಿ ರವಿ ಭಟ್‌ ಎರ್ಮಾಳ್ ಮತ್ತು ಅಕ್ಷತಾ ಬೈಕಾಡಿ ಅವರಿಂದ ಭರತನಾಟ್ಯ, 8ರಿಂದ ಸನಾತನ ನಾಟ್ಯಾಲಯ ಮಂಗಳೂರು ಅವರಿಂದ ಸನಾತನ ನೃತ್ಯಾಂಜಲಿ ನಡೆಯಲಿದೆ.

ಮೇ 16ರಂದು ಸಂಜೆ 4ರಿಂದ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ವಿಗ್ರಹಕ್ಕೆ ಬ್ರಹ್ಮಕಲಶಾಭಿಷೇಕ (ಪಂಚಕಲ್ಯಾಣಯುಕ್ತ ಅಭಿಷೇಕ), ಹಾಲು, ಎಳನೀರು, ಕುಂಕುಮ, ಹರಿದ್ರೋದಕ ಮತ್ತು ಗಂಧೋದಕ ಸಹಿತವಾದ ಪಂಚ ಕಲ್ಯಾಣಯುಕ್ತ ಅಭಿಷೇಕವು ಸಮರ್ಪಣೆಗೊಳ್ಳಲಿದೆ. ಅಂದು ಬೆಳಗ್ಗೆ 9ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 2:30ರಿಂದ ಯಕ್ಷಗಾನ ತಾಳಮದ್ದಳೆ ಶಿವರಾಮ ಸಂಯೋಗ, ಸಂಜೆ 5ರಿಂದ ಡಾ.ಬಿ.ವಿ. ಕುಮಾರಸ್ವಾಮಿ ಅವರಿಂದ ಭಗವದ್ಗೀತಾ ಪ್ರವಚನ, ರಾತ್ರಿ 7ರಿಂದ ಸಂದೇಶ ನೀರುಮಾರ್ಗ ಮತ್ತು ಬಳಗದಿಂದ ಭಕ್ತಿ ರಸಮಂಜರಿ ನಡೆಯಲಿದೆ.

ಮೇ 17ರಂದು ಬೆಳಗ್ಗೆ 9ರಿಂದ ಭಜನೆ, ಮಧ್ಯಾಹ್ನ 2:30ರಿಂದ ಕಲಾರತ್ನ ಶಂ.ನಾ. ಅಡಿಗ ಕುಂಬ್ಳೆ ಅವರಿಂದ ಹರಿಕಥಾ ಪ್ರವಚನ ‘ಕೈಲಾಸ, ಸಂಜೆ 5ರಿಂದ ಡಾ.ಬಿ.ವಿ. ಕುಮಾರಸ್ವಾಮಿ ಬೆಂಗಳೂರು ಅವರಿಂದ ಭಗವದ್ಗೀತಾ ಪ್ರವಚನ, ರಾತ್ರಿ 6ರಿಂದ ಶಿವಾನುಭವ ಮಂಟಪ, ರಾತ್ರಿ 8ರಿಂದ ಅರೆಹೊಳೆ ಪ್ರತಿಷ್ಠಾನದಿಂದ ನೃತ್ಯ ವೈಭವ ನಡೆಯಲಿದೆ ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಕ್ಷೇತ್ರದ ಅಧ್ಯಕ್ಷ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು, ಗುರುಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್‌ ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಸ್ವಾಗತ ಸಮಿತಿ ಉಪಾಧ್ಯಕ್ಷ ಯಶವಂತ್ ಸಾಲ್ಯಾನ್ ಮೂಲ್ಕಿ, ಹೊರೆಕಾಣಿಕೆ ಮತ್ತು ಉಗ್ರಾಣ ಸಮಿತಿಯ ಸಂಚಾಲಕ ನಾರಾಯಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್ ಕಾವ, ಕಾರ್ಯದರ್ಶಿ ಸುನಿಲಾ ಪ್ರಭಾಕರ ಶೆಟ್ಟಿ, ರತನ್ ಶೆಟ್ಟಿ ಇದ್ದರು.

ಬೆಳ್ತಂಗಡಿ ಶಿಲ್ಪಿಯ ಕೈಚಳಕ

ಸುಕ್ಷೇತ್ರದ ಅಧ್ಯಕ್ಷ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಏಕಶಿಲೆಯ ಶ್ರೀ ಗುರುಮಹಾಕಾಲೇಶ್ವರ ಮೂರ್ತಿಯನ್ನು ಬೆಳ್ತಂಗಡಿ ಮಂಜುಶ್ರೀ ಶಿಲ್ಪಕಲಾ ಶಾಲೆಯ ವೆಂಕಟೇಶ ಆಚಾರ್ಯ ಮಾರ್ಗದರ್ಶನದಲ್ಲಿ 22 ವರ್ಷದ ಯುವಕ ಕುಮಾರ ಶರ್ಮ ಅವರು ಅತ್ಯಂತ ಸುಂದರವಾಗಿ ಕೆತ್ತಿದ್ದಾರೆ. ಜಾತಿ, ಮತ, ಲಿಂಗ ಭೇದವಿಲ್ಲದೆ ದೇವರಿಗೆ ಅಭಿಷೇಕ ಮಾಡಲು ಮುಕ್ತ ಅವಕಾಶವಿದೆ. ಬ್ರಹ್ಮಕಲಶ ಸಂಭ್ರಮಕ್ಕೆ ಮೇ 14ರ ಮಧ್ಯಾಹ್ನ 3ರಿಂದ ಮೇ 15ರ ಸಂಜೆ 6ರವರೆಗೆ ಹೊರೆಕಾಣಿಕೆ ಸಮರ್ಪಿಸಬಹುದಾಗಿದೆ ಎಂದರು.