ಯಲ್ಲಾಪುರ: ನಮ್ಮ ಆದರ್ಶಗಳು ಮಕ್ಕಳಿಗೆ ಪಾಠವಾಗುವಂತಿರಬೇಕು ಎಂದು ಸಿದ್ದಾಪುರದ ಚೈತನ್ಯ ರಾಜಾರಾಮ ಶಿರಳಗಿಯ ಬ್ರಹ್ಮಾನಂದ ಭಾರತೀ ಶ್ರೀ ನುಡಿದರು.
ಅವರು ಶುಕ್ರವಾರ ವೈಟಿಎಸ್ಎಸ್ ಮೈದಾನದಲ್ಲಿ ದಿ.ಯೋಗೀಶ ಹಿರೇಮಠ ವೇದಿಕೆಯಲ್ಲಿ ಯುಗಾದಿ ಉತ್ಸವದ ೫ನೇ ದಿನದ ಕಾರ್ಯಕ್ರಮದ ಹಿಂದೂ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಹಿಂದೂಗಳಾದ ನಾವು ಎಂದು ಗಟ್ಟಿಯಾಗಿ "ಸನಾತನ ಧರ್ಮದ ಆಚರಣೆ ನಡೆಸುವವರು " ಎಂದು ಹೇಳುವ ಧೈರ್ಯ ನಮಗೆ ಬಂದ ದಿನ ನಿಜವಾದ ಸ್ವಾತಂತ್ರ್ಯ ಬಂದಂತೆ. ಶ್ರೇಷ್ಠತೆ ಉಳಿಸಿಕೊಂಡು ಬಂದ ನಮ್ಮ ಪರಂಪರೆ ಮಕ್ಕಳಿಗೆ ಮೌಲ್ಯ, ಗುರು ಹಿರಿಯರ, ತಂದೆ- ತಾಯಿಗಳ ಆದರ್ಶ ಪಾಲಿಸುವ ಸಂಸ್ಕಾರ ನೀಡಬೇಕು ಎಂದರು.ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದುತ್ವದ ಮೂಲ ಚಿಂತನೆಯಿಂದ ನಾವೆಲ್ಲ ಒಗ್ಗಟ್ಟಾಗಬೇಕಿದೆ. ನಮಗೆ ಧರ್ಮದ ದಾರಿಯಲ್ಲಿ ಸಾಗುವ ಮನಸ್ಥಿತಿಯವರು ಬೇಕೇ ವಿನಃ ಅಧರ್ಮದಲ್ಲಿ ನಡೆಯುವ ಸೈನಿಕರ ಹಾಗೆ ಕೆಲಸ ಮಾಡುವವರು ಬೇಡ. ಹಿಂದೂ ಧರ್ಮ ಜಗತ್ತಿನಲ್ಲಿ ಶ್ರೇಷ್ಠತೆ ಗಳಿಸಿದೆ. ಇಂತಹ ಶ್ರೇಷ್ಠತೆ ಇನ್ನಾವ ಧರ್ಮದಲ್ಲೂ ಇಲ್ಲ. ನಮ್ಮ ಮಕ್ಕಳಿಗೆ ಧರ್ಮದ ಶಿಕ್ಷಣ ನೀಡಿಲ್ಲ. ಸಂಸ್ಕೃತಿಯ ಮೌಲ್ಯ ನೀಡಲಾಗುತ್ತಿದೆ. ವೇದ, ಉಪನಿಷತ್ತುಗಳನ್ನು ನಮ್ಮ ಋಷಿಮುನಿಗಳು ನೀಡಿದ್ದಾರೆ. ಹಾಗಾಗಿಯೇ ನಮ್ಮ ಸಮಾತನ ಧರ್ಮದ ಮೌಲ್ಯ ಸಾವಿರಾರು ವರ್ಷಗಳಿಂದ ನೂರಾರು ವಿದೇಶಿ ಆಕ್ರಮಣಕಾರರಿಂದಲೂ ನಾಶ ಮಾಡಲು ಮುಂದಾದರೂ ಇಂದಿಗೂ ಗಟ್ಟಿಯಾಗಿರಲು ಕಾರಣವಾಗಿದೆ. ನಮ್ಮಲ್ಲಿರುವ ಅನೇಕ ಮುಸ್ಲಿಮರು ಹೊರಗಿನವರಲ್ಲ, ಈ ದೇಶದವರೇ. ರಾಜಕಾರಣಿಗಳು ಜಾತಿಗಣತಿ ಬಗ್ಗೆ ಪದೇಪದೇ ಮಾತನಾಡುವುದು ಏಕೆಂದರೆ ಹಿಂದೂಗಳನ್ನು ಒಡೆದು ಹಾಕುವ ಕುತಂತ್ರ ಅಲ್ಲಿ ಅಡಗಿದೆ ಎಂದರು.
ಈ ದೇಶದಲ್ಲಿ ಮುಸ್ಲಿಮರಷ್ಟೇ ಅಲ್ಪಸಂಖ್ಯಾತರಲ್ಲ. ೧೯೯೫ರಲ್ಲಿ ಕಾಂಗ್ರೆಸ್ ಪಕ್ಷ ವಕ್ಫ್ ಕಾಯಿದೆ ಮೂಲಕ ಮತ ಗಳಿಕೆಗಾಗಿ ಜಾರಿ ತಂದ ಕಾನೂನಿನಿಂದ ಅಧಿಕೃತ ಅಂಕಿ-ಅಂಶಗಳ ಮಾಹಿತಿಯಂತೆ ಇಂದು ಲಕ್ಷಾಂತರ ಎಕರೆ ಜಮೀನು ವಕ್ಫ್ ಸಮಿತಿಯದ್ದಾಗಿದೆ. ಹೀಗೆಯೇ ಮುಂದುವರೆದರೆ ಸರ್ಕಾರಿ ಆಸ್ತಿ ಸೇರಿ ಇಡೀ ದೇಶದ ಆಸ್ತಿ ವಕ್ಫ್‌ಗೆ ಸೇರಬಹುದು. ಈ ಹಿನ್ನೆಲೆಯಲ್ಲಿ ಮೋದಿ ನಾಯಕತ್ವದ ಸರ್ಕಾರ ತಿದ್ದುಪಡಿ ತಂದು ಹೊಸ ಭಾಷ್ಯ ಬರೆದಿದೆ. ೩೭೦ನೇ ವಿಧಿಯಿಂದ ಜಮ್ಮುಕಾಶ್ಮೀರದಲ್ಲಿ ಹಿಂದೂಗಳು ಬದುಕುವ ಸ್ಥಿತಿ ಬಂದಿದೆ. ಅವರಿಗಾಗಿ ಪಾಕಿಸ್ತಾನ, ಬಾಂಗ್ಲಾ ನೀಡಿದ್ದರೂ ಶೇ.೯ರಷ್ಟು ಇದ್ದ ಮುಸ್ಲಿಮರ ಜನಸಂಖ್ಯೆ ಶೇ.೧೯ರಷ್ಟಾಗಿದೆ. ಮೂಲ ಹಿಂದೂಗಳನ್ನು ವಾಪಸ್ ತರಬೇಕು ಎಂದರು.ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಗಣಪತಿ ವೆಂಕಟರಮಣ ಧೂಳಿ, ನಾಗರಾಜ ನಾಯ್ಕ ಶುಭ ಹಾರೈಸಿದರು.ಉತ್ಸವದ ರೂವಾರಿಯಾಗಿದ್ದ ದಿ.ದಯಾ ಕಾರಂತ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಸಲ್ಲಿಸಲಾಯಿತು. ಮಾತೃಮಂಡಳಿ ಮಾತೆಯರು ಭಗವದ್ಗೀತೆ ಪಠಿಸಿದರು. ಸಂಚಾಲಕ ಪ್ರದೀಪ ಯಲ್ಲಾಪುರಕರ ಪ್ರಾಸ್ತಾವಿಕ ಮಾತನಾಡಿದರು. ರಾಮಕೃಷ್ಣ ಕವಡಿಕೆರೆ ಸ್ವಾಗತಿಸಿದರು. ಚಂದ್ರಹಾಸ ನಾಯ್ಕ ನಿರ್ವಹಿಸಿದರು. ಸುಜಲ್ ಧುರಂದರ ಪ್ರಾರ್ಥಿಸಿದರು. ಮಂಜುನಾಥ ಹಿರೆಮಠ ವಂದಿಸಿದರು. ಕೌಸ್ತುಭ ಭಟ್ಟರ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.