ಗದಗ: ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಿರುವ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ನೂರಾರು ಸ್ಲಂ ನಿವಾಸಿಗಳು ಇಲ್ಲಿಯ ಸ್ಲಂ ಬೋರ್ಡ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳಲ್ಲಿ ವಸತಿ ಕಲ್ಪಿಸಲು ಸರ್ಕಾರದಿಂದ 863 ಮನೆಗಳನ್ನು ಮಂಜೂರು ಮಾಡಿ 3 ವರ್ಷಗಳಾದರು ಸಹ ಈವರೆಗೊ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸದೇ ಫಲಾನುಭವಿಗಳ ಹೆಸರಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ಹಣವನ್ನು ಲೂಟಿ ಮಾಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನೂರಾರು ಮನೆಗಳನ್ನು ಕಟ್ಟಿದ್ದೇವೆ ಎಂದು ಖೊಟ್ಟಿ ದಾಖಲೆಗಳನ್ನು ತಯಾರಿಸಿ ನೂರಾರು ಕೋಟಿಗಳ ಭ್ರಷ್ಟಾಚಾರ ನಡೆಸಿರುವ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ ಮಾತನಾಡಿ, ಗದಗ-ಬೆಟಗೇರಿ ನಗರದ ಸ್ಲಂ ಪ್ರದೇಶಗಳ ಪ್ರಮುಖ ಸೌಲಭ್ಯಗಳಿಗೆ ಆಗ್ರಹಿಸಿ ಹಾಗೂ ಸ್ಲಂ ನಿವಾಸಿಗಳಿಗೆ ವಸತಿ, ಹಕ್ಕುಪತ್ರ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆ ಮತ್ತು ಇನ್ನು ಹಲವಾರು ಹಕ್ಕೋತ್ತಾಯಗಳಿಗೆ ಒತ್ತಾಯಿಸಿ ಅನೇಕ ಬಾರಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಅಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸುತ್ತ ಬಂದಿದ್ದೇವೆ. ಆದರೆ ಸ್ಲಂ ಬೋರ್ಡ್ ಅಧಿಕಾರಿಗಳು ಮಾತ್ರ ಸ್ಲಂ ಜನರ ಸಮಸ್ಯಗಳಿಗೆ ಸ್ಪಂದಿಸದೇ ಜನರ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ನಾವು ಖಂಡಿಸುತ್ತೇವೆ. ವಸತಿ ಯೋಜನೆಯಲ್ಲಿ ಅಧಿಕಾರಿಗಳ ಸಹಕಾರದಿಂದ ಗುತ್ತಿಗೆದಾರರು ಯಾವುದೇ ಭಯವಿಲ್ಲದೇ ಸ್ಲಂ ಜನರ ಪರವಾಗಿರುವ ವಸತಿ ಯೋಜನೆಯಲ್ಲಿ ಪ್ರತಿನಿತ್ಯ ಭ್ರಷ್ಟಾಚಾರ, ದರೋಡೆ, ಬಡಜನರ ಅನುದಾವನ್ನು ಲೂಟಿ ಮಾಡುತ್ತಿದ್ದಾರೆ, ವಸತಿ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಮಾಹಿತಿ ಹಕ್ಕು ಅಡಿಯಲ್ಲಿ ದಾಖಲೆಗಳನ್ನು ಕೇಳಿ 4 ತಿಂಗಳಾದರೂ ಸಹ ಸರಿಯಾದ ಮಾಹಿತಿಯನ್ನು ನೀಡದೇ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಗುತ್ತಿಗೆದಾರರ ಜೊತೆಗೆ ಸೇರಿ ನಡೆಸಿರುವ ಭ್ರಷ್ಟಾಚಾರ ಮುಚ್ಚಿ ಹಾಕುವ ಕುತಂತ್ರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಸ್ಲಂ ಬೋರ್ಡ್ ಅಧಿಕಾರಿಗಳು ಸ್ಲಂ ಜನರಿಗೆ ಮೋಸ ಮಾಡಿ ಕೋಟ್ಯಂತರ ಹಣದ ದುರ್ಬಳಕೆ ಮಾಡಿಕೊಂಡಿರುವ ಗುತ್ತಿಗೆದಾರರ ಕಾಮಗಾರಿಯ ಯಾವುದೇ ಬಾಕಿ ಬಿಲ್ ನೀಡಬಾರದು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರರ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಒಂದು ವೇಳೆ ಸ್ಲಂ ಜನರ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷಿಸಿದಲ್ಲಿ ಕಚೇರಿ ಮುಂದೆ ಗದಗ ಜಿಲ್ಲೆಯ ಸಾವಿರಾರು ಸ್ಲಂ ನಿವಾಸಿಗಳೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸಮಿತಿ ಪದಾಧಿಕಾರಿಗಳಾದ ಇಬ್ರಾಹಿಂ ಮುಲ್ಲಾ, ಮೆಹರುನಿಸಾ ಢಾಲಾಯತ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜಾಸಾಬ ಇಸ್ಮಾಯಿಲನವರ, ಮಂಜುನಾಥ ಶ್ರೀಗಿರಿ, ಮಲೇಶಪ್ಪ ಕಲಾಲ, ಮುನ್ನಾ ಅಗಡಿ, ಮಕ್ತುಮಸಾಬ ಮುಲ್ಲಾನವರ, ಸಲೀಮ ಹರಿಹರ, ದಾದು ಗೋಸಾವಿ, ಬಾಷಾಸಾಬ ಡಂಬಳ, ಮೈಮುನ ಬೈರಕದಾರ, ವೆಂಕಟೇಶ ಬಿಂಕದಕಟ್ಟಿ ಹಾಗೂ ನೂರಾರು ಸ್ಲಂ ನಿವಾಸಿಗಳು ಇದ್ದರು.