ವಿಶ್ವದ ಬಗೆಗಿನ ಜ್ಞಾನದ ಸಮೂಹವೇ ವಿಜ್ಞಾನ: ಲತಾಮಣಿ ಟಿ.ಎಂ.

KannadaprabhaNewsNetwork | Published : Apr 6, 2025 1:51 AM

ಸಾರಾಂಶ

ವಿಜ್ಞಾನವು ವ್ಯವಸ್ಥಿತ ಪ್ರಕ್ರಿಯೆಯಾಗಿದ್ದು, ವಿವಿಧ ಸಿದ್ಧಾಂತ, ಸೂತ್ರ, ಆಲೋಚನೆಗಳನ್ನು ತಿಳಿಸುತ್ತದೆ.

ಹಾವೇರಿ: ವಿಜ್ಞಾನವು ಬ್ರಹ್ಮಾಂಡದ ಬಗ್ಗೆ, ಪರಿವೀಕ್ಷಣೆಯ ಕುರಿತು ವಿವರಣೆ, ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ವ್ಯವಸ್ಥಿತ ಯೋಜನೆಯಾಗಿದೆ ಎಂದು ಜಿಲ್ಲಾ ಉಪಸಮನ್ವಯ ಅಧಿಕಾರಿ ಲತಾಮಣಿ ಟಿ.ಎಂ. ತಿಳಿಸಿದರು.ಸ್ಥಳೀಯ ತಾಜ್‌ನಗರದ ಗೋಲ್ಡನ್ ಪ್ಯಾಲೇಸ್‌ನಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಸ್ಯಾಮ್ಸಂಗ್ ಸಂಚಾರಿ ವಿಜ್ಞಾನ ಪ್ರಯೋಗಾಲಯ ಹಾವೇರಿ, ಸಮಗ್ರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಉಚಿತ ವಿಜ್ಞಾನ ಮತ್ತು ತಂತ್ರಜ್ಞಾನ ಆಧರಿತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವನಿಂದ ತಿಳಿಯುವ ವಿಶ್ವದ ಬಗೆಗಿನ ಜ್ಞಾನದ ಸಮೂಹವೇ ವಿಜ್ಞಾನ ಎಂದರು.ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವ್ಯವಸ್ಥಾಪಕಿ ಡಾ. ಬಬಿತಾ ಎಂ.ಟಿ. ಮಾತನಾಡಿ, ವಿಜ್ಞಾನವು ವ್ಯವಸ್ಥಿತ ಪ್ರಕ್ರಿಯೆಯಾಗಿದ್ದು, ವಿವಿಧ ಸಿದ್ಧಾಂತ, ಸೂತ್ರ, ಆಲೋಚನೆಗಳನ್ನು ತಿಳಿಸುತ್ತದೆ. ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಅಧ್ಯಯನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ದೈನಂದಿನ ಜೀವನದಲ್ಲಿ ವಿಜ್ಞಾನವು ಅತಿ ಅಗತ್ಯವಾಗಿದೆ. ನಾವು ಬದುಕುವ ಜೀವನದಲ್ಲಿ, ಕೆಲಸ ಕಾರ್ಯಗಳಲ್ಲಿ ವಿಜ್ಞಾನವಿದೆ ಎಂದ ಅವರು, ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಒಟ್ಟು ಐವತ್ತು ಸರ್ಕಾರಿ ಶಾಲೆಯ ಮಕ್ಕಳು ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಸಹಾಯಕ ಸಮನ್ವಯ ಅಧಿಕಾರಿ ಎಸ್.ವಿ. ಅಜಗೊಂಡ್ರ, ಜಿಲ್ಲಾ ವಿಷಯ ಪರಿವೀಕ್ಷಕರಾದ ದೇವೇಂದ್ರಪ್ಪ ಬಸಮ್ಮನವರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಇಸಿಒ ಎಸ್.ಆರ್. ಹಿರೇಮಠ, ಕ್ವಿಜ್ ಮಾಸ್ಟರ್ ಶಿವಾನಂದ ಛಲವಾದಿ, ಅಗಸ್ತ್ಯ ಬೆಳಗಾವಿ ಮುಖ್ಯಸ್ಥರಾದ ಮೈಲಾರೆಪ್ಪ ಮಡಿವಾಳರ, ಮಾರ್ಗದರ್ಶಕರಾದ ವಿ.ಎಸ್. ಫಕ್ಕೀರಗೌಡ್ರ, ಸಂತೋಷ ಕಾರಟಗಿ, ರುದ್ರೇಶ ಹಳ್ಳಿಕೇರಿ ಇತರರು ಇದ್ದರು. ನಾಗರತ್ನ ಹಾಗೂ ಚೆನ್ನಮ್ಮ ಪ್ರಾರ್ಥಿಸಿದರು. ಬೆಳಗಾವಿ ವಿಭಾಗದ ಮುಖ್ಯಸ್ಥ ಬಸವರಾಜ ತಡಹಾಳ ನಿರೂಪಿಸಿದರು.ಮೈಲಾರಲಿಂಗೇಶ್ವರ ದೊಡ್ಡಾಟ ಪ್ರದರ್ಶನ ಇಂದು

ಹಾನಗಲ್ಲ: ತಾಲೂಕಿನ ಆಡೂರಿನಲ್ಲಿ ಏ. 6ರಂದು ಮೈಲಾರಲಿಂಗೇಶ್ವರ ದೊಡ್ಡಾಟ ಪ್ರದರ್ಶನಗೊಳ್ಳಲಿದೆ.

ಭಾನುವಾರ ರಾತ್ರಿ 9.30ಕ್ಕೆ ಶ್ರೀ ಮಾಲತೇಶ ದೇವಸ್ಥಾನ ಟ್ರಸ್ಟ್ ಕಮಿಟಿ, ಗ್ರಾಮಸ್ಥರ ಸಹಕಾರದೊಂದಿಗೆ ಕಲಕೇರಿಯ ಶ್ರೀ ಆದಿಶಕ್ತಿ ದೊಡ್ಡಾಟ ಮಂಡಳಿ ದೊಡ್ಡಾಟ ಪ್ರದರ್ಶನ ಮಾಡಲಿದೆ. ಹೋತನಹಳ್ಳಿಯ ಶಂಕರಾನಂದ ಸ್ವಾಮಿಗಳು, ಹೇರೂರಿನ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು ಸಮ್ಮುಖ ವಹಿಸುವರು. ನಿವೃತ್ತ ಎಂಜಿನಿಯರ್ ಅರವಿಂದ ಕುಲಕರ್ಣಿ, ಹನುಮಗೌಡ್ರ ಗೊರೆಗೌಡ್ರ, ಮರಿಗೌಡ ಕೆ. ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದರೊಂದಿಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಕಾರ್ಯದರ್ಶಿ ನಿಂಗಪ್ಪ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article