ಕನ್ನಡಪ್ರಭ ವಾರ್ತೆ ಬಂಟ್ವಾಳ
ಹೆದ್ದಾರಿಗೆ ಸಂಪರ್ಕಿಸುವ ಏರು ರಸ್ತೆಯಲ್ಲಿ ಒಂದು ಅಡಿಗೂ ಆಳದ ಬೃಹತ್ ಗುಂಡಿಗಳಿದ್ದು, ಸಣ್ಣ ಕಾರುಗಳ ತಳ ಭಾಗಕ್ಕೆ ತಾಗಿ ನಿತ್ಯವೂ ವಾಹನಗಳಿಗೆ ಹಾನಿಯಾಗುತ್ತಿವೆ. ಇದರಿಂದ ವಾಹನಗಳು ಜಖಂಗೊಂಡ ಉದಾಹರಣೆಗಳು ಕೂಡ ಸಾಕಷ್ಟಿದೆ. ಈ ಭಾಗದಲ್ಲಿ ವಾಹನ ಸಂಚರಿಸುವ ಸಂದರ್ಭ ಗುಡ್ಡ ಹತ್ತುವ ಅನುಭವವಾಗಿದ್ದು, ಕಾರುಗಳ ಚಕ್ರಗಳು ಸಂಪೂರ್ಣ ಹೊಂಡದಲ್ಲಿ ಮುಳುಗಿ ಹೋಗುತ್ತದೆ.
ಸ್ಥಳೀಯ ವಾಹನಗಳು ನಿತ್ಯವೂ ಮೂರು ನಾಲ್ಕು ಬಾರಿ ಸಂಚರಿಸುವ ಸಂದರ್ಭ ಟೋಲ್ ಕಟ್ಟಿ ಸಾಗುವುದು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ವೀಸ್ ರಸ್ತೆಗಳಿದ್ದು, ಆದರೆ ಈಗ ಇಂತಹ ರಸ್ತೆಯಲ್ಲಿ ಸಾಗುವುದಕ್ಕಿಂತ ಟೋಲ್ ಪಾವತಿಸಿ ಹೋಗುವುದೇ ಉತ್ತಮ ಎಂಬ ಸ್ಥಿತಿ ಇದೆ ಎಂಬ ಮಾತುಗಳು ಸ್ಥಳೀಯ ವಾಹನ ಮಾಲಕರದ್ದು ಆಗಿದೆ.ವಾಹನಗಳು ಟೋಲ್ ತಪ್ಪಿಸಿಕೊಂಡು ಸರ್ವೀಸ್ ರಸ್ತೆಯಲ್ಲಿ ಸಾಗುತ್ತವೆ ಎಂಬ ಕಾರಣಕ್ಕೆ ಈ ಹೊಂಡಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಗೇ ಬಿಟ್ಟಿರುವ ಸಾಧ್ಯತೆ ಇದೆಯಾದರೂ ಇಲ್ಲಿನ ಸ್ಥಳೀಯ ವಾಹನ ಸವಾರರಿಗೆ ತೊಂದರೆಯಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ಸರ್ವೀಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಶಾಶ್ವತ ಪರಿಹಾರ ನೀಡುವಂತೆ ದ.ಕ.ಜಿಲ್ಲಾಧಿಕಾರಿ ಎನ್‌ಎಚ್‌ಎಐಗೆ ಸೂಚನೆ ನೀಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.