ಶ್ರೀಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ

KannadaprabhaNewsNetwork |  
Published : Feb 09, 2026, 01:45 AM IST
8ಕೆಎಂಎನ್ ಡಿ15,16 | Kannada Prabha

ಸಾರಾಂಶ

ನಾಗಮಂಗಲ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯ ಬ್ರಹ್ಮರಥೋತ್ಸವ ಜರುಗಿತು. ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಸಮಿರ್ಪಿಸುವ ಮೂಲಕ ಕಳೆದ ಹತ್ತು ದಿನಗಳ ಅದ್ಧೂರಿ ಜಾತ್ರಾ ಮಹೋತ್ಸವವನ್ನು ಸಂಪನ್ನಗೊಳಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯ ಬ್ರಹ್ಮರಥೋತ್ಸವ ಜರುಗಿತು.

ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಸಮಿರ್ಪಿಸುವ ಮೂಲಕ ಕಳೆದ ಹತ್ತು ದಿನಗಳ ಅದ್ಧೂರಿ ಜಾತ್ರಾ ಮಹೋತ್ಸವವನ್ನು ಸಂಪನ್ನಗೊಳಿಸಿದರು.

ಇದಕ್ಕೂ ಮುನ್ನ ಕಟ್ಟೆಮೆನೆ ಎಂದೇ ಖ್ಯಾತಿಯಾಗಿರುವ ಚಿಣ್ಯ ಗ್ರಾಮದ ಮೂಲ ದೇವಸ್ಥಾನದಿಂದ ಕರೆತಂದಿದ್ದ ಸರ್ವಾಲಂಕೃತ ಸೋಮನಳಮ್ಮದೇವಿ ಉತ್ಸವ ಮೂರ್ತಿಗೆ ಕ್ಷೇತ್ರದ ಅಮ್ಮನವರ ದೇವಾಲಯ ಹಾಗೂ ಶ್ರೀಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಂಗಳವಾದ್ಯದೊಂದಿಗೆ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಿ ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿದ್ದ ರಥದಲ್ಲಿ ಇರಿಸಲಾಯಿತು.

ಮಧ್ಯಾಹ್ನ 2.45ರ ವೇಳೆಗೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಮತ್ತು ತಹಸೀಲ್ದಾರ್ ಜಿ.ಆದರ್ಶ ಅವರು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಬ್ರಹ್ಮ ರಥೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ನೆರೆದಿದ್ದ ಸಹಸ್ರಾರು ಭಕ್ತರು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದ ರಥಕ್ಕೆ ಹಣ್ಣು, ಜವನ ಎಸೆದು ಭಕ್ತಿ ಭಾವ ಸಮರ್ಪಿಸಿ ದೇವಿಯ ದರ್ಶನಾಶೀರ್ವಾದ ಪಡೆದುಕೊಂಡರು.

ರಥೋತ್ಸವದ ಬಳಿಕ ದೇವಸ್ಥಾನದಲ್ಲಿ ಸಂಜೆವರೆಗೂ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೇವಿಯ ಮೂಲ ಸ್ಥಾನ ಚಿಣ್ಯ ಸೇರಿದಂತೆ ಹೊಣಕೆರೆ, ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಜಿಲ್ಲೆ ಮತ್ತು ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹ್ರಾರು ಭಕ್ತರು ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾದರು.

ರಥೋತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೆ ತುರುವೇಕೆರೆಯ ಗೀತಾ ಮತ್ತು ರಾಜಣ್ಣ ದಂಪತಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಇದಲ್ಲದೇ, ಕ್ಷೇತ್ರದ ಹಲವೆಡೆ ಭಕ್ತರಿಗೆ ಪುಳಿಯೋಗರೆ, ಮೊಸರನ್ನ, ಕಡಲೆಕಾಳು ಉಸ್ಲಿ ವಿತರಿಸಲಾಯಿತು.

ಸನ್ನಿಧಿಯ ಶ್ರೀಕೋಟೆಮಾರಮ್ಮದೇವಿ ಮತ್ತು ಶ್ರೀಆಂಜನೇಯಸ್ವಾಮಿ, ಶ್ರೀದೊಡ್ಡಮ್ಮ ಹಾಗೂ ಶ್ರೀಚಿಕ್ಕಮ್ಮದೇವಿ ದೇವಾಲಯಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ರಥೋತ್ಸವದ ಬಳಿಕ ವಡ್ಡರಹಳ್ಳಿ ಗ್ರಾಮಸ್ಥರಿಂದ ವಸಂತೋತ್ಸವ ನಡೆಯಿತು. ಅವಭೃತಾಮೃತ ಮತ್ತು ಅಶ್ವಾರೋಹಣ ಸೇವೆ ನಂತರ ದೇವಿಯನ್ನು ಕಟ್ಟೆಮನೆ ಚಿಣ್ಯದ ಮೂಲಸ್ಥಾನಕ್ಕೆ ಕರೆದೊಯ್ಯಲಾಯಿತು. ಆ ಮೂಲಕ ಕಳೆದ ಹತ್ತು ದಿನಗಳಿಂದ ನಡೆದ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.

ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಹಿನ್ನೆಲೆಯಲ್ಲಿ ಸಿಪಿಐ ಹೇಮಂತ್‌ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಬಿ.ರಾಜೇಂದ್ರ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಕಾಮಣ್ಣವರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳಾದ ಚಿಣ್ಯ ಪ್ರಕಾಶ್, ಹೊಣಕೆರೆ ಬಲರಾಮೇಗೌಡ, ಅಲ್ಪಹಳ್ಳಿ ನಾಗೇಗೌಡ, ಗಂಗನಹಳ್ಳಿ ಧನಂಜಯ, ವಡ್ಡರಹಳ್ಳಿ ಸಣ್ಣೇಗೌಡ, ಸೋಮನಹಳ್ಳಿ ತುಳಸಿರಾಮ್ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ದೇವಿಯ ಪೂಜೆ ಮತ್ತು ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಭಕ್ತರಿಗೆ ಅನುವು ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’