ಬೆಂಗಳೂರಿನ ಟೌನ್‌ಹಾಲ್‍ನಲ್ಲಿ ನಾಳೆ ಬ್ರಹ್ಮಶ್ರೀ ರಾಜ್ಯ ಮಹಿಳಾ ಸಮಾವೇಶ

KannadaprabhaNewsNetwork | Published : Sep 28, 2024 1:32 AM

ಸಾರಾಂಶ

ರಾಜ್ಯಮಟ್ಟದ ಶ್ರೀನಾರಾಯಣ ಗುರು ಮಹಿಳಾ ಸಮಾವೇಶವನ್ನು ಸೆ.29ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಟೌನ್‌ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೇಖನ ನಾಯ್ಕ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘದ ವತಿಯಿಂದ ಶ್ರೀನಾರಾಯಣ ಗುರು ಜಯತ್ಯೋತ್ಸವ ಅಂಗವಾಗಿ ಪರಿವರ್ತನಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಶ್ರೀನಾರಾಯಣ ಗುರು ಮಹಿಳಾ ಸಮಾವೇಶವನ್ನು ಸೆ.29ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಟೌನ್‌ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೇಖನ ನಾಯ್ಕ್‌ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಕೆಲಸದ ನಿಮಿತ್ತ ಆಗಮಿಸುವ ಮಹಿಳೆಯರಿಗೆ ಭದ್ರತೆ ನೀಡಲು ಸಮಾಜದ ದಾನಿಗಳ ಸಹಕಾರದೊಂದಿಗೆ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಯೋಜನೆಗೆ ಹಾಗೂ ಸಮಾಜದ ಮಹಿಳಾ ಸಬಲೀಕರಣಕ್ಕಾಗಿ ಆಚರದ ಶರಣೆ ಅಕ್ಕಮ್ಮ ಟ್ರಸ್ಟ್‌ಗೆ ಚಾಲನೆ ನೀಡಲಾಗುವುದು ಎಂದರು.

ರಾಜ್ಯ ಮಟ್ಟದ ಈಡಿಗ, ಬಿಲ್ಲವ, ನಾಮಧಾರಿ, ದೀವರು, ತೀಯಾ ಸಮಾಜದ 25 ಒಳಪಂಗಡಗಳ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲವನ್ನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಸಮಾರಂಭದ ಸಾನಿಧ್ಯವನ್ನು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಗೌರಿಗದ್ದೆ ಯ ಅವಧೂತ ಆಶ್ರಮದ ಶ್ರೀ ವಿಜಯ ಗುರೂಜೀ, ಶ್ರೀಕ್ಷೇತ್ರ ಸಿಗಂಧೂರಿನ ಧರ್ಮಾಧಿಕಾರಿ ಶ್ರೀ ಡಾ.ರಾಮಪ್ಪ ವಹಿಸಲಿದ್ದು, ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್‍ಕುಮಾರ್ ಉದ್ಘಾಟಿಸುವರು ಎಂದು ತಿಳಿಸಿದರು.

ಶ್ರೀನಾರಾಯಣ ಗುರುಗಳ ಭಾವಚಿತ್ರಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಪುಷ್ಪಾರ್ಚನೆ ಮಾಡಲಿದ್ದು, ಆಚರದ ಶರಣೆ ಅಕ್ಕಮ್ಮ ಟ್ರಸ್ಟ್‌ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧುಬಂಗಾರಪ್ಪ ಹಾಗೂ ವರ್ಕಿಂಗ್ ವುಮೆನ್ಸ್ ಹಾಸ್ಟಲ್ ಯೋಜನೆಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯ್ಕ, ಜಗದೈವ ಗುತ್ತೆದಾರ್, ಹೆಚ್.ಆರ್.ಗವಿಯಪ್ಪ ಧಣಿ, ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ಸುನೀಲ್ ಬಿ.ನಾಯ್ಕ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಆಗಮಿಸಲಿದ್ದಾರೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ.ನಾಯ್ಕ ಮಾತನಾಡಿ, ಸಮಾವೇಶಕ್ಕೆ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ರೇಣುಕಾ, ಜಯಲಕ್ಷ್ಮೀ, ಪ್ರತಿಮಾ, ಸವಿತಾ, ವಿಶ್ವನಾಥ್, ಲೋಕೇಶ್, ಬಸವರಾಜ್ ಇನ್ನಿತರರು ಉಪಸ್ಥಿತರಿದ್ದರು.

Share this article