ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನೆಯನ್ನು ನಿರ್ಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು : ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನೆಯನ್ನು ನಿರ್ಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿರುವ ಕುದುರೆಗಳಲ್ಲಿ ಕೆಲವು ದಿನಗಳ ಹಿಂದೆ ಸೋಂಕು ರೋಗ ಗ್ಲ್ಯಾಂಡರ್ಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮದಂತೆ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಗ್ಲ್ಯಾಂಡರ್ಸ್ ಕೇಂದ್ರೀಕೃತ ಸ್ಥಳ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಜಾನುವಾರು ರೋಗಗಳ ನಿರ್ವಹಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ಬೆಂಗಳೂರು ಟರ್ಫ್ ಕ್ಲಬ್ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಮನೋರಂಜನೆ, ಮೆರವಣಿಗೆ, ಶುಭಕಾರ್ಯಗಳು ಸೇರಿದಂತೆ ಯಾವುದೇ ಉದ್ದೇಶಗಳಿಗೆ ಕುದುರೆ, ಕತ್ತೆ, ಹೇಸರಕತ್ತೆಗಳನ್ನು ಓಡಾಡಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಗ್ಲ್ಯಾಂಡರ್ಸ್ ರೋಗವೂ ಅತ್ಯಂತ ಸಾಂಕ್ರಾಮಿಕ ರೋಗವಾಗಿದ್ದು, ಕುದುರೆಗಳು ರೋಗಪೀಡಿತವಾದರೆ ಗುಣವಾಗುವುದಿಲ್ಲ. ಕುದುರೆ ಜಾತಿಯ ಪ್ರಾಣಿಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಅಲ್ಲದೇ, ಈ ಕುದುರೆಗಳ ಸಂಪರ್ಕದಿಂದ ಮನುಷ್ಯನಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಅತ್ಯಂತ ವೇಗವಾಗಿ ಹಬ್ಬುವ ಕಾರಣ ಟರ್ಫ್ ಕ್ಲಬ್‌ನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ರೇಸ್ ಮುಂದುವರಿಕೆ:
ಕುದುರೆಗಳಿಗೆ ಗ್ಲ್ಯಾಂಡರ್ಸ್ ರೋಗ ಕಾಣಿಸಿಕೊಂಡಿದ್ದರೂ ಎಂದಿನಂತೆ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್ ಮುಂದುವರೆದಿದೆ. ಗುರುವಾರವೂ ಕಲ್ಕತ್ತ ರೇಸ್ ನಡೆಯಿತು ಎಂದು ಕ್ಲಬ್‌ನ ಸಿಬ್ಬಂದಿ ತಿಳಿಸಿದರು.
ಗ್ಲ್ಯಾಂಡರ್ಸ್ ರೋಗ ನಿಯಂತ್ರಣ ಮತ್ತು ಹಬ್ಬದಂತೆ ಮುಂಜಾಗ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪಶು ಇಲಾಖೆ ಮತ್ತು ಟರ್ಫ್ ಕ್ಲಬ್‌ಗೆ ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ಗಮನಾರ್ಹ ಅಪಾಯ ಕಂಡು ಬಂದಿಲ್ಲ. ಮನುಷ್ಯರಿಗೆ ರೋಗ ಹಬ್ಬದಂತೆ ವಿಶೇಷ ನಿಗಾ ವಹಿಸಲಾಗಿದೆ.
- ಜಿ. ಜಗದೀಶ್, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ
ಮನುಷ್ಯರಲ್ಲಿ ಮುನ್ನೆಚ್ಚರಿಕೆ ಕ್ರಮಗಳು
- ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಮನುಷ್ಯರು ದೂರ ಇರಬೇಕು.
- ಸೋಂಕಿತ ಪ್ರಾಣಿಗಳಿರುವ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡುವುದು.
- ಸೋಂಕಿತ ಪ್ರಾಣಿಗಳನ್ನು ಕಟ್ಟಿರುವ, ಓಡಾಡಿರುವ ಸ್ಥಳಗಳನ್ನು ಸ್ಯಾನಿಟೈಜ್ ಮಾಡಬೇಕು.
- ಪಶು ವೈದ್ಯರಿಂದ ಸೋಂಕು ಪೀಡಿತ ಪ್ರದೇಶದ ಮೇಲೆ ನಿಗಾ.
- ಆರೋಗ್ಯವಂತ ಕುದುರೆಗಳನ್ನು ಸೋಂಕಿತ ಕುದುರೆಗಳಿಂದ ಪ್ರತ್ಯೇಕಗೊಳಿಸಬೇಕು.
- ಸೋಂಕು ಪೀಡಿತ ಪ್ರದೇಶದಲ್ಲಿ ಆರೋಗ್ಯವಂತ ಕುದುರೆ, ಕತ್ತೆ, ಹೇಸರಕತ್ತೆ ಓಡಾಡದಂತೆ ನಿರ್ಬಂಧಿಸುವುದು.
- ಸೋಂಕು ಶಂಕಿತ ಕುದುರೆಗಳನ್ನು ನೋಡಿಕೊಳ್ಳುವವರು ಪಿಪಿಇ ಕಿಟ್ ಧರಿಸಿ ಪಾಲನೆ, ಆರೈಕೆ ಮಾಡಬೇಕು.

