ಸಾರಾಂಶ
ಇಂದು ಜಗತ್ತು ಹಲವಾರು ರಸ್ತೆತಡೆ, ವೇಗಪ್ರತಿಬಂಧಕಗಳನ್ನು ಹೊಂದಿದೆ. ಆದರೆ ಭಾರತ ನಿಲ್ಲುವ ಮನಃಸ್ಥಿತಿಯಲ್ಲಿಲ್ಲ. ಅದು ನಿಲ್ಲುವುದೂ ಇಲ್ಲ, ನಿಧಾನವಾಗುವುದೂ ಇಲ್ಲ. 140 ಕೋಟಿ ಭಾರತೀಯರು ಪೂರ್ಣ ಆವೇಗದೊಂದಿಗೆ ಒಟ್ಟಾಗಿ ಮುಂದೆ ಸಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ನವದೆಹಲಿ : ಇಂದು ಜಗತ್ತು ಹಲವಾರು ರಸ್ತೆತಡೆ, ವೇಗಪ್ರತಿಬಂಧಕಗಳನ್ನು ಹೊಂದಿದೆ. ಆದರೆ ಭಾರತ ನಿಲ್ಲುವ ಮನಃಸ್ಥಿತಿಯಲ್ಲಿಲ್ಲ. ಅದು ನಿಲ್ಲುವುದೂ ಇಲ್ಲ, ನಿಧಾನವಾಗುವುದೂ ಇಲ್ಲ. 140 ಕೋಟಿ ಭಾರತೀಯರು ಪೂರ್ಣ ಆವೇಗದೊಂದಿಗೆ ಒಟ್ಟಾಗಿ ಮುಂದೆ ಸಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಮೇಲೆ ತೆರಿಗೆ ಹಾಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನಾ ರೀತಿಯ ತೊಂದರೆ ನೀಡುತ್ತಿರುವಾಗಲೇ ಮೋದಿ ಈ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಎನ್‌ಡಿಟಿವಿ ವಿಶ್ವ ಶೃಂಗಸಭೆಯಲ್ಲಿ ‘ಅನ್‌ಸ್ಟಾಪೇಬಲ್ ಇಂಡಿಯಾ’ (ನಿಲ್ಲಿಸಲಾಗದ ಭಾರತ) ವಿಷಯದ ಕುರಿತು ಅವರು ಮಾತನಾಡಿದರು.
‘ಜಾಗತಿಕವಾಗಿ ಯುದ್ಧಗಳು ಮುಖ್ಯಾಂಶಗಳಾದಾಗ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುವ ಮೂಲಕ ಟೀಕಾಕಾರರು ತಪ್ಪು ಎಂದು ಸಾಬೀತುಪಡಿಸಿತು. ಭಾರತ ನಿಲ್ಲುವ ಮನಃಸ್ಥಿತಿಯಲ್ಲಿಲ್ಲ. ಇಂದು ಜಗತ್ತು ಹಲವಾರು ರಸ್ತೆತಡೆ, ವೇಗಪ್ರತಿಬಂಧಕಗಳನ್ನು ಎದುರಿಸುತ್ತಿದೆ. ಆದರೆ ನಿಲ್ಲಿಸಲಾಗದ ಭಾರತದ ಬಗ್ಗೆ ಮಾತನಾಡುವುದು ಸಹಜವೇ ಆಗಿದೆ’ ಎಂದರು.
ದುರ್ಬಲತೆಯಿಂದ ಅಗ್ರ ಆರ್ಥಿಕತೆಯೆಡೆಗೆ:
‘ಈ ಹಿಂದೆ ದೇಶದ ಜನ ಮತ್ತು ಜಗತ್ತು ಭಾರತ ತನ್ನ ಸಮಸ್ಯೆಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದವು. ಆದರೆ ಕಳೆದ 11 ವರ್ಷಗಳಲ್ಲಿ ಭಾರತ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತಿದೆ. ದುರ್ಬಲವಾದ 5 ರಾಷ್ಟ್ರಗಳ ಸಾಲಿನಲ್ಲಿದ್ದ ಭಾರತ ಇಂದು ಜಗತ್ತಿನ 5 ಅಗ್ರ ಆರ್ಥಿಕತೆಗಳಲ್ಲಿ ಒಂದಾಗಿದೆ. ಹಣದುಬ್ಬರವು ಶೇ.2ಕ್ಕಿಂತ ಕಡಿಮೆಯಾಗಿದೆ. ಬೆಳವಣಿಗೆಯ ದರವು ಶೇ.7ಕ್ಕಿಂತ ಹೆಚ್ಚಾಗಿದೆ. ಚಿಪ್‌ಗಳಿಂದ ಹಿಡಿದು ಶಿಪ್‌ಗಳವರೆಗೆ (ಹಡಗು) ಭಾರತ ಸ್ವಾವಲಂಬಿಯಾಗಿದೆ ಮತ್ತು ಆತ್ಮವಿಶ್ವಾಸದಿಂದ ತುಂಬಿಕೊಂಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ಚಾಟಿ:
ಈ ಹಿಂದಿನ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದ ಪ್ರಧಾನಿ, ‘2014ಕ್ಕಿಂತ ಮೊದಲು, ಭಾರತವು ಜಾಗತಿಕ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಹಗರಣಗಳು, ಮಹಿಳಾ ಸುರಕ್ಷತೆ, ಭಯೋತ್ಪಾದಕ ಸ್ಲೀಪರ್ ಸೆಲ್‌ಗಳ ಬಗ್ಗೆ ಪ್ರಶ್ನೆಗಳಿದ್ದವು. ಭಾರತ ಇದರಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಭಾರತ ಪ್ರತಿಯೊಂದು ಸವಾಲನ್ನೂ ಸ್ವೀಕರಿಸಿತು. ಪ್ರತಿಯೊಂದು ಅಪಾಯವನ್ನು ಸುಧಾರಣೆಯಾಗಿ, ಸುಧಾರಣೆಯನ್ನು ಸ್ಥಿತಿಸ್ಥಾಪಕತ್ವವಾಗಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಣಯವಾಗಿ ಪರಿವರ್ತಿಸಿತು’ ಎಂದರು.
ಉಗ್ರರಿಗೆ ಎಚ್ಚರಿಕೆ:
ಉಗ್ರಪೋಷಕ ಪಾಕಿಸ್ತಾನದ ವಿರುದ್ಧ ಚಾಟಿ ಬೀಸಿದ ಪ್ರಧಾನಿ, ‘ಆತ್ಮನಿರ್ಭರ ಭಾರತ ಇನ್ನೆಂದೂ ಮೌನವಾಗಿ ಕುಳಿತಿರುವುದಿಲ್ಲ. ಉಗ್ರದಾಳಿಗಳಿಗೆ ವಾಯುದಾಳಿ, ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂದೂರದ ಮೂಲಕ ತಕ್ಕ ಪ್ರತ್ಯುತ್ತರ ನೀಡುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಕೋವಿಡ್ ವಿರುದ್ಧ ಗೆಲುವು:
‘ಕೋವಿಡ್ ಬಂದಾಗ, ಭಾರತವು ಆ ಪ್ರಮಾಣದ ಬಿಕ್ಕಟ್ಟನ್ನು ಹೇಗೆ ಎದುರಿಸುತ್ತದೆ ಎಂದು ಜಗತ್ತು ಆಶ್ಚರ್ಯಪಟ್ಟಿತು. ಭಾರತದಿಂದಾಗಿ ಜಗತ್ತು ಬಳಲುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ಭಾರತ ಇದೆಲ್ಲವೂ ತಪ್ಪು ಎಂದು ಸಾಬೀತುಪಡಿಸಿತು. ನಾವು ಹೋರಾಟ ನಡೆಸಿದೆವು, ನಮ್ಮದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆವು ಮತ್ತು ದಾಖಲೆಯ ಸಮಯದಲ್ಲಿ ಅವುಗಳನ್ನು ಜಗತ್ತಿಗೆ ನೀಡಿದೆವು’ ಎಂದು ಕೋವಿಡ್ ವಿರುದ್ಧದ ವಿಜಯವನ್ನು ಮೋದಿ ಮೆಲುಕು ಹಾಕಿದರು.
ಮೋದಿ ಟೀಕಿಸಿದ ರಾಗಾಗೆ ಅಮೆರಿಕ ಗಾಯಕಿ ಚಾಟಿ
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೆದರುತ್ತಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆಗೆ ಇದೀಗ ಅಮೆರಿಕದ ಗಾಯಕಿ ಮೇರಿ ಮಿಲ್‌ಬೆನ್ ತಿರುಗೇಟು ನೀಡಿದ್ದಾರೆ. ‘ರಾಹುಲ್ ಗಾಂಧಿಯವರೇ ಮೋದಿ ಅವರು ಟ್ರಂಪ್‌ಗೆ ಹೆದರುತ್ತಿಲ್ಲ. ನೀವು ತಪ್ಪು ತಿಳಿದುಕೊಂಡಿದ್ದೀರಿ. ನೀವು ಪ್ರಧಾನಿಯಾಗಲು ಲಾಯಕ್ಕಿಲ್ಲ, ನೀವು ಐ ಹೇಟ್ ಇಂಡಿಯಾ(ನಾನು ಭಾರತ ವಿರೋಧಿ) ಪ್ರವಾಸಕ್ಕೆ ವಾಪಸ್ ಆಗಿ’ ಎಂದು ಕಾಲೆಳೆದಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿರುಗೇಟು ನೀಡಿರುವ ಅವರು, ‘ರಾಹುಲ್ ಗಾಂಧಿ ಅವರೇ ನೀವು ತಪ್ಪು ತಿಳಿದುಕೊಂಡಿದ್ದೀರಿ. ಪ್ರಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್‌ಗೆ ಹೆದರುತ್ತಿಲ್ಲ. ಬದಲಾಗಿ ಅವರು ಸುದೀರ್ಘ ರಾಜನೀತಿಯನ್ನು ಅರ್ಥೈಸಿಕೊಂಡಿದ್ದಾರೆ. ಅಮೆರಿಕದ ಜತೆಗೆ ಅವರು ವ್ಯೂಹಾತ್ಮಕ ರಾಜತಾಂತ್ರಿಕತೆ ಹೊಂದಿದ್ದಾರೆ. ಟ್ರಂಪ್ ಪಾಲಿಗೆ ಯಾವತ್ತಿಗೂ ಅಮೆರಿಕದ ಹಿತಾಸಕ್ತಿಯೇ ಮೊದಲು. ಅದೇ ರೀತಿ ಮೋದಿ ಕೂಡ ಭಾರತಕ್ಕೆ ಯಾವುದು ಒಳ್ಳೆಯದೋ ಅದನ್ನೇ ಮಾಡುತ್ತಾರೆ. ನಾನು ಇದನ್ನು ಶ್ಲಾಘಿಸುತ್ತೇನೆ. ದೇಶದ ನಾಯಕತ್ವ ವಹಿಸುವವರು ಇದನ್ನೇ ಮಾಡಬೇಕು’ ಎಂದು ಹೇಳಿದ್ದಾರೆ
‘ನೀವು (ರಾಹುಲ್) ಈ ರೀತಿಯ ನಾಯಕತ್ವವನ್ನು ಅರ್ಥಮಾಡಿಕೊಳ್ಳುತ್ತೀರೆಂದು ನನಗೇನೂ ಅನಿಸುವುದಿಲ್ಲ. ಯಾಕೆಂದರೆ ಭಾರತದ ಪ್ರಧಾನಿಯಾಗುವಷ್ಟು ಬುದ್ಧಿಮತ್ತೆ ನಿಮ್ಮಲ್ಲಿಲ್ಲ. ಹಾಗಾಗಿ ಐ ಹೇಟ್ ಇಂಡಿಯಾ ಎನ್ನುವ ನೀವು ಅಲ್ಲೇ ಮರಳುವುದು ಒಳಿತು. ಈ ಪ್ರವಾಸಕ್ಕೆ ಇರೋದು ಒಬ್ಬರೇ ಸಭಿಕರು. ಅದು ನೀವು ಮಾತ್ರ’ ಎಂದು ತೀಕ್ಷ್ಮ ತಿರುಗೇಟು ನೀಡಿದ್ದಾರೆ.
ರಷ್ಯಾ ತೈಲ ಖರೀದಿ ವಿಚಾರದಲ್ಲಿ ಟ್ರಂಪ್ ನಿರ್ದೇಶನವನ್ನು ಮೋದಿ ಪಾಲಿಸುತ್ತಿದ್ದಾರೆ. ಮೋದಿ ಅವರು ಟ್ರಂಪ್‌ಗೆ ಹೆದರುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಯಾರೀ ಮೇರಿ ಮಿಲ್‌ಬೆನ್?:
ಮಿಲ್‌ಬೆನ್ ಅವರು ಅಮೆರಿಕದ ಗಾಯಕಿ ಹಾಗೂ ನಟಿ. ಅಮೆರಿಕದ ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮಿಲ್‌ಬೆನ್ ಅವರು ಮೋದಿ, ಭಾರತ ಮತ್ತು ಹಿಂದೂ ಸಂಸ್ಕೃತಿ ಮೇಲೆ ವಿಶೇಷ ಗೌರವ ಹೊಂದಿದ್ದಾರೆ. ಮಿಲ್‌ಬೆನ್ ಅವರು 2020ರಲ್ಲಿ ಅಮೆರಿಕದಲ್ಲಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮ ವೇಳೆ ‘ಓಂ ಜೈ ಜಗದೀಶ್ ಹರೇ’ ಹಿಂದು ಸ್ತೋತ್ರದ ಪ್ರದರ್ಶನ ನೀಡಿದ್ದರು. ಭಾರತದಲ್ಲೂ ಅವರು ಕೆಲ ಕಾರ್ಯಕ್ರಮಗಳನ್ನು ನೀಡಿದ್ದಾರೆ.
50 ವರ್ಷಗಳಲ್ಲಿ ಭಾರತ ಪ್ರಧಾನಿಯೇ ಜಗತ್ತಿನ ನಾಯಕ: ಅಬೋಟ್
ನವದೆಹಲಿ: ‘21 ನೇ ಶತಮಾನದಲ್ಲಿ ಭಾರತವೇ ಪ್ರಾಬಲ್ಯ ಮೆರೆಯಲಿದೆ. ಇನ್ನು 40-50 ವರ್ಷಗಳಲ್ಲಿ ಭಾರತದ ಪ್ರಧಾನಿಯೇ ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಳ್ಳಲಿದ್ದಾರೆ. ಆಗ ಈ ದೇಶದ ಪ್ರಧಾನಿ ಆಗಿರಲಿ ಅವರು ಈಗ ಅಮೆರಿಕ ಹೊಂದಿರುವ ದೊಡ್ಡಣ್ಣನ ಸ್ಥಾನ ಅಲಂಕರಿಸಲಿದ್ದಾರೆ’ ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೊನಿ ಅಬೋಟ್ ಭವಿಷ್ಯ ನಡೆದಿದ್ದಾರೆ.
ಎನ್‌ಡಿಟೀವಿ ಆಯೋಜಿಸಿದ್ದ ವಿಶ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು.‘ಭಾರತ ವಿಶ್ವದ ಸೂಪರ್ ಪವರ್ ಆಗಲಿದೆ. ವಿಶ್ವ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಲಿರುವ ಅದು ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಚೀನಾಕ್ಕೆ ಪ್ರತಿಸ್ಪರ್ಧೆ ನೀಡಲಿದೆ. ಜತೆಗೆ ಆಸ್ಪ್ರೇಲಿಯಾಗೂ ನಂಬಿಕೆ ಮತ್ತು ವಿಶ್ವಸಾರ್ಹ ಪಾಲುದಾರನಾಗಿ ಹೊರ ಹೊಮ್ಮಲಿದೆ’ ಎಂದು ಹೇಳಿದರು.
ಭಾರತವು ಪ್ರಜಾಸತ್ತೆ, ಆಡಳಿತ ವ್ಯವಸ್ಥೆ ಹಾಗೂ ಇಂಗ್ಲಿಷ್ ಭಾಷಾ ಪ್ರಭುತ್ವ- ಈ ರೀತಿಯ 3 ಧನಾತ್ಮಕ ಅಂಶಗಳನ್ನು ಹೊಂದಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))