ಸಾರಾಂಶ
ಉಡುಪಿ: ಜಿಎಸ್‌ಟಿ 2.0 ಜಾರಿಗೆ ಎಲ್ಲಾ ರಾಜ್ಯ ಸರ್ಕಾರಗಳ ಪ್ರತಿನಿಧಿಗಳಿರುವ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ, ಇದು ಭಾರತ ಒಕ್ಕೂಟದ ಗೆಲವು ಮತ್ತು ನರೇಂದ್ರ ಮೋದಿ ಅವರ ರಾಜಕೀಯ ಪ್ರಬುದ್ದತೆಗೆ ಸಾಕ್ಷಿ ಎಂದು ಬೆಂಗಳೂರಿನ ಆರ್ಥಿಕತಜ್ಞ ವಿಶ್ವನಾಥ ಭಟ್ ಹೇಳಿದ್ದಾರೆ.
ಗುರುವಾರ ಜಿಲ್ಲಾ ಬಿಜೆಪಿ ವತಿಯಿಂದ ‘ಮುಂದಿನ ಪೀಳಿಗೆಯ ಜಿಎಸ್ಟಿ 2.0’ (ಜಿಎಸ್ಟಿ ಸುಧಾರಣೆಗಳು ಮತ್ತು ಗ್ರಾಹಕರಿಗೆ ಲಾಭಗಳು) ಎಂಬ ವಿಚಾರಸಂಕಿರಣದಲ್ಲಿ ವಿಷಯ ಮಂಡಿಸಿದರು.ದೇಶದ 9 ರಾಜ್ಯಗಳಲ್ಲಿ ಬಿಜೆಪಿಯೇತರ, ವಿಪಕ್ಷಗಳು ಅಧಿಕಾರದಲ್ಲಿವೆ, ಜಿಎಸ್‌ಟಿ ಕೌನ್ಸಿಲ್‌ನಲ್ಲಿರುವ ಈ ರಾಜ್ಯಗಳ ಪ್ರತಿನಿಧಿಗಳು ಜಿಎಸ್‌ಟಿ 2.0 ಜಾರಿಗೆ ಯಾವುದೇ ವಿರೋಧ ಮಾಡಿರಲಿಲ್ಲ, ಈಗ ಜಾರಿಯಾದ ಮೇಲೆ ಈ ವಿಪಕ್ಷಗಳು ವಿರೋಧ ಮಾಡುತ್ತಿವೆ. ದೇಶದ ಜನರಲ್ಲಿ ಆರ್ಥಿಕ ಅನರಕ್ಷತೆ ತುಂಬಾ ಇದೆ, ವಿಪಕ್ಷಗಳು ಇದನ್ನೇ ಬಳಸಿಕೊಂಡು ಜಿಎಸ್‌ಟಿ 2.0 ಬಗ್ಗೆ ಜನರ ದಾರಿ ತಪ್ಪಿಸುತ್ತಿವೆ ಎಂದರು.
ಬಿಹಾರ ಚುನಾವಣೆಗಾಗಿ ಜಿಎಸ್‌ಟಿ 2.0 ಜಾರಿಗೆ ತರಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ದೇಶದಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ಜಿಎಸ್‌ಟಿ 2.0 ಲಾಭ ಕೇವಲ ಬಿಹಾರದಲ್ಲಿ ಮಾತ್ರವಲ್ಲ ಇಡೀ ದೇಶಕ್ಕಾಗುತ್ತದೆ. ಈ ಕ್ರಾಂತಿಕಾರದ ಸುಧಾರಣೆಯ ಲಾಭ ಈಗಾಗಲೇ ದೇಶವಾಸಿಗಳಿಗೆ ಲಭಿಸಲಾರಂಭಿಸಿದೆ ಎಂದು ಹೇಳಿದರು.ವಿಚಾರಸಂಕಿರಣ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ತೆರಿಗೆ ವಸೂಲಿ ಮಾಡುವುದು ಮಾತ್ರವಲ್ಲ, ಅದರ ಬಳಕೆಯ ಬಗ್ಗೆಯೂ ತೆರಿಗೆ ಕಟ್ಟುವ ಜನರಿಗೆ ಮಾಹಿತಿ ನೀಡುವುದು ಸರ್ಕಾರದ ಕರ್ತವ್ಯ, ಅದಕ್ಕಾಗಿ ಇಂತಹ ವಿಚಾರಸಂಕಿರಣಗಳನ್ನು ನಡೆಸಲಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ವೇದಿಕೆಯಲ್ಲಿದ್ದರು. ಜಿಲ್ಲಾ ಆರ್ಥಿಕ ಪ್ರಕೋಷ್ಠ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು ಪ್ರಾಸ್ತಾವಿಕ ಮಾತುಗಳನ್ನಾಡಿದರು, ನಗರಾಧ್ಯಕ್ಷ ದಿನೇಶ್ ಅಮೀನ್ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ನಿರೂಪಿಸಿದರು.ಸಿದ್ದರಾಮಯ್ಯ ಹೇಳಿದ್ದು ಸುಳ್ಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಎಸ್‌ಟಿ 2.0 ಜಾರಿಯಿಂದ ರಾಜ್ಯಕ್ಕೆ 15 ಸಾವಿರ ಕೋಟಿ ರು. ನಷ್ಟವಾಗುತ್ತದೆ ಎಂದಿದ್ದಾರೆ. ಆದರೆ ಜಿಎಸ್‌ಟಿ 2,0 ಜಾರಿಯಿಂದ ಕೇಂದ್ರ ಸರ್ಕಾರಕ್ಕೆ 48,000 ಕೋಟಿ ರು. ನಷ್ಟವಾಗಿದೆ. ಅದರಲ್ಲಿ 24,000 ಕೋಟಿ ರು.ಗಳನ್ನು ದೇಶದ ಎಲ್ಲಾ ರಾಜ್ಯಗಳು ಸೇರಿ ಭರಿಸಬೇಕಾಗುತ್ತದೆ. ಆದ್ದರಿಂದ ರಾಜ್ಯಕ್ಕೆ 15,000 ಕೋಟಿ ರು. ನಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದು ಅಪ್ಪಟ ಸುಳ್ಳು ಎಂದರು.