ಸಾರಾಂಶ
ನಕ್ಸಲ್ ಪೀಡಿತ ಛತ್ತೀಸ್‌ಗಢದಲ್ಲಿ ಒಂದೇ ದಿನ ಬರೋಬ್ಬರಿ 210 ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಏಕದಿನದ ಅತಿದೊಡ್ಡ ನಕ್ಸಲ್ ಶರಣಾಗತಿ. ಈ ಮೂಲಕ ಕಳೆದ 3 ದಿನದಲ್ಲಿ ಶರಣಾದ ನಕ್ಸಲರ ಸಂಖ್ಯೆ 238ಕ್ಕೇರಿಕೆಯಾಗಿದೆ
ಜಗದಲ್ಪುರ : ನಕ್ಸಲ್ ಪೀಡಿತ ಛತ್ತೀಸ್‌ಗಢದಲ್ಲಿ ಒಂದೇ ದಿನ ಬರೋಬ್ಬರಿ 210 ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಏಕದಿನದ ಅತಿದೊಡ್ಡ ನಕ್ಸಲ್ ಶರಣಾಗತಿ. ಈ ಮೂಲಕ ಕಳೆದ 3 ದಿನದಲ್ಲಿ ಶರಣಾದ ನಕ್ಸಲರ ಸಂಖ್ಯೆ 238ಕ್ಕೇರಿಕೆಯಾಗಿದೆ.
ನಕ್ಸಲರು ಶರಣಾಗತಿಯ ವೇಳೆ 19 ಎಕೆ - 47 ರೈಫಲ್, 17 ಸ್ವಯಂ ಲೋಡಿಂಗ್ ರೈಫಲ್, 23 ಐಎನ್‌ಎಸ್‌ಎಸ್ ಸೇರಿದಂತೆ ಸುಮಾರು 153 ವಿವಿಧ ಬಗೆಯ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಯ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಶರಣಾದ ಮಾವೋಗಳಲ್ಲಿ ನಿಷೇಧಿತ ನಕ್ಸಲ್ ಗುಂಪಿನ ಒಬ್ಬ ಕೇಂದ್ರ ಸಮಿತಿ ಸದಸ್ಯ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ನಾಲ್ವರು, ವಿಭಾಗೀಯ ಸಮಿತಿಯ 21 ಮಂದಿ ಮತ್ತು 61 ಪ್ರದೇಶ ಸಮಿತಿಯ ಸದಸ್ಯರು ಸೇರಿದ್ದಾರೆ. ಈ ಘಟನೆಗೆ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಪ್ರತಿಕ್ರಿಯಿಸಿದ್ದು, ‘ಇಡೀ ದೇಶಕ್ಕೆ ಇದೊಂದು ಐತಿಹಾಸಿಕ ದಿನ’ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರವಷ್ಟೇ ನಕ್ಸಲರಿಗೆ, ‘ಶರಣಾಗಿ, ಇಲ್ಲವೇ ಭದ್ರತಾ ಪಡೆಗಳ ದಾಳಿಗೆ ಸಿದ್ಧರಾಗಿ’ ಎಂದು ಕಠಿಣ ಎಚ್ಚರಿಕೆ ನೀಡಿದ್ದರು. ಛತ್ತೀಸ್‌ಗಢದಲ್ಲಿ ಬುಧವಾರ 28 ಮಾವೋಗಳು ಶರಣಾಗಿದ್ದರು.
ಈ ನಡುವೆ ಜಾರ್ಖಂಡಲ್ಲಿ ಕೂಡ ಶುಕ್ರವಾರ ಇಬ್ಬರು ನಕ್ಸಲೀಯರು ಶರಣಾಗಿದ್ದಾರೆ.