ಸಿಎಂ ಸಿದ್ದು ‘ಅರ್ಬನ್‌ ನಕ್ಸಲ್‌’: ಖೂಬಾ ಆರೋಪ

| Published : Sep 22 2025, 01:00 AM IST

ಸಿಎಂ ಸಿದ್ದು ‘ಅರ್ಬನ್‌ ನಕ್ಸಲ್‌’: ಖೂಬಾ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಗಣತಿಯ ವಿಷಯವಾಗಿ ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಬನ್‌ ನಕ್ಸಲರಂತೆ ವರ್ತಿಸುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಾತಿ ಗಣತಿಯ ವಿಷಯವಾಗಿ ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಬನ್‌ ನಕ್ಸಲರಂತೆ ವರ್ತಿಸುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆರೋಪಿಸಿದರು.

ಅವರು ಈ ಕುರಿತಂತೆ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್‌ನ 2ನೇ ಅವಧಿಯ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರ್ತನೆ ಸಂವಿಧಾನಕ್ಕೆ ಕಿಮ್ಮತ್ತು ನೀಡದಂತಿದೆ. ಜಾತಿಗಣತಿಗೆ ಸಂವಿಧಾನದಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಇರದಿದ್ದರೂ ಅದನ್ನು ಕಡೆಗಣಿಸಿ ಗಣತಿಗೆ ಕೈ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ನೀಡಿರುವಂಥ ಸಂವಿಧಾನದಲ್ಲಿ ನಂಬಿಕೆಯಿದ್ದಲ್ಲಿ, ಅದರ ಪ್ರತಿಯ ಪುಸ್ತಕವನ್ನು ಎಲ್ಲೆಂದರಲ್ಲಿ ಕೈಯಲ್ಲಿ ಹಿಡಿದು ಮಾತನಾಡುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಸ್ಪಷ್ಟನೆ ನೀಡಲಿ. ಅಷ್ಟಕ್ಕೂ ಅರ್ಬನ್‌ ನಕ್ಸಲ್‌ರು ರಾಹುಲ್‌ ಮೆಧೂಳನ್ನೂ ಕದ್ದೊಯ್ದಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೀಗ ಸಿದ್ದರಾಮಯ್ಯ ಅವರ ಸಿಎಂ ಖುರ್ಚಿ ಅಲುಗಾಡುತ್ತಿದೆ. ಎರಡು ವರ್ಷಗಳ ಹಿಂದೆ ನೆನಪಾಗದ ಗಣತಿಯ ವಿಚಾರವನ್ನು ಎತ್ತುವ ಮೂಲಕ ರಾಜ್ಯದಲ್ಲಿ ಮತಾಂತರಕ್ಕೆ ಪ್ರೋತ್ಸಾಹ ಕೊಡುವ ರೀತಿ ಯಲ್ಲಿ ರಾಜ್ಯದ ಕಾಂಗ್ರೆಸ್‌ ವರ್ತಿಸುತ್ತಿರುವುದನ್ನು ಸ್ಪಷ್ಟಪಡಿಸಿದಂತಾಗಿದೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಜಾತಿ ಗಣತಿಯ ಕುರಿತಂತೆ ಘೋಷಣೆ ಮಾಡಿದೆ. ಮುಂದಿನ ವರ್ಷ ಗಣತಿ ಆರಂಭವಾಗಲಿದೆ. ತದನಂತರ ರಾಜ್ಯ ಸರ್ಕಾರ ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಾನಮಾನ ಕುರಿತಂತೆ ಸಮೀಕ್ಷೆ ಮಾಡಲಿ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ತಿಳಿಸಿದರು.

ಹಿಂದುಗಳಾಗಿ ಬಾಳದಿದ್ದಲ್ಲಿ ಸರ್ವನಾಶ ಎಂದಿದ್ದ ಸಿದ್ದಗಂಗಾ ಶ್ರೀಗಳು :

ರಾಜ್ಯದಲ್ಲಿ ನಡೆದಾಡುವ ದೇವರೆಂದೇ ಗೌರವಿಸಲ್ಪಡುತ್ತಿದ್ದ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳು 1967ರಲ್ಲಿಯೇ ಧರ್ಮದ ಕುರಿತು ಹೇಳಿಕೆ ನೀಡಿದ್ದರು. ನಾವೆಲ್ಲ ಹಿಂದುಗಳಾಗಿ ಬಾಳದಿದ್ದಲ್ಲಿ ಸರ್ವನಾಶವಾದೀತು ಎಂದೂ ಎಚ್ಚರಿಕೆ ನೀಡಿದ್ದರು. ಇದೀಗ ರಾಜ್ಯ ಸರ್ಕಾರ ಧರ್ಮಗಳಲ್ಲಿ, ಜಾತಿಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಧರ್ಮದ ಕಾಲಂದಲ್ಲಿ ಹಿಂದು ಎಂದು ಜಾತಿಯ ಕಾಲಂದಲ್ಲಿ ವೀರಶೈವ ಲಿಂಗಾಯತ ಅಥವಾ ಅವರವರ ಜಾತಿ, ಉಪಜಾತಿಗಳನ್ನು ಬರೆಯಿಸಲಿ ಎಂದು ಭಗವಂತ ಖೂಬಾ ಆಗ್ರಹಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆ ಆಗೋವರೆಗೆ ನಾವೆಲ್ಲ ಹಿಂದು:ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಅವರು ಮಾತನಾಡಿ, ರಾಜ್ಯ ಸರ್ಕಾರ ಹಿಂದುಗಳಲ್ಲಿ ಒಳ ಜಗಳ ಹಚ್ಚುವ ಕುತಂತ್ರಕ್ಕೆ ಕೈ ಹಾಕಿದೆ. ಲಿಂಗಾಯತರನ್ನು ಒಡೆದಾಳುವ ಪ್ರಯತ್ನ ಮಾಡುತ್ತಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಅಧಿಕೃತ ಘೋಷಣೆ ಆದಾಗ ನಾವೆಲ್ಲ ಲಿಂಗಾಯತ ಎಂದು ಬರೆಯಿಸೋಣ ಅಲ್ಲಿಯವರೆಗೆ ಹಿಂದುಗಳೆಂದೇ ಧರ್ಮದ ಕಾಲಂನಲ್ಲಿ ಬರೆಸೋಣ ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಗುರುನಾಥ ಜ್ಯಾಂತಿಕರ್‌, ಪೀರಪ್ಪ ಔರಾದೆ ಹಾಗೂ ಕಿರಣ ಪಾಟೀಲ್‌, ಬಸವರಾಜ ಪವಾರ್‌, ಶ್ರೀನಿವಾಸ ಚೌಧರಿ ಹಾಗೂ ವೀರಣ್ಣ ಕಾರಬಾರಿ ಇದ್ದರು.

ಸಿದ್ದರಾಮಯ್ಯದು ಡರ್ಟಿ ಪಾಲಿಟಿಕ್ಸ್‌,

ಹಿಂದು ಧರ್ಮ ಒಡೆಯುವ ಕುತಂತ್ರ

ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕೊಳಕು ರಾಜಕೀಯ ಮಾಡುತ್ತಿದ್ದಾರೆ. ಹಿಂದು ಧರ್ಮದವರನ್ನು ಒಡೆಯುವ ಕುತಂತ್ರ ಮಾಡುತ್ತಿದ್ದಾರೆ. ಅವೈಜ್ಞಾನಿಕವಾದಂಥ ಗಣತಿಗೆ ಸೂಚನೆ ನೀಡಿದ್ದು, ಲಿಂಗಾಯತ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌ ಹೀಗೆಯೇ ಸುಮಾರು 46 ಕಡೆ ಕ್ರಿಶ್ಚಿಯನ್‌ ಸೇರಿಸಿ ಮತಾಂತರದ ಅನುಮಾನ ಮೂಡಿಸಿ ಸಮಾಜದ ಭಾವನೆ ಕೆರಳಿಸುತ್ತಿದ್ದಾರೆ ಎಂದು ಆರೋಪಿಸಿ ಗಣತಿಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.

ಇಲ್ಲದ ಜಾತಿಗಳನ್ನು ಸೃಷ್ಟಿ ಮಾಡಿ ಜನರಲ್ಲಿ ಸಾಕಷ್ಟು ಗೊಂದಲ ಮೂಡಿಸಿ ಜನ, ಪಕ್ಷ, ನಾಯಕರುಗಳ ಗಮನ ಇತ್ತ ಸೆಳೆದು ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ನೇಪಾಳ, ಬಾಂಗ್ಲಾ, ಶ್ರೀಲಂಕಾದಲ್ಲಿನ ಅರಾಜಕತೆಯಂತೆ ಭಾರತದಲ್ಲಿಯೂ ಸೃಷ್ಟಿ ಮಾಡುವ ಪ್ರಯತ್ನವನ್ನು ಕಾಂಗ್ರೆಸ್‌ ಹಾಗೂ ಅದರ ನಾಯಕ ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದಿಂದ ಅಧಿಕಾರಿಗಳಿಗೆ

ಸಂಬಳ ನೀಡಲೂ ಆಗುತ್ತಿಲ್ಲ

ಶಾಸಕ ಪ್ರಭು ಚವ್ಹಾಣ್‌ ಮಾತನಾಡಿ, ಬಂಜಾರಾ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿಯ ಕಾಲಂನಲ್ಲಿ ಬಂಜಾರ ಎಂದು ಬರೆಸುವಂತೆ ಕರೆ ನೀಡಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿ ಅಧಿಕಾರಿಗಳಿಗೆ ಸಂಬಳ ನೀಡಲಾಗದಷ್ಟು ದಯನೀಯ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ ಎಂದರು. ಇದೇ ವೇಳೆ ಪಕ್ಷದ ಮುಖಂಡ ಈಶ್ವರಸಿಂಗ್‌ ಠಾಕೂರ್‌ ಅವರೂ ಮಾತನಾಡಿ ಕಾಂಗ್ರೆಸ್‌ ಸರ್ಕಾರದ ನಿರ್ಧಾರಗಳ ಕುರಿತು ಕಿಡಿ ಕಾರಿದರು.