ಬ್ರಹ್ಮಾವರ: ಕೇರಳ ಮೂಲದ ಆರೋಪಿ ಲಾಕಪ್‌ಡೆತ್

KannadaprabhaNewsNetwork |  
Published : Nov 11, 2024, 01:00 AM ISTUpdated : Nov 11, 2024, 01:01 AM IST
ಕ್ರೈಂ | Kannada Prabha

ಸಾರಾಂಶ

ಮೃತ ಆರೋಪಿಯನ್ನು ಕೇರಳದ ಕೊಲ್ಲಂನ ಬಿಜು ಮೋಹನ್ (42) ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಹಂಗಾರಕಟ್ಟೆ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ವಾರದ ಹಿಂದೆಯಷ್ಟೆ ಕೆಲಸಕ್ಕೆ ಸೇರಿಕೊಂಡಿದ್ದು, ಸೂರಬೆಟ್ಟು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ.

ಕನ್ನಡಪ್ರಭ ವಾರ್ತೆ ಉಡುಪಿ

ಮಹಿಳ‍ೆಯೊಬ್ಬರನ್ನು ಚುಡಾಯಿಸಿದ ಆರೋಪಿ, ಬ್ರಹ್ಮಾವರ ಪೊಲೀಸ್ ಠಾಣೆಯ ಲಾಕಪ್‌ನ ಬಾತ್ ರೂಮಿನೊಳಗೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.ಮೃತ ಆರೋಪಿಯನ್ನು ಕೇರಳದ ಕೊಲ್ಲಂನ ಬಿಜು ಮೋಹನ್ (42) ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಹಂಗಾರಕಟ್ಟೆ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ವಾರದ ಹಿಂದೆಯಷ್ಟೆ ಕೆಲಸಕ್ಕೆ ಸೇರಿಕೊಂಡಿದ್ದು, ಸೂರಬೆಟ್ಟು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ.ಶನಿವಾರ ಸಂಜೆ ಕಂಠಮಟ್ಟ ಕುಡಿದು, ಸೂರೆಬೆಟ್ಟುವಿನ ಮನೆಯೊಂದರ ಸಿಟೌಟ್‌ನಲ್ಲಿ ಕುಳಿತಿದ್ದ, ಮಹಿಳೆಯ ಮೇಲೆ ಎರಗಿ, ನೀನು ನನ್ನ ಜೊತೆ ಬರಬೇಕು ಎಂದು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕೂಗಿದ್ದು, ಸ್ಥಳೀಯರು ಆತನನ್ನು ಹಿಡಿದು ಮನೆಯೊಳಗೆ ಕೂಡಿ ಹಾಕಿ, ಪೊಲೀಸರಿಗೆ ಒಪ್ಪಿಸಿದ್ದರು.ವಿಪರೀತ ಕುಡಿದಿದ್ದ ಕಾರಣ ಆತನ ವಿಚಾರಣೆ ನಡೆಸಲಾಗದೇ ಲಾಕಪ್‌ನಲ್ಲಿ ಹಾಕಿದ್ದರು. ರಾತ್ರಿ 3.45ಕ್ಕೆ ಸ್ಟೇಷನ್‌ನ ರಾತ್ರಿ ಸೆಂಟ್ರಿ ಸಿಬ್ಬಂದಿ ನೋಡಿದಾಗ ಆತ ಕೆಳಕ್ಕೆ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ.ಘಟನೆಯ ಬಗ್ಗೆ ಭಾನುವಾರ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಠಾಣೆಗೆ ಭೇಟಿಕೊಟ್ಟು ಠಾಣಾ ಪಿಎಸ್‌ಐ ಮಧು ಅವರನ್ನು ವಿಚಾರಣೆ ನಡೆಸಿದ್ದಾರೆ.

ಮೃತ ಆರೋಪಿ ಬಿಜು, ಡೆಂಘೀ ಜ್ವರಕ್ಕೆ ಮತ್ತು ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದ ಮಾಹಿತಿ ಲಭ್ಯವಾಗಿದೆ. ಮೇಲ್ನೋಟಕ್ಕೆ ಆತ ಲಾಕಪ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.

..................

ಲಾಕಪ್‌ ಡೆತ್‌: ಸಿಐಡಿ ತನಿಖೆ !

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಎಸ್ಪಿ ಡಾ.ಅರುಣ್, ಇದೊಂದು ಲಾಕಪ್ ಡೆತ್ ಪ್ರಕರಣ ಆಗಿರುವುದರಿಂದ, ನಿಯಮದಂತೆ ಇದರ ತನಿಖೆಯನ್ನು ಸಿಐಡಿ ವಹಿಸಿಕೊಳ್ಳಲಿದೆ. ಸಿಐಡಿ ಮತ್ತು ಪೊಲೀಸರು ಜಂಟಿಯಾಗಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಿದ್ದು, ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಮುಂದೆ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.

ಲಾಕಪ್‌ನಲ್ಲಿಯೇ ಮೃತಪಟ್ಟಿದ್ದ ?

ಬ್ರಹ್ಮಾವರ ಠಾಣೆಯ ಸೆಂಟ್ರಿ ಡ್ಯೂಟಿ ಮಾಡುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ, 3.45ಕ್ಕೆ ಸೆಲ್‌ನ ಒಳಗೆ ಗಮನಿಸಿದಾಗ, ಗೋಡೆಗೆ ಮುಖ ಮಾಡಿಕೊಂಡು ಆರೋಪಿ ಬಿಜು ಮೋಹನ್ ಕುಸಿದು ಬಿದ್ದಿದ್ದ. ತಕ್ಷಣವೇ ಅವರು ಎಸ್ಐ ಮಧು ಬಿ.ಇ. ಅವರು ಠಾಣೆಗೆ ಆಗಮಿಸಿ, ಆಂಬುಲೆನ್ಸ್ ಮೂಲಕ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವಾಗಲೇ, ಬಿಜು ಮೋಹನ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ