ಹರಿಪ್ರಸಾದ ವಿರುದ್ಧ ಬ್ರಾಹ್ಮಣ ಸಮುದಾಯ ಪ್ರತಿಭಟನೆ

KannadaprabhaNewsNetwork | Published : Oct 26, 2024 1:03 AM

ಸಾರಾಂಶ

ಹರಿಪ್ರಸಾದ್ ಅವರು ಶ್ರೀಗಳ ಕ್ಷಮೆಯಾಚನೆ ಮಾಡಬೇಕು. ಶ್ರೀಗಳ ಕುರಿತಾಗಿ ಮಾತನಾಡುವಾಗ ಎಚ್ಚರಿಕೆಯನ್ನು ವಹಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ ಮುಖಂಡ, ವಿಪ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಬ್ರಾಹ್ಮಣ ತರುಣ ಸಂಘದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕೂಡಲೇ ಹರಿಪ್ರಸಾದ್ ಅವರು ಶ್ರೀಗಳ ಕ್ಷಮೆಯಾಚನೆ ಮಾಡಬೇಕು. ಶ್ರೀಗಳ ಕುರಿತಾಗಿ ಮಾತನಾಡುವಾಗ ಎಚ್ಚರಿಕೆಯನ್ನು ವಹಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಅಲ್ಲದೆ, ಇದೆ ವೇಳೆ ಹರಿಪ್ರಸಾದ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ವೇಳೆ ಮಾತನಾಡಿದ ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ, ಬ್ರಾಹ್ಮಣ ಸಮಾಜದ ತ್ರಿಮತಸ್ಥ ಸ್ವಾಮೀಜಿ ವಿರುದ್ಧ ಮಾತನಾಡಿದರೆ ಸಮಾಜ ಎಂದಿಗೂ ಸಹಿಸುವುದಿಲ್ಲ. ಕೂಡಲೇ ಶ್ರೀಗಳ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ ಮಾತನಾಡಿ, ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದರೆ ಅದನ್ನು ಎಂದಿಗೂ ಸಹಿಸುವುದಿಲ್ಲ. ಬ್ರಾಹ್ಮಣರ ಸಂಖ್ಯೆ ಕಡಿಮೆ ಇದೆ ಅನ್ನುವ ಮನೋಭಾವನೆಯಲ್ಲಿ ಈ ರೀತಿ ಮಾತನಾಡುವುದನ್ನು ಸಹಿಸುವುದಿಲ್ಲ. ಸಮಾಜ ಪರಿವರ್ತಿಸುವ ಶಕ್ತಿ ಸಮಾಜಕ್ಕಿದೆ. ಸಯಮ ಬಂದಾಗ ಉತ್ತರಿಸುತ್ತೇವೆ ಎಂದು ಖಾರವಾಗಿ ಹೇಳಿದರು.

ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಮಾತನಾಡಿ, ಗೋಶಾಲೆ, ದೀನದಲಿತರ ಏಳಿಗೆಗಾಗಿ ಪೇಜಾವರ ಶ್ರೀಗಳು ಶ್ರಮಿಸಿದ್ದಾರೆ. ಸಮಾಜದ ಎಲ್ಲ ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಇಂಥವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ನರಸಿಂಹ ಆಲೂರ, ಎಸ್.ಕೆ.ಕುಲಕರ್ಣಿ, ಡಿ.ಬಿ.ಕುಲಕರ್ಣಿ, ವೆಂಕಟೇಶ ದೇಶಪಾಂಡೆ, ಪ್ರದೀಪ ಪರ್ವತಿಕರ, ಎಸ್.ವಿ.ಶ್ಯಾಮ್, ಪವನ ಸೀಮಿಕೇರಿ, ವಿನಾಯಕ ದೇಸಾಯಿ, ಶುಭದಾ ದೇಶಪಾಂಡೆ, ನರಸಿಂಹ ಕಾಳಗಿ, ಕೇಶವ ಕುಲಕರ್ಣಿ, ಗಿರೀಶ ಉಡುಪಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Share this article