ಕನ್ನಡಪ್ರಭ ವಾರ್ತೆ ಹಾಸನ
ಏಪ್ರಿಲ್ ೧೩ರಂದು ನಡೆಯುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿಯಾಗಿ ಡಾ. ಬಿ. ಭಾನುಪ್ರಕಾಶ್ ಶರ್ಮಾ ಸ್ಪರ್ಧೆ ಮಾಡಿರುವುದಾಗಿ ಮಹಾಸಭಾದ ವಲಯ ಉಪಾಧ್ಯಕ್ಷ ಟಿ.ಎಚ್. ಚಂದ್ರಶೇಖರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಏಪ್ರಿಲ್ ೧೩ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೂ ಚುನಾವಣೆ ನಡೆಯಲಿದ್ದು, ಮಹಾಸಭೆಯ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮಾ ಸ್ಪರ್ಧೆ ಮಾಡಿದ್ದು, ಮತವನ್ನು ನೀಡುವಂತೆ ಮನವಿ ಮಾಡಿದರು. ಭಾನುಪ್ರಕಾಶ್ ಶರ್ಮ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ೨೦೨೫ರ ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಆಗಿರುವುದು ಹಾಗು ಅಶೋಕ ಹಾರನಹಳ್ಳಿ ಮತ್ತು ಅವರ ಸಮಸ್ತ ತಂಡ ಅವರನ್ನು ಬೆಂಬಲಿಸಿದೆ.
ಮಹಾಸಭೆಯಲ್ಲಿ ಈಗಾಗಲೇ ಕಳೆದ ೩೦ ವರ್ಷಗಳಿಂದ ಸದಸ್ಯರಾಗಿ ವಿವಿಧ ಹಂತಗಳ ಪದಾಧಿಕಾರಿಯಾಗಿ ಮೂರು ಬಾರಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಹಿಂದಿನ ಅಧ್ಯಕ್ಷರ ಜೊತೆಯಲ್ಲಿ ಮತ್ತು ಹಾಲಿ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸಿ ಯಶಸ್ವಿ ಸಂಘಟಕರೆಂದು ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್‌ನೊಂದಿಗೆ ವಿಶೇಷವಾಗಿ ಗುರುತಿಸಿಕೊಂಡು ಸನಾತನ ಧರ್ಮದ ಉಳಿವಿಗೆ ಕಾಯ-ವಾಚ-ಮನಸ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಅನೇಕ ಮಠಮಾನ್ಯಗಳ ಗುರುಗಳೊಂದಿಗೆ ನಿರಂತರ ಸಂಪರ್ಕದಿಂದ ಗುರುಸೇವಾ ಹಾಗೂ ವಿಪ್ರಜನರ ಸೇವೆಯಿಂದ ಸಮಾಜದ ಏಳಿಗೆಗೆ ತನ್ನನು ತಾನು ನಿರಂತರವಾಗಿ ತೊಡಗಿಸಿಕೊಂಡಿರುತ್ತಾರೆ.ಮಕ್ಕಳಲ್ಲಿ ಧರ್ಮಜಾಗೃತಿಯನ್ನು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೧೪ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ವಿಶೇಷವಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಧರ್ಮ ಸಂರಕ್ಷಣೆ ಹಾಗು ಗೋ ಸಂರಕ್ಷಣಾ ವಿಚಾರದಲ್ಲಿ ಅನೇಕ ವಿಚಾರಗೋಷ್ಠಿಗಳನ್ನು ನಡೆಸಿ ತಾವೇ ಖುದ್ದಾಗಿ ಗೋಪಾಲನೆಗೆ ಒತ್ತುಕೊಟ್ಟಿರುತ್ತಾರೆ ಮತ್ತು ಗೋಶಾಲೆಯನ್ನು ನಡೆಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತವನ್ನು ಸಾಂಸ್ಕೃತಿಕವಾಗಿ ಮನದಟ್ಟಾಗುವಂತೆ ಸಮಾಜದ ಮಹಿಳೆಯರು, ಮಕ್ಕಳು ಮತ್ತು ಯುವ ಜನಾಂಗಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸುತ್ತಿರುತ್ತಾರೆ. ಕನ್ನಡ ಭಾಷೆ ಹಾಗೂ ಕಾವೇರಿ ಉಳಿಸಿ ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸಿ ನೆಲ-ಜಲದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದು ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಹ ಕಾರ್ಯದರ್ಶಿ ಹಾಗೂ ವಕೀಲ ಎನ್.ಎಸ್. ಗೋಪಾಲ್, ವೇಣುಗೋಪಾಲ್, ರಕ್ಷಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.