ಕನ್ನಡಪ್ರಭ ವಾರ್ತೆ ಅಥಣಿ
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನವಿದೆ. ನಾಡಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೂಡ ಪ್ರಮುಖರು. ಅವರ ದೇಶಪ್ರೇಮ, ಧೈರ್ಯ ಮತ್ತು ಶೌರ್ಯ ಮತ್ತು ಸಾಹಸ ಇಂದಿನ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ಪೂಜಿಸಲ್ಲಿಸಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಾಯಣ್ಣನ ಉತ್ಸವದ ಅಂಗವಾಗಿ ತಾಲೂಕಿಗೆ ಆಗಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೀರಜ್ಯೋತಿ ರಥಯಾತ್ರೆ ವಾಹನ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಕಿತ್ತೂರು ಚನ್ನಮ್ಮನ ಉತ್ಸವದಂತೆ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ₹1.50 ಕೋಟಿ ಬಿಡುಗಡೆ ಮಾಡಿದೆ. ಇದೇ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಉತ್ಸವದ ಉದ್ಘಾಟನೆಗೆ ಆಗಮಿಸಲಿದ್ದಾರೆ. ಜ.17 ಮತ್ತು 18 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಅಥಣಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ ಹೋರಾಟಗಾರರಲ್ಲಿ ನಮ್ಮ ನಾಡಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಲ್ಲ ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಜಾತ್ಯಾತೀತವಾಗಿ ಸಂಘಟನೆಯ ಮೂಲಕ ಸೈನ್ಯವನ್ನು ಕಟ್ಟಿಕೊಂಡು ಹೋರಾಡಿದ ಇಂತಹ ಮಹಾನ ಹೋರಾಟಗಾರರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಎಲ್ಲ ಸಮುದಾಯದವರು ಕೂಡಿಕೊಂಡು ಅವರ ಉತ್ಸವಗಳನ್ನು ಆಚರಿಸುವಂತಾಗಬೇಕು ಎಂದು ತಿಳಿಸಿದರು.ತಾಲೂಕು ತಹಸೀಲ್ದಾರ್ ವಾಣಿ.ಯು ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮಳ ಉತ್ಸವದಂತೆ ರಾಯಣ್ಣನ ಹುಟ್ಟೂರು ಸಂಗೊಳ್ಳಿಯಲ್ಲಿ ಉತ್ಸವ ನಡೆಯಬೇಕೆಂಬುವುದು ಅವರ ಅಭಿಮಾನಿಗಳ ಬೇಡಿಕೆಯಾಗಿತ್ತು. ಜಿಲ್ಲಾಡಳಿತದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ತಾಲೂಕಿನ ಜನತೆಯು ಭಾಗವಹಿಸಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅಣ್ಣಾಸಾಬ್ ತೆಲಸಂಗ ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮನ ಬಲಗೈ ಬಂಟ ಎಂದೇ ಹೆಸರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಿಡಿದೆದ್ದು, ಕೊನೆಯ ಉಸಿರಿರುವರೆಗೆ ಹೋರಾಟ ಮಾಡಿದ ಅಪ್ಪಟ ದೇಶಪ್ರೇಮಿ. ರಾಯಣ್ಣನ ದೇಶಪ್ರೇಮ, ಧೈರ್ಯ ಮತ್ತು ಸಾಹಸ ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು. ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಉತ್ಸವ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಜರುಗಲೆಂದು ಶುಭ ಹಾರೈಸಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಮೆರವಣಿಗೆ ಶಿವಯೋಗಿ ವೃತ್ತದವರೆಗೆ ಸಂಭ್ರಮ ಸಡಗರದಿಂದ ಬೀಳ್ಕೊಡಲಾಯಿತು. ಅಂಗನವಾಡಿಯ ಕಾರ್ಯಕರ್ತೆಯರು ಕುಂಭಮೇಳದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರೆ, ಡೊಳ್ಳು ಕುಣಿತದ ಕಲಾವಿದರು ದಾರಿ ಉದ್ದಕ್ಕೂ ತಮ್ಮ ಕಲೆ ಪ್ರದರ್ಶನದ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸದಾಶಿವ ಬುಟಾಳಿ, ರಾವಸಾಬ್ ಬೇವನೂರ, ನಿಂಗಪ್ಪ ಗಡದಿ, ಪುರಸಭೆ ಸದಸ್ಯ ಬೀರಪ್ಪ ಯಂಕಂಚಿ, ರಾವಸಾಬ್ ಐಹೊಳೆ, ಸಿದ್ದರಾಮ ಕಳಸಣ್ಣವರ, ಮುರಿಗೆಪ್ಪ ಹಾರೂಗೇರಿ, ತುಕಾರಾಮ ದೇವಖಾತೆ, ಶ್ರೀನಿವಾಸ ಪಟ್ಟಣ, ತಾಲೂಕು ಪಂಚಾಯತಿ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ ಕಾಂಬಳೆ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಪಶು ಸಂಗೋಪನ ಇಲಾಖೆಯ ಅಧಿಕಾರಿ ಜ್ಞಾನದೇವ ಕಾಂಬಳೆ, ಲೋಕೋಪಯೋಗಿ ಇಲಾಖೆಯ ಹಿರೇಮಠ, ಜಿಪಂ ಇಂಜಿನಿಯರಿಂಗ್ ವಿಭಾಗದ ವೀರಣ್ಣ ವಾಲಿ, ಚಿಕ್ಕನಿರಾವರಿ ಇಲಾಖೆಯ ಶ್ರೀಕಾಂತ ಮಾಕಾಣಿ, ಗ್ರಾಮ ಆಡಳಿತ ಅಧಿಕಾರಿ ಎಂ.ಎಂ.ಮಿರ್ಜಿ, ಎಸ್.ಎ.ಮರನೂರ, ಕರವೇ ಮುಖಂಡರಾದ ಜಗನ್ನಾಥ ಬಾಮನೆ, ಉದಯ ಮಾಕಾಣಿ, ಸಿದ್ದು ಮಾಳಿ, ಅನಿಲ ಒಡಿಯರ, ವೀರ ಜ್ಯೋತಿ ಯಾತ್ರೆಯ ಉಸ್ತುವಾರಿ ಸಿ.ಬಿ.ಪಾಟೀಲ, ಸುಶೀಲ್ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.