- ಕುವೆಂಪು ಕಲಾಮಂದಿರದಲ್ಲಿ ಓಣಿ ಮನೆ ಪ್ರಕಾಶನದ 25ನೇ ಸಂಭ್ರಮೋತ್ಸವ: ಪುಸ್ತಕ ಲೋಕಾರ್ಪಣೆ
ಮಕ್ಕಳಲ್ಲಿ ಸ್ವಂತಿಕೆ ಮತ್ತು ಸೃಜನಶೀಲತೆ ಬೆಳೆಸುವ ನಿಟ್ಟಿನಲ್ಲಿ ಪೋಷಕರು ಅವರಿಗೆ ಮನೆಯಲ್ಲಿ ಕಥೆ ಹೇಳುವುದು ಹಾಡು ಹಾಡುವುದು ನೃತ್ಯ ಮಾಡುವುದು ವಾದ್ಯ ನುಡಿಸುವುದು ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರತಿನಿತ್ಯ ಕಲಿಸಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಸಲಹೆ ಮಾಡಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಓಣಿ ಮನೆ ಪ್ರಕಾಶನದ 25ನೇ ಸಂಭ್ರಮೋತ್ಸವದಲ್ಲಿ ಸಾಹಿತಿ ಮೇಕನ ಗದ್ದೆ ಲಕ್ಷ್ಮಣಗೌಡರು ಬರೆದ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬದಲಾದ ವಿದ್ಯಮಾನ ಗಳಿಂದಾಗಿ ನಾವೆಲ್ಲಾ ಇಂದು ಒಂದು ರೀತಿ ಕೃತ್ರಿಮವಾದ ಬದುಕನ್ನು ಬದುಕುತ್ತಿದ್ದೇವೆ. ವಿಸ್ಮೃತಿಗೊಳಗಾಗಿ ನಮ್ಮ ಪರಂಪರೆ, ಸಾಂಪ್ರದಾಯಿಕ ವಿಜ್ಞಾನವನ್ನು ಮರೆಯುತ್ತಿದ್ದೇವೆ. ನಮ್ಮ ಮಕ್ಕಳು ಪುಸ್ತಕದ ಹುಳುಗಳಾಗಿವೆ ಅಂಕ ಗಳಿಸುವ ಯಂತ್ರಗಳಾಗಿವೆ ಎಂದು ವಿಷಾದಿಸಿದರು. ತಂದೆ ತಾಯಿ ಅಜ್ಜ ಅಜ್ಜಿ ಮನೆಯಲ್ಲಿ ತಮ್ಮ ಮಕ್ಕಳಿಗೆ ಕಥೆ ಹೇಳುವುದು, ಹಾಡು ಹಾಡುವುದು, ನೃತ್ಯ ಮಾಡುವುದು, ವಾದ್ಯ ನುಡಿಸುವುದು, ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ನಿರಂತರವಾಗಿ ಕಲಿಸಿದರೆ ಮಾತ್ರ ಮಕ್ಕಳು ಸ್ವಂತಿಕೆ ಬೆಳೆಸಿ ಕೊಳ್ಳುತ್ತಾರೆ, ಸೃಜನಶೀಲರಾಗುತ್ತಾರೆ, ಮಾನಸಿಕ ದೈಹಿಕವಾಗಿ ಸದೃಢರಾಗುತ್ತಾರೆ ಎಂದು ಕಿವಿಮಾತು ಹೇಳಿದರು.ಮೇಕನಗದ್ದೆ ಲಕ್ಷ್ಮಣಗೌಡರು ಸಾಹಿತಿ, ಸಂಶೋಧಕ, ಲೇಖಕರಾಗಿ ಬೆಳೆದಿರುವುದು ಮಲೆನಾಡಿಗೆ ಹೆಮ್ಮೆಯ ಸಂಗತಿ . ಲಕ್ಷ್ಮಣಗೌಡರು ರಾಷ್ಟ್ರಕವಿ ಕುವೆಂಪು ಮತ್ತು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಯವರಿಂದ ಪ್ರಭಾವಿತರಾಗಿದ್ದು ತಮ್ಮ ಬರಹ ಗಳಲ್ಲಿ ಅದರ ಚಾಪು ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡರು ಬರೆದಿರುವ ಏಳು ಪುಸ್ತಕಗಳನ್ನು ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಭಿಮಾನಿಗಳು ಲಕ್ಷ್ಮಣ ಗೌಡರನ್ನು ಸನ್ಮಾನಿಸಿ ಅಭಿನಂದಿಸಿದರು.
ಓಣಿ ಮನೆ ಪ್ರಕಾಶನದ ಮಹಾ ಪೋಷಕ ಎಂ.ಬಿ. ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಕನ್ನಡ ಸಂಘಟನೆಗಳ ಒಕ್ಕೂಟದ ಸಂಚಾಲಕ ವಿ.ಎಂ. ಕುಮಾರಸ್ವಾಮಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ಡಾ. ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ, ಸಾಹಿತಿ ಭಾಷಾಂತರಕಾರ ಡಾ. ಡಿ.ಎಸ್. ಜಯಪ್ಪಗೌಡ, ನಿವೃತ್ತ ಶಾಸನ ತಜ್ಞ ಎಚ್.ಎಂ. ನಾಗರಾಜ ರಾವ್, ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಇಂಜಿನಿಯರ್ ಅರವಿಂದಗೌಡ, ಆಶಾಕಿರಣ ಅಂಧ ಮಕ್ಕಳ ಶಾಲೆ ಪ್ರಾಂಶುಪಾಲ ಲಕ್ಷ್ಮಣಗೌಡ ಉಪಸ್ಥಿತರಿದ್ದರು. 14 ಕೆಸಿಕೆಎಂ 3