ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಗೋಪಾಲಸ್ವಾಮಿ ಬೆಟ್ಟಕ್ಕೆ ಅರಣ್ಯ ಇಲಾಖೆಯ ಕೋರಿಕೆ ಮೇರೆಗೆ ತಹಸೀಲ್ದಾರ್ ಕ್ಯಾಮೆರಾ ಹಾಗೂ ಡ್ರೋನ್ ಚಿತ್ರೀಕರಣ ನಿಷೇಧಗೊಳಿಸಿದ ಬೆನ್ನಲ್ಲೆ ಕನ್ನಡಪ್ರಭ ವರದಿಗೂ ಸ್ಪಂದಿಸಿ ಗೋಪಾಲಸ್ವಾಮಿ ದೇವಸ್ಥಾನದ ಬಳಿ ಅರ್ಚಕರು ಪ್ರಸಾದ ನೀಡುವದನ್ನು ನಿಲ್ಲಿಸಬೇಕು ಎಂದು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಫೆ.9 ರಂದು ಗೋಪಾಲಸ್ವಾಮಿ ಬೆಟ್ಟದಲ್ಲಿ ಡ್ರೋನ್ ಹಾಗೂ ಕ್ಯಾಮೆರಾ ನಿಷೇಧಿಸಿ ತಹಸೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದರು. ತಹಸೀಲ್ದಾರ್ ಆದೇಶದ ಬಳಿಕ ಕನ್ನಪ್ರಭ ಪತ್ರಿಕೆ ಫೆ.10 ರಂದು ದೇವಸ್ಥಾನಕ್ಕೆ ಬರುವ ಕಾಡಾನೆಗೆ ದೇವಸ್ಥಾನದ ಅರ್ಚಕರು ಯಾವುದೇ ರೀತಿಯ ಪಾಯಸ ಸೇರಿದಂತೆ ಇನ್ನಿತರ ಆಹಾರ ನೀಡದಂತೆ ತಾಲೂಕು ಆಡಳಿತ ಸೂಚನೆ ನೀಡಬೇಕು ಎಂದು ವರದಿ ಪ್ರಕಟಿಸಿ ತಹಸೀಲ್ದಾರ್‌ರನ್ನು ಗಮನ ಸೆಳೆದಿತ್ತು. ಅಂದು ಕನ್ನಡಪ್ರಭದೊಂದಿಗೆ ತಹಸೀಲ್ದಾರ್ ಟಿ.ರಮೇಶ್ ಬಾಬು ಪ್ರತಿಕ್ರಿಯಿಸಿ ಗೋಪಾಲಸ್ವಾಮಿ ಬೆಟ್ಟದ ಅರ್ಚಕರು ಇನ್ಮುಂದೆ ಪಾಯಸ ಸೇರಿದಂತೆ ಇನ್ನಿತ ಆಹಾರ ಕಾಡಾನೆಗೆ ನೀಡದಂತೆ ಹೇಳಲಾಗುವುದು ಎಂದು ಭರವಸೆ ನೀಡಿದ್ದರು.ಹೊಸ ಆದೇಶವೇನು?:1.ಬೆಟ್ಟದ ತಪ್ಪಲಿನಿಂದ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶವಿದೆ. ಸಂಜೆ 4ರ ಬದಲು 3 ಗಂಟೆಗೆ ಮಾತ್ರ ಸಂಚರಿಸಬೇಕು.
2. ಭಕ್ತರಿಗೆ ನೀಡುವ ಪ್ರಸಾದದ ವಾಸನೆಯಿಂದ ಕಾಡಾನೆಯು ದೇವಾಲಯದ ಬಳಿ ಬರುತ್ತಿದ್ದು ಪ್ರಸಾದ ನೀಡಲು ಪರ್ಯಾಯ ಸ್ಥಳವಾಗಿ ಬೆಟ್ಟದ ತಪ್ಪಲಿನ ಗೇಟ್‌ನ ಹೊರ ಭಾಗದಲ್ಲಿ ನೀಡಬೇಕು.3. ಸಂಜೆ 3 ಗಂಟೆ ದೇವಸ್ಥಾನಕ್ಕೆ ತೆರಳುವ ಬಸ್‌ನಲ್ಲಿ ಭಕ್ತರು ಹಾಗೂ ದೇವಾಲಯದ ಸಿಬ್ಬಂದಿ ಸಂಜೆ 4.30 ರೊಳಗೆ ಬೆಟ್ಟದಿಂದ ವಾಪಸ್ ತೆರಳಬೇಕು.4. ಹಂಗಳ ಹೋಬಳಿಯ ಇಬ್ಬರು ಗ್ರಾಮ ಆಡಳಿತ ಅಧಿಕಾರಿಗಳನ್ನು ಪ್ರತಿ ಶನಿವಾರ ಮತ್ತು ಭಾನುವಾರ ಭಕ್ತರು, ಪ್ರವಾಸಿಗರನ್ನು ನಿಯಂತ್ರಿಸಲು ಗೋಪಾಲಸ್ವಾಮಿ ಬೆಟ್ಟಕ್ಕೆ ನಿಯೋಜಿಸಲಾಗುವುದು.