ಹೊಸಪೇಟೆ: ಮಹಿಳೆಯರು ಅಬಲೆಯರಲ್ಲ, ಸಬಲೆಯರು, ಪ್ರಸ್ತುತ ಸಮಾಜದಲ್ಲಿ ದೊರೆಯುತ್ತಿರುವ ಅವಕಾಶ ಸಮರ್ಥವಾಗಿ ಬಳಸಿಕೊಂಡು ಉನ್ನತ ಸ್ಥಾನ ಅಲಂಕರಿಸಬೇಕು. ಜೀವನದ ಪ್ರತಿಯೊಂದು ಹಂತದಲ್ಲೂ ಸವಾಲು, ಅವಮಾನ ಎದುರಾಗುವುದು ಸಹಜ. ಆದರೆ ಅವುಗಳಿಗೆ ಎದೆಗುಂದದೆ,ಅವಮಾನ ಮೆಟ್ಟಿನಿಂತು ಮುನ್ನಡೆಯುವ ಛಲ ಮಹಿಳೆಯರಲ್ಲಿ ಇರಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕರೆ ನೀಡಿದರು.
ಮಹಿಳೆಯರು ಮತ್ತೊಬ್ಬರ ಮುಂದೆ ಕೈಚಾಚಿ ಬೇಡುವ ಸ್ಥಿತಿಯಲ್ಲಿ ಇರಬಾರದು. ಬದಲಾಗಿ, ಮತ್ತೊಬ್ಬರಿಗೆ ನೆರವಾಗುವಷ್ಟು ಸಾಮರ್ಥ್ಯ ಮತ್ತು ಸ್ವಾವಲಂಬನೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಹಲವು ವರ್ಷಗಳಿಂದ ಮಹಿಳೆಯರನ್ನು ಮಕ್ಕಳನ್ನು ಹೆರುವ ಮತ್ತು ಕುಟುಂಬದ ಜವಾಬ್ದಾರಿ ನಿರ್ವಹಿಸುವ ವ್ಯಕ್ತಿಗಳಾಗಿ ಮಾತ್ರ ನೋಡುವ ಮನೋಭಾವ ಸಮಾಜದಲ್ಲಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಅವುಗಳನ್ನು ಸದ್ಭಳಕೆ ಮಾಡಿಕೊಂಡು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಪ್ರತಿಯೊಬ್ಬ ಮಹಿಳೆಯೂ ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತರಾಗಬೇಕು. ಉತ್ತಮ ಸ್ನೇಹಿತರನ್ನು ಸಂಪಾದಿಸಿಕೊಳ್ಳುವುದರ ಜತೆಗೆ ಜೀವನದಲ್ಲಿ ಸಾಧನೆ ಮಾಡುವ ಗುರಿಯೊಂದಿಗೆ ನಿರಂತರ ಪ್ರಯತ್ನಿಸಬೇಕು. ಹೆಣ್ಣು ಮಕ್ಕಳು ಹುಟ್ಟಿರುವುದೇ ಜೀವನದಲ್ಲಿ ಏನಾದರೂ ಸಾಧಿಸಲು ಹೊರತು ಅಡುಗೆಮನೆಗೆ ಸೀಮಿತವಾಗಿರಲು ಅಲ್ಲ. ಮಹಿಳೆಯರ ಸಾಮರ್ಥ್ಯಕ್ಕೆ ತಕ್ಕ ಅವಕಾಶ ಮತ್ತು ಗೌರವ ದೊರೆತಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಪ್ರೀತಿ ಪ್ರೇಮದ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುವುದು, ಬೆದರಿಕೆ ಹಾಕುವುದು ಅಥವಾ ಮಹಿಳೆಯರು ಯಾವುದೇ ರೀತಿಯ ಕಿರುಕುಳ ಹಾಗೂ ಶೋಷಣೆಗೆ ಒಳಗಾದಾಗ ಭಯಭೀತರಾಗದೆ ಧೈರ್ಯದಿಂದ ಎದುರಿಸಬೇಕು. ಇಂತಹ ಸಂದರ್ಭಗಳಲ್ಲಿ ಮೌನವಾಗಿರದೆ ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ನ್ಯಾಯ ಪಡೆದುಕೊಳ್ಳಬೇಕು. ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವುದೇ ಮಹಿಳೆಯರ ಮೊದಲ ಹೆಜ್ಜೆಯಾಗಬೇಕು ಎಂದು ಸಲಹೆ ನೀಡಿದರು.
ಹೊಸಪೇಟೆಯಿಂದ ಮಗ್ಗಿಮಾವನಹಳ್ಳಿ ಮತ್ತು ಮರಿಯಮ್ಮನಹಳ್ಳಿಗೆ ಹಾಗೂ ಬೊಮ್ಮಗಟ್ಟದಿಂದ ಹೊಸಪೇಟೆಗೆ ತೆರಳಲು ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲ. ಬಸ್ ವ್ಯವಸ್ಥೆ ಇದ್ದರೂ ಸರಿಯಾದ ಸಮಯಕ್ಕೆ ಬರುವುದಿಲ್ಲ ಆದರಿಂದ ಸಾಕಷ್ಟು ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಮುಂದುವರಿಸಲು ತೆರಳಲು ಹಿಂದೇಟು ಹಾಕುತ್ತಿದ್ದು, ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿದಲ್ಲಿ ಎಲ್ಲರೂ ಸುಶಿಕ್ಷಿತರಾಗಲಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬರು ಮನವಿ ಮಾಡಿದರು.
ವಿಜಯನಗರ ಕಾಲೇಜಿನ ಅಧ್ಯಕ್ಷ ಎನ್.ಮಲ್ಲಿಕಾರ್ಜುನ ಮೆಟ್ರಿ, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಡಿವೈಎಸ್ಪಿ ಪಿ.ಮುರಳೀಧರ್, ವಿವಿ ಸಂಘದ ಮಹಿಳಾ ಅಧ್ಯಕ್ಷೆ ರಾಜೇಶ್ವರಿ, ಗಂಗಪ್ಪ, ಕಾಲೇಜಿನ ಪ್ರಾಚಾರ್ಯ ಮಹಾಂತೇಶ್ ಎನ್.ಆರಾಧ್ಯಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.