ಜನಿಸಿದ ಒಂದು ಗಂಟೆಯಲ್ಲಿನ ಎದೆಹಾಲು ಅಮೃತಕ್ಕೆ ಸಮಾನ

KannadaprabhaNewsNetwork |  
Published : Aug 08, 2025, 01:02 AM IST
7ಡಿಡಬ್ಲೂಡಿ2ನರೇಂದ್ರ ಗ್ರಾಮದಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್‌ ಅಸೋಶಿಯೇಶನ್ ಆಫ್ ಇಂಡಿಯಾ ಜಾಗತಿಕ ಸ್ತನ್ಯಪಾನ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಮಕ್ಕಳಿಗೆ ಆರೋಗ್ಯವಂತ ಶಿಶು ಪ್ರದರ್ಶನದಲ್ಲಿ ವಿಜೇತ ಮಗುವಿಗೆ ಬಹುಮಾನ ವಿತರಿಸಲಾಯಿತು.  | Kannada Prabha

ಸಾರಾಂಶ

ಎದೆ ಹಾಲನ್ನು ಮಗುವಿಗೆ ಉಣಿಸುವುದರಿಂದ ಅವರಲ್ಲಿ ರೋಗನಿರೋಧ ಶಕ್ತಿ ಹೆಚ್ಚುತ್ತದೆ. ತಜ್ಞರ ಪ್ರಕಾರ ತಾಯಂದಿರು ಎದೆಹಾಲು ಉಣಿಸುವುದರ ಮೂಲಕ ಭಾರತದಲ್ಲಿ 1.5 ಲಕ್ಷ ಕ್ಕಿಂತ ಹೆಚ್ಚು ಮಕ್ಕಳ ಪ್ರಾಣ ರಕ್ಷಣೆ ಮಾಡಲು ಸಾಧ್ಯವಾಗಿದೆ.

ಧಾರವಾಡ: ಮಗು ಜನಿಸಿದ ಮೊದಲ ಒಂದು ಗಂಟೆಯಲ್ಲಿಯ ತಾಯಿ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಎಚ್‌.ಎಚ್‌. ಕುಕನೂರ ಹೇಳಿದರು.

ಸಮೀಪದ ನರೇಂದ್ರ ಗ್ರಾಮದಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್‌ ಅಸೋಶಿಯೇಶನ್ ಆಫ್ ಇಂಡಿಯಾ (ಎಫ್‌ಪಿಎಐ), ರೋಟರಿ ಕ್ಲಬ್ ಅಫ್ ಸೇವೆನ್ ಹಿಲ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಜಾಗತಿಕ ಸ್ತನ್ಯಪಾನ ಸಪ್ತಾಹ ಅಂಗವಾಗಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯವಂತ ಶಿಶು ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಎದೆ ಹಾಲನ್ನು ಮಗುವಿಗೆ ಉಣಿಸುವುದರಿಂದ ಅವರಲ್ಲಿ ರೋಗನಿರೋಧ ಶಕ್ತಿ ಹೆಚ್ಚುತ್ತದೆ. ತಜ್ಞರ ಪ್ರಕಾರ ತಾಯಂದಿರು ಎದೆಹಾಲು ಉಣಿಸುವುದರ ಮೂಲಕ ಭಾರತದಲ್ಲಿ 1.5 ಲಕ್ಷ ಕ್ಕಿಂತ ಹೆಚ್ಚು ಮಕ್ಕಳ ಪ್ರಾಣ ರಕ್ಷಣೆ ಮಾಡಲು ಸಾಧ್ಯವಾಗಿದೆ ಎಂದರು.

ಮಕ್ಕಳಿಗೆ ಬಾಟಲ್‌ ಹಾಲು ಕೊಡುವುದು ಒಳ್ಳೆಯದಲ್ಲ. ಇದರ ಪರಿಣಾಮ ಹಿಂದಿನ ದಿನಗಳಿಗೆ ಹೋಲಿಸಿದರೆ, ಪ್ರಸ್ತುತ ಮಹಿಳೆಯರಲ್ಲಿ ತಿಳುವಳಿಕೆ ಮೂಡಿ ಎದೆಹಾಲು ಉಣಿಸುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಮಗುವಿಗೆ ಎದೆ ಹಾಲು ಉಣಿಸುವ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು. ಇದಕ್ಕಾಗಿ ಕಾರ್ಯನಿರ್ವಹಿಸಲು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಒಟ್ಟಿಗೆ ಸೇರಿ ಕಾರ್ಯ ಮಾಡಬೇಕೆಂದರು.

ಎಫ್‌ಪಿಎಐನ ಪ್ರಧಾನ ವ್ಯವಸ್ಥಾಪಕಿ ಸುಜಾತಾ ಎಸ್. ಆನಿಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಂದಿರು ದೀರ್ಘಕಾಲ ಹಾಲುಣಿಸುವುದರಿಂದ ಮಕ್ಕಳ ನಡುವಿನ ಅಂತರ ಹೆಚ್ಚಿಸುವದಲ್ಲದೇ ಸ್ತನ ಕಾನ್ಸರ್‌ ಅಂತಹ ರೋಗವನ್ನು ತಡೆಯಬಹುದು. ತಾಯಿ ಕನಿಷ್ಟ 2 ವರ್ಷಗಳ ವರೆಗೆ ಹಾಲುಣಿಸಬೇಕು, ತಾಳ್ಮೆಯಿಂದ ಯಾವುದೇ ತಾರತಮ್ಯವಿಲ್ಲದೆ ಪ್ರೀತಿಯಿಂದ ಹಾಲುಣಿಸುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿ ನೀಶಾ ಗಲಗಲಿ ಮಾತನಾಡಿ, ಹಣ್ಣು- ಹಾಲಿಗಿಂತ ಬೆಣ್ಣೆ- ತುಪ್ಪಕ್ಕಿಂತ ಎದೆಹಾಲು ಶ್ರೇಷ್ಠ. ಅಲ್ಲದೇ ಎದೆಹಾಲು ಉಣಿಸುವುದರಿಂದ ತಾಯಿ- ಮಗುವಿನ ಬಾಂಧವ್ಯ ಹೆಚ್ಚುತ್ತದೆ ಮತ್ತು ಹೆಚ್ಚು ಹಾಲು ಕುಡಿದಷ್ಟು ಮಗು ಆರೋಗ್ಯಯುತವಾಗಿ ಬೆಳೆಯುತ್ತದೆ. ಮಗುವಿಗೆ ಹಾಲು ಕುಡಿಸುವುದರಿಂದ ತಾಯಿಗೆ ಒಂದು ಕಿಲೋಮೀಟರ್ ನಡೆದಾಗಿನಷ್ಟು ಆರೋಗ್ಯ ವೃದ್ಧಿಸುತ್ತದೆ. ಅಲ್ಲದೇ ಹಾಲುಣಿಸಿದಷ್ಟು ಗರ್ಭಧಾರಣೆ ಮುಂದೂಡಲು ಸಾಧ್ಯವಾಗುತ್ತದೆ ಎಂದರು.

ರೋಟರಿ ಕ್ಲಬ್ ಆಫ್ ಸೇವನ್ ಹಿಲ್ಸ್ ಅಧ್ಯಕ್ಷೆ ಡಾ. ಮಾಧುರಿ ಬಿರಾದಾರ, ಕಾರ್ಯದರ್ಶಿ ಡಾ. ದೃಷ್ಠಿ ದೇಶಪಾಂಡೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ನಾಗಪ್ಪ ಹಟ್ಟಿಹೋಳಿ, ಉಪಾದ್ಯಕ್ಷೆ ಮಲ್ಲಮ್ಮಾ, ಡಾ. ಕಮಲಾ ಬೈಲೂರ, ಡಾ. ಅಕ್ಕಮಾಹಾದೇವಿ ಹಿರೇಮಠ ಇದ್ದರು. ಎನ್.ಎಫ್. ಮಡಿವಾಳರ ಸ್ವಾಗತಿದರು. ಬಸಮ್ಮಾ ದೇಸಾಯಿ ವಂದಿಸಿದರು, ಪ್ರಕಾಶ ಜೋಡಳ್ಳಿ ನಿರೂಪಿಸಿದರು.

120ಕ್ಕೂ ಹೆಚ್ಚು ಮಕ್ಕಳು ಮತ್ತು ಪಾಲಕರು ಆರೋಗ್ಯವಂತ ಶಿಶು ಪ್ರದರ್ಶನ ಮತ್ತು ತಪಾಸಣೆಯಲ್ಲಿ ಭಾಗವಹಿಸಿದರು.

PREV

Recommended Stories

ದೊಡ್ಡೆತ್ತಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹6 ಲಕ್ಷ ಲಾಭ: ವಸಂತಕುಮಾರ್‌
ಕೃಷ್ಣಮೂರ್ತಿಪುರಂ ಅಭಿನವ ಮಂತ್ರಾಲಯದಲ್ಲಿ ರಾಯರ ಆರಾಧನೆ