ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
1992 ರಿಂದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಪ್ರಾರಂಭವಾಗಿದೆ. ಆದರೆ, ನಮ್ಮ ಪೂರ್ವಜರು ಹಿಂದಿನಿಂದಲೂ ತಾಯಿಯ ಎದೆ ಹಾಲಿಗೆ ಹೆಚ್ಚು ಮಹತ್ವ ನೀಡಿದ್ದರು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ತಿಳಿಸಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಆರೋಗ್ಯ ಇಲಾಖೆ, ರೋಟರಿ ಕ್ಲಬ್, ಇನ್ನರ ವ್ಹೀಲ್, ಹಿರಿಯ ನಾಗರಿಕ ವೇದಿಕೆ,ಪುಷ್ಪ ನರ್ಸಿಂಗ್ ಕಾಲೇಜಿನ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಶು ಮರಣ, ತಾಯಿ ಮರಣ ತಗ್ಗಿಸಬೇಕು ಎಂಬುದೇ ವಿಶ್ವ ಸ್ತನ್ಯಪಾನ ಸಪ್ತಾಹದ ಮುಖ್ಯ ಉದ್ದೇಶ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಉದ್ಘಾಟಿಸಿ ಮಾತನಾಡಿ, ತಾಯ್ತನ ಎಂಬುದು ಮಹಿಳೆಯರಿಗೆ ದೇವರು ಕೊಟ್ಟ ವರವಾಗಿದೆ.ಇದನ್ನು ಮಹಿಳೆಯರು ಸಂಭ್ರಮಿಸಬೇಕು.ಒತ್ತಡದ ಬದುಕಿನಲ್ಲಿ ಮಗುವಿಗೆ ಎದೆ ಹಾಲನ್ನು ಕಾಲ,ಕಾಲಕ್ಕೆ ನೀಡುವುದು ಮಹಿಳೆಯರಿಗೆ ಸಾದ್ಯವಾಗುತ್ತಿಲ್ಲ.ಒತ್ತಡ ಕಡಿಮೆ ಮಾಡಿಕೊಂಡು ಎದೆ ಹಾಲನ್ನು ಸಮರ್ಪಕವಾಗಿ ನೀಡಬೇಕು.ಗರ್ಬಿಣಿಯರು, ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಕರೆ ನೀಡಿದರು.ಅತಿಥಿಯಾಗಿದ್ದ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಸ್ತನ್ಯಪಾನದ ಮಹತ್ವದ ಬಗ್ಗೆ ಅನೇಕ ಪುಸ್ತಕಗಳು ಬಂದಿದೆ.ಎದೆ ಹಾಲು ನೀಡುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಸುಧಾರಿಸಲಿದೆ.ಎದೆ ಹಾಲನ್ನು ನೀಡುವುದರಿಂದ ಮಹಿಳೆಯರಿಗೆ ಎದೆ ಕ್ಯಾನ್ಸರ್ ಬರುವುದಿಲ್ಲ.ಮಗುವಿಗೆ ಎದೆ ಹಾಲನ್ನು ನೀಡುವುದರಿಂದ ಮಗುವಿನಲ್ಲಿ ರೋಗ ನಿರೋದಕ ಶಕ್ತಿ ವೃದ್ದಿಸಲಿದೆ ಎಂದರು.
ಸರ್ಕಾರಿ ಆಸ್ಪತ್ರೆಯ ಹಿರಿಯ ಶುಶ್ರೂಶನಾ ಅಧಿಕಾರಿ ಜಾಸ್ಮಿನ್ ಎದೆಹಾಲಿನ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಗಳಾಗಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಭವ್ಯ ಸಂತೋಷ್, ಹೆರಿಗೆ ತಜ್ಞೆ ಡಾ.ಚಂದ್ರಪ್ರಭ,ಹಿರಿಯ ನಾಗರೀಕ ಸಮಿತಿ ಅಧ್ಯಕ್ಷ ದಿನೇಶ್, ಸಮಿತಿ ಸದಸ್ಯ ಕುಮಾರ್, ಮಕ್ಕಳ ತಜ್ಞ ಡಾ.ಪ್ರಭು ಇದ್ದರು. ಶಿಲ್ಪ ಸ್ವಾಗತಿಸಿದರು. ಪಿ.ಪಿ.ಬೇಬಿ ಕಾರ್ಯಕ್ರಮ ನಿರೂಪಿಸಿದರು, ರೇಣುಕ ವಂದಿಸಿದರು.