ಸರ್ಕಾರಿ ಶಾಲೆ ಪ್ರವೇಶಕ್ಕೂ ಲಂಚ, ಲೋಕಾಯುಕ್ತ ಬಲೆಗೆ ಮುಖ್ಯಶಿಕ್ಷಕ

KannadaprabhaNewsNetwork | Published : May 20, 2025 1:18 AM
ಮೇ 17ರಂದು ₹5 ಸಾವಿರಗಳನ್ನು ಮುಂಗಡವಾಗಿ ಪಡೆದು, ಬಾಕಿ ₹5 ಸಾವಿರ ಸೋಮವಾರ ಸವಣೂರು ನಗರದ ಹಾವಣಗಿ ಪ್ಲಾಟ್‌ನ ತಮ್ಮ ಮನೆಯಲ್ಲಿ ಪಡೆದುಕೊಳ್ಳುತ್ತಿರುವಾಗಲೇ ಲೋಕಾಯುಕ್ತರು ದಾಳಿ ನಡೆಸಿ ಬಂಧಿಸಿದ್ದಾರೆ.
Follow Us

ಹಾವೇರಿ: ಸರ್ಕಾರಿ ಶಾಲೆಗೆ ಪ್ರವೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಪಾಲಕರ ಕಡೆಯಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲೆಯ ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸೋಮವಾರ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಲೋಕಾಯುಕ್ತ ಬಲೆಗೆ ಬಿದ್ದ ಶಿಕ್ಷಕ. ಸವಣೂರು ಖಾದರಭಾಗ ಓಣಿಯ ಅಕ್ಬರ್ ಅಬ್ದುಲ್ ಹಮೀದ ಕಂದಿಲವಾಲೆ ತಮ್ಮ ಮಗನ ಪ್ರವೇಶಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಶಾಲೆಯ ಪ್ರವೇಶಕ್ಕೆ ₹50 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಕೊನೆಗೆ ₹10 ಸಾವಿರಕ್ಕೆ ಒಪ್ಪಿಕೊಂಡು, ಮೇ 17ರಂದು ₹5 ಸಾವಿರಗಳನ್ನು ಮುಂಗಡವಾಗಿ ಪಡೆದು, ಬಾಕಿ ₹5 ಸಾವಿರ ಸೋಮವಾರ ಸವಣೂರು ನಗರದ ಹಾವಣಗಿ ಪ್ಲಾಟ್‌ನ ತಮ್ಮ ಮನೆಯಲ್ಲಿ ಪಡೆದುಕೊಳ್ಳುತ್ತಿರುವಾಗಲೇ ಲೋಕಾಯುಕ್ತರು ದಾಳಿ ನಡೆಸಿ ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಮಧುಸೂದನ ಸಿ. ನೇತೃತ್ವದಲ್ಲಿ ಮಂಜುನಾಥ ಪಂಡಿತ್, ಬಸವರಾಜ ಹಳಬಣ್ಣನವರ, ದಾದಾವಲಿ ಕೆ.ಎಚ್. ಹಾಗೂ ಸಿಬ್ಬಂದಿಗಳಾದ ಸಿ.ಎಂ. ಬಾರ್ಕಿ, ಎಂ. ಕೆ. ನದಾಫ್, ಬಿ. ಎಂ. ಕರ್ಜಗಿ, ಎಂ.ಕೆ. ಲಕ್ಷ್ಮೇಶ್ವರ, ಆನಂದ ತಳಕಲ್ಲ, ಎಸ್.ಎನ್. ಕಡಕೋಳ, ಮಂಜುನಾಥ ಬಿ.ಎಲ್., ರಮೇಶ ಗೆಜ್ಜಿಹಳ್ಳಿ, ಶಿವರಾಜ ಲಿಂಗಮ್ಮನವರ, ಆನಂದ ಸಂಕಣ್ಣನವರ, ಮಹಾಂತೇಶ ಕೊಂಬಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.ರೈಲಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು

ರಾಣಿಬೆನ್ನೂರು: ಚಲಿಸುವ ರೈಲಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವಿಗೀಡಾದ ಘಟನೆ ಸೋಮವಾರ ನಗರ ಮತ್ತು ದೇವರಗುಡ್ಡ ರೈಲು ನಿಲ್ದಾಣಗಳ ನಡುವಿನ ಕೂನಬೇವು ರೈಲ್ವೆ ಬ್ರಿಡ್ಜ್ ಬಳಿ ಸಂಭವಿಸಿದೆ.ಮೃತನು ಸುಮಾರು 45- 50 ವರ್ಷದವನಿದ್ದು, ಮೈಮೇಲೆ ಬಿಳಿ ಬಣ್ಣದ ಫುಲ್ ತೋಳಿನ ಶರ್ಟ್, ಚೆಕ್ಸ್ ಲುಂಗಿ, ಹಸಿರು ಬಣ್ಣದ ಬನಿಯನ್, ಪಟಾಪಟಿ ಚಡ್ಡಿ ಧರಿಸಿರುತ್ತಾನೆ.ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿರುತ್ತಾನೆ. ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ರೈಲ್ವೆ ಪೊಲೀಸ್ ಠಾಣೆ ಹುಬ್ಬಳ್ಳಿ ಮತ್ತು ರೈಲ್ವೆ ಪೊಲೀಸ್ ಠಾಣೆ ರಾಣಿಬೆನ್ನೂರು ಮೊ. 9844892787 ಸಂಪರ್ಕಿಸಬಹುದು. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.