ಬಿರುಸಿನ ಮಳೆ - ತೆಪ್ಪದ ಸಹಾಯದಿಂದ ಪ್ರವಾಹ ದಾಟಿದ ವಧುವಿನ ಮನೆಯವರು

KannadaprabhaNewsNetwork |  
Published : Jun 27, 2025, 12:56 AM IST
ವಧು | Kannada Prabha

ಸಾರಾಂಶ

ನಾಪೋಕ್ಲು ವ್ಯಾಪ್ತಿ ರಸ್ತೆ ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಬಿರುಸಿನ ಮಳೆ ನಡುವೆಯೂ ಚೆರಿಯಪರಂಬುವಿನ ವರ ಮತ್ತು ಮಡಿಕೇರಿಯ ವಧುವಿನ ವಿವಾಹ ಸಮಾರಂಭ ಜರುಗಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲುಕೊಡಗಿನಾದ್ಯಂತ ಬಿರುಸಿನ ಮಳೆಯಾಗಿದ್ದು ನಾಪೋಕ್ಲು ವ್ಯಾಪ್ತಿಯ ಹಲವೆಡೆ ರಸ್ತೆಗಳು ಜಲಾವೃತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿವೆ. ಇಂತಹ ಬಿರುಸಿನ ಮಳೆಯ ನಡುವೆ ಇಲ್ಲಿಯ ಚೆರಿಯಪರಂಬುವಿನ ವರ ಹಾಗೂ ಮಡಿಕೇರಿಯ ವಧುವಿನ ವಿವಾಹ ಸಮಾರಂಭ ಜರುಗಿದೆ.

ಕಳೆದ ವಾರ ಮಡಿಕೇರಿಯಲ್ಲಿ ಮದುವೆ ಕಾರ್ಯಕ್ರಮ ಜರುಗಿದ ಬಳಿಕ ವಧುವನ್ನು ಇಲ್ಲಿಯ ಚೆರಿಯಪರಂಬುವಿನ ವರನ ಮನೆಗೆ ಕಳುಹಿಸಿಕೊಡಲಾಗಿತ್ತು. ಹಿಂತಿರುಗಿ ತವರು ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯದಂತೆ ಗುರುವಾರ. ವಧುವಿನ ಮನೆಯವರು ವಧುವನ್ನು ಕರೆದುಕೊಂಡು ಹೋಗಲು ವರನ ಮನೆಗೆ ಆಗಮಿಸುವಾಗ ಮಳೆ, ಪ್ರವಾಹದಿಂದಾಗಿ ನಾಪೋಕ್ಲು - ಚೆರಿಯಪರಂಬು ರಸ್ತೆ ಪ್ರವಾಹದಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡು ಇಲ್ಲವಾಗಿದೆ. ಬಂದವರು ಪರ್ಯಾಯ ಮಾರ್ಗವಾಗಿ ತೆಪ್ಪ ತರಿಸಿ ತೆಪ್ಪದ ಮೂಲಕ ಪ್ರವಾಹದ ನೀರಿನಲ್ಲಿ ಸಾಗಿದ ಮಂದಿ ಚೆರಿಯಪರಂಬುವಿನಲ್ಲಿರುವ ವರನ ಮನೆ ತಲುಪಿದರು. ಕಾರ್ಯಕ್ರಮದ ಬಳಿಕ ವಧುವನ್ನು ತವರು ಮನೆಗೆ ಕರೆದುಕೊಂಡು ಹೋಗವ ಸಂಪ್ರದಾಯ ಪಾಲಿಸಲು ಮಹಿಳೆಯರು, ಮಕ್ಕಳು ತೆಪ್ಪದಲ್ಲಿ ಸಾಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.

---------------------------

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುವಿವಿಧೆಡೆ ರಸ್ತೆಗಳು ಜಲಾವೃತ । ಕಾವೇರಿ ನದಿ ಪ್ರವಾಹದಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಕನ್ನಡಪ್ರಭ ವಾರ್ತೆ ನಾಪೋಕ್ಲುಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು ಕಾವೇರಿ ನದಿ ತುಂಬಿ ಹರಿಯುತ್ತಿದೆ.ನಾಪೋಕ್ಲು ವಿಭಾಗದಲ್ಲಿ ಆದ್ರ ಮಳೆ ಬಿರುಸುಗೊಂಡಿದ್ದು ವಿವಿಧೆಡೆ ರಸ್ತೆಗಳು ಜಲಾವೃತವಾಗಿವೆ. ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಗೆ ಪ್ರವಾಹ ಬಂದಿದ್ದು ಬುಧವಾರ ಸಂಜೆಯಿಂದಲೇ ಮೂರ್ನಾಡು ರಸ್ತೆಯ ಬೊಳಿಬಾಣೆ ಬಳಿಯಲ್ಲಿ ರಸ್ತೆಗೆ ಆವರಿಸಿದ ಕಾವೇರಿ ನದಿ ಪ್ರವಾಹದಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ನಾಪೋಕ್ಲು- ಕೈಕಾಡು -ಪಾರಾಣೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲೂ ಪ್ರವಾಹ ಉಂಟಾಗಿದೆ. ಕೈಕಾಡು ರಸ್ತೆಯಲ್ಲಿರುವ ಎತ್ತು ಕಡವು ಹೊಳೆ ರಸ್ತೆಯಲ್ಲಿ ಮೈದುಂಬಿ ಹರಿದು ಸಂಚಾರ ಸ್ಥಗಿತ ಗೊಂಡಿದೆ.ಸಂಚಾರ ದುಸ್ತರವಾಗಿದೆ.:ನಾಪೋಕ್ಲು ಬೇತು ಗ್ರಾಮದ ಮೂಲಕ ಬಲಮುರಿ ಗ್ರಾಮಕ್ಕೆ ಸಂಪರ್ಕಿಸುವ ಮಕ್ಕಿ ಕಡವು ಎಂಬಲ್ಲಿ ರಸ್ತೆ ಹಾಗೂ ಸೇತುವೆ ಪ್ರವಾಹ ಆವರಿಸಿ ಸಂಚಾರ ದುಸ್ತರವಾಗಿದೆ.ಚರಿಯಪರಂಬು ಕಲ್ಲು ಮೊಟ್ಟೆ ಸಂಪರ್ಕ ರಸ್ತೆಯ ಚರಿಯಪರಂಬುವಿನಲ್ಲಿ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು ಸಂಪರ್ಕ ಕಳೆದೆರಡು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ.ಸದ್ಯಕ್ಕೆ ನಾಪೋಕ್ಲು - ಬೆಟ್ಟಗೇರಿ ಸಂಪರ್ಕಿಸುವ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು ಮಳೆ ಮುಂದುವರೆದರೆ ಕೊಟ್ಟಮುಡಿ ರಸ್ತೆಯಲ್ಲಿ ಪ್ರವಾಹ ಬಂದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.ರಸ್ತೆ ಜಲಾವೃತಗೊಂಡಿದೆ:ಸಮೀಪದ ಬಲಮುರಿಯ ಪ್ರಸಿದ್ಧ ಅಗಸ್ತ್ಯೇಶ್ವರ ದೇವಾಲಯದ ತಡೆಗೋಡೆಯವರಿಗೆ ಕಾವೇರಿ ಹೊಳೆ ತುಂಬಿ ಹರಿಯುತ್ತಿದೆ. ಇಲ್ಲಿನ ಅಂಚೆ ಕಚೇರಿಯ ಕಟ್ಟಡದ ಮೆಟ್ಟಿಲು ವರೆಗೆ ನೀರು ನಿಂತಿದ್ದು ಪಕ್ಕದ ರಸ್ತೆ ಜಲಾವೃತಗೊಂಡಿದೆ. ಇಲ್ಲಿನ ಕೆಳಗಿನ ಹಳೆಯ ಸೇತುವೆ ಪ್ರವಾಹದಲ್ಲಿ ಮುಳುಗಡೆ ಗೊಂಡಿದೆ. ಇದೀಗ ನೀರಿನ ಪ್ರಮಾಣ ಹೆಚ್ಚಾಗಿದ್ದು ಹೊಳೆಯ ದಂಡೆಯ ಸಮೀಪ ವಾಸಿಸುತ್ತಿರುವವರಿಗೆ ಇದೀಗ ಆತಂಕ ಎದುರಾಗಿದೆ. ದೇವಾಲಯದ ಮುಂಭಾಗದ ಅಶ್ವತಕಟ್ಟೆವರೆಗೆ ಕಾವೇರಿ ಹೊಳೆ ತುಂಬಿ ಹರಿಯುತ್ತಿದೆ.ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಕುಪ್ಪೋಟ್ ಸೇತುವೆ ಮೇಲೆ ಪ್ರವಾಹ ಹರಿಯುತ್ತಿದ್ದು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು ಗುರುವಾರ ಸಂಜೆ ಹೊತ್ತಿಗೆ ಸಂಪರ್ಕ ಪುನರಾರಂಭಗೊಂಡಿದೆ.ಗದ್ದೆಗಳು ಜಲಾವೃತ:ಬಲಮುರಿ ಗ್ರಾಮದಲ್ಲಿ ರಸ್ತೆ ಮತ್ತು ವಿದ್ಯುತ್ ಕಂಬಕ್ಕೆ ಮರ ಬಿದ್ದ ಪರಿಣಾಮ ನಾಪೋಕ್ಲುವಿಗೆ ಸರಬರಾಜಾಗುವ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ಮರ ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಎಮ್ಮೆ ಮಾಡು ಗ್ರಾಮದ ಗದ್ದೆಗಳು ಜಲಾವೃತಗೊಂಡು ಸಂಪೂರ್ಣ ಮುಳುಗಡೆಯಾಗಿ ರೈತರಿಗೆ ಸಂಕಷ್ಟ ಎದುರಾಗಿದೆ.ಬುಧವಾರ ಸುರಿದ ಆದ್ರ ಮಳೆಯ ಆರ್ಭಟಕ್ಕೆ ಕಕ್ಕಬ್ಬೆಯಲ್ಲಿ ರಾತ್ರಿ ಅವಾಂತರ ಸೃಷ್ಟಿಯಾಗಿದೆ. ಕಕ್ಕಬ್ಬೆ ಹೊಳೆಯು ಮೈದುಂಬಿ ಹರಿದು ಕಕ್ಕಬ್ಬೆಯಿಂದ ತೆರಳುವ ಎಲ್ಲಾ ರಸ್ತೆಗಳು ಜಲಾವೃತ ಗೊಂಡಿತ್ತು . ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆ, ಕಕ್ಕಬ್ಬೆಯಿಂದ ಕುಂಜಿಲ ಪೈನರಿ ದರ್ಗಾಕ್ಕೆ ತೆರಳುವ ರಸ್ತೆ. ನಾಪೋಕ್ಲು -ವಿರಾಜಪೇಟೆಗೆ ತೆರಳುವ ಮುಖ್ಯರಸ್ತೆ ಪ್ರವಾಹದಿಂದ ಆವರಿಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು ಗುರುವಾರ ಬೆಳಿಗ್ಗೆ ತೆರವಾಗಿದೆ.ಕಿರುಂದಾಡು ಗ್ರಾಮದ ದೇವಜನ ಪುಷ್ಪವೇಣಿ ರವರ ವಾಸದ ಮನೆಯ ಒಂದು ಭಾಗದ ಗೋಡೆ ಭಾರಿ ಗಾಳಿ ಮಳೆಯಿಂದಾಗಿ ಬುಧವಾರ ರಾತ್ರಿ ಪೂರ್ಣವಾಗಿ ಹಾನಿಯಾಗಿದೆ. ಕಿರುಂದಾಡು ಗ್ರಾಮದ ಮುಕ್ಕಟಿರ ಐನ್ ಮನೆ ಪೂರ್ಣ ಹಾನಿಯಾಗಿದ್ದು ಸ್ಥಳಕ್ಕೆ ಕಂದಾಯ ಪರಿಕ್ಷಕರಾದ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಎಮ್ಮೆಮಾಡು ಗ್ರಾಮದ ಕದಿಸಮ್ಮ ರವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಬಿದ್ದು ಹಾನಿಯಾಗಿ ಮನೆಯ ಗೋಡೆ ಬಿರುಕು ಬಿಟ್ಟಿದ್ದು ಅಪಾಯ ಎದುರಾಗಿದೆ. ಯವಕಪಾಡಿ ಗ್ರಾಮದ ಕಾಪಾಳ ಕಾಲೊನಿಯ ಮಿಲನ್ ಎಂಬವರ ಮನೆಯ ಹಿಂದಿನ ಬರೆಕುಸಿದು ಮನೆಯೊಳಗೆ ನೀರುನುಗ್ಗಿ ಅಪಾರ ನಷ್ಟ ಉಂಟಾಗಿದೆ.-------------------------------------

24 ಗಂಟೆ ಅವಧಿಯಲ್ಲಿ 17.60 ಇಂಚು ದಾಖಲೆ ಮಳೆಕಕ್ಕಬೆ ಗ್ರಾಮ ಪಂಚಾಯತಿಯ ನಾಲಾಡಿ ಗ್ರಾಮದ ಮೇಕೆಕೊಪ್ಪ ದಲ್ಲಿ 24 ಗಂಟೆ ಅವಧಿಯಲ್ಲಿ 17.60 ಇಂಚು ಅತಿ ಹೆಚ್ಚು ಮಳೆ ದಾಖಲಾಗಿದೆ. ಈ ವರ್ಷ ಜನವರಿಯಿಂದ ಗುರುವಾರ (ಇಂದಿನ) ದವರೆಗೆ ಒಟ್ಟು 140.63 ಇಂಚು ಮಳೆ ಯಾಗಿರುವುದಾಗಿ ನಾಲಾಡಿ ನಿವಾಸಿ ಚೆರಿಯಮನೆ ಕೃಷ್ಣ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಏಳು ಇಂಚಿಗಿಂತಲೂ ಅಧಿಕ ಮಳೆ ಸುರಿದಿದ್ದು ಇದುವರೆಗೆ 75 ಇಂಚು ಮಳೆಯಾಗಿದೆ .ಕಳೆದ ವರ್ಷ ಈ ಅವಧಿಗೆ 29 ಇಂಚು ಮಳೆಯಾಗಿತ್ತು ಸ್ಥಳೀಯ ನಿವಾಸಿ ಕುಲ್ಲೇಟಿರ ಅಜಿತ್ ನಾಣಯ್ಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ