ಸುಹಾಸ್‌ ಶೆಟ್ಟಿ ಹತ್ಯೆಯ 8 ಮಂದಿ ಆರೋಪಿಗಳಿಗೆ ಎನ್‌ಐಎ ಕಸ್ಟಡಿ

KannadaprabhaNewsNetwork |  
Published : Jun 27, 2025, 12:54 AM IST
ಸುಹಾಸ್‌ ಶೆಟ್ಟಿ  | Kannada Prabha

ಸಾರಾಂಶ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಎಂಟು ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಸ್ಟಡಿಗೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಹೊರವಲಯದ ಬಜಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಎಂಟು ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಸ್ಟಡಿಗೆ ನೀಡಿದೆ.

ಪ್ರಕರಣ ಸಂಬಂಧ ಎನ್‌ಐಎ ಪ್ರತ್ಯೇಕವಾಗಿ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಎನ್‌ಐಎ ಎಸ್​ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಬೆಂಗಳೂರಿನ 50ನೇ ಸಿಸಿಎಚ್ ನ್ಯಾಯಾಲಯ ಜುಲೈ 1ರ ವರೆಗೆ ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸುವಂತೆ ರಾಜ್ಯ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಅವರಿಗೆ ಮನವಿ ಸಲ್ಲಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾ‌ನಸಭೆ ವಿಪಕ್ಷ ನಾಯಕ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

2025 ಮೇ 1 ರಂದು ನಡೆದ ಸುಹಾಸ್ ಶೆಟ್ಟಿ ಹತ್ಯೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ಸಹೋದರ ಆದಿಲ್ 3 ಲಕ್ಷ ರು. ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದ. ಆಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ‘ಬಿ’ ಯನ್ನೂ ಸಿದ್ಧಮಾಡಿಕೊಳ್ಳಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ಸುಹಾಸ್ ಶೆಟ್ಟಿ ಚಲನ ವಲನಗಳ ಮೇಲೆ ಪ್ರಮುಖ ಆರೋಪಿ ಸಫ್ವಾನ್ 15 ದಿನಗಳಿಂದ ಗಮನ ಇರಿಸಿದ್ದ. ಚಿಕ್ಕಮಗಳೂರು ಕಳಸದ ರಂಜಿತ್ ಹಾಗೂ ನಾಗರಾಜ್ 15 ದಿನಗಳಿಂದ ಸಫ್ವಾನ್ ಮನೆಯಲ್ಲೇ ಇದ್ದರು. ಸುಹಾಸ್ ಶೆಟ್ಟಿ ಬಜಪೆಗೆ ಬರುವ ಬಗ್ಗೆ ಅಜರುದ್ದೀನ್‌ ಎಂಬಾತ ಮಾಹಿತಿ ನೀಡಿದ್ದನು. ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ಸುಹಾಸ್‌ ಶೆಟ್ಟಿಯನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಲಾಗಿತ್ತು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ