ಕನ್ನಡಪ್ರಭ ವಾರ್ತೆ ಮಂಗಳೂರು
ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವಂತೆ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಲೋಕಸಭಾ ಸದಸ್ಯರಿಗೆ ಮನವಿ ಮಾಡಿದೆ. ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಈ ವಕ್ಫ್ ಕಾಯ್ದೆಯಿಂದ ಜನಸಾಮಾನ್ಯರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.ಈ ಕಾಯ್ದೆಯಿಂದ ಪ್ರತಿಯೊಂದು ಸಮುದಾಯದವರು ಭೂ ಒತ್ತುವರಿ, ಭೂ ಮಾರಾಟ, ಚಾರಿಟಿ ಹೆಸರಿನಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಮಾಡಿರುವ ದೊಡ್ಡ ತಪ್ಪನ್ನು ಸರಿಪಡಿಸುವ ಸಮಯ ಬಂದಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ಜಾತಿ- ವರ್ಗದಲ್ಲಿ ಧ್ವನಿಯಿಲ್ಲದವರು ಹಾಗೂ ಅತಿ ಕಡುಬಡವರ ಪರವಾಗಿ ನಾವೆಲ್ಲ ಒಟ್ಟಾಗಿ ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ವಕ್ಫ್ ತಿದ್ದುಪಡಿ ಮಸೂದೆಯು ನಿಜವಾದ ವಕ್ಫ್ ಕಾಯ್ದೆಯಿಂದ ತೊಂದರೆಗೆ ಒಳಗಾಗುತ್ತಿರುವವರ ಪಾಲಿಗೆ ಅನುಕೂಲತೆಗಳನ್ನು ಕಲ್ಪಿಸಲಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಶ್ರೀಮಂತರು, ಭೂ ಒತ್ತುವರಿ ಮಾಡಿಕೊಂಡವರನ್ನು ರಕ್ಷಿಸುವುದಕ್ಕಾಗಿ ಬಡ ವರ್ಗದ ಮುಸ್ಲಿಮರ ಹೆಸರು ಹೇಳಿಕೊಂಡು ಈ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಇದೀಗ ಕೊಚ್ಚಿಯ ಮುನಂಬಮ್ ಉಪನಗರದಲ್ಲಿರುವ ಕ್ರಿಶ್ಚಿಯನ್ ಕುಟುಂಬಗಳು ಕೂಡ ಇದೀಗ ತಮ್ಮ ಭೂಮಿಯನ್ನು ವಕ್ಫ್ ಮಂಡಳಿ ಅತಿಕ್ರಮಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಕೆಲವು ವಾರಗಳ ಹಿಂದೆಯಷ್ಟೇ ಇದೇ ರೀತಿ ಮಂಗಳೂರಿನಲ್ಲಿಯೂ ಕೆಲವೊಂದು ವ್ಯಕ್ತಿಗಳು ಹಾಗೂ ಸಂಘಟನೆಗಳು ವಕ್ಫ್ ಆಸ್ತಿ ಹೆಸರಿನಲ್ಲಿ ಬೇರೆ ಸಂಸ್ಥೆಗಳ ವಶದಲ್ಲಿರುವ ಆಸ್ತಿ ಮೇಲೆ ಹಕ್ಕು ಸಾಧಿಸುವ ಹುನ್ನಾರ ನಡೆಸಿದೆ. ಇದು ನಿಜಕ್ಕೂ ಅತ್ಯಂತ ಅಪಾಯಕಾರಿ ಬೆಳವಣಿಗೆ. ಆ ಮೂಲಕ ಶ್ರೀಮಂತರ ಭೂಕಬಳಿಕೆದಾರರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ನಾನಾ ರೀತಿಯ ಸಂಚು ರೂಪಿಸುತ್ತಿದ್ದಾರೆ ಎಂದು ಕ್ಯಾ.ಚೌಟ ಆರೋಪಿಸಿದ್ದಾರೆ.