ಎಸ್.ಎಂ. ಕೃಷ್ಣ ನಗರ ಮನೆಗಳ ತೆರವು ಆದೇಶಕ್ಕೆ ತಡೆ ತನ್ನಿ

KannadaprabhaNewsNetwork | Published : Mar 6, 2025 12:32 AM

ಸಾರಾಂಶ

ಇಲ್ಲಿಯ ಎಸ್.ಎಂ. ಕೃಷ್ಣ ನಗರದ ಮನೆಗಳನ್ನು ತೆರವು ಮಾಡಲು ಹೈಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಬುಧವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಎಸ್.ಎಂ. ಕೃಷ್ಣ ನಗರದ ನಿವಾಸಿಗಳು ಮುಖಂಡರಾದ ರವಿಕುಮಾರ್, ಹರೀಶ್ ಹೊನ್ನೂರು ಹನುಮಂತಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದಾರೆ.

- ಆದೇಶ ತಡೆಹಿಡಿಯುವಂತೆ ಸ್ಥಳೀಯ ನಿವಾಸಿಗಳಿಂದ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಮನವಿ ।

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇಲ್ಲಿಯ ಎಸ್.ಎಂ. ಕೃಷ್ಣ ನಗರದ ಮನೆಗಳನ್ನು ತೆರವು ಮಾಡಲು ಹೈಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಬುಧವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಎಸ್.ಎಂ. ಕೃಷ್ಣ ನಗರದ ನಿವಾಸಿಗಳು ಮುಖಂಡರಾದ ರವಿಕುಮಾರ್, ಹರೀಶ್ ಹೊನ್ನೂರು ಹನುಮಂತಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಎಸ್.ಎಂ.ಕೃಷ್ಣ ನಗರದ ಸರ್ವೆ ನಂ. 145/1ಪಿ ಗೆ ಸೇರಿದ 3 ಎಕರೆ ಜಾಗವನ್ನು 2002ರಲ್ಲಿ ಜಿಲ್ಲಾಧಿಕಾರಿ ಆಗಿದ್ದ ಕೆ. ಶಿವರಾಂ ಬಡವರು, ನಿರ್ಗತಿಕರು, ನಿರಾಶ್ರಿತರಿಗೆ ಆಶ್ರಯ ಮನೆಗಳನ್ನು ಸರ್ಕಾರದಿಂದ ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಆ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟ ನಂತರ ಸುಮಾರು 2002 ರಿಂದ 2025ರವರೆಗೂ 23 ವರ್ಷಗಳಿಂದ ಮನೆ ಕಂದಾಯ, ನಲ್ಲಿ ಕಂದಾಯ ಇತ್ಯಾದಿ ಆಸ್ತಿ ತೆರಿಗೆ ಎಲ್ಲವನ್ನೂ ಪಾಲಿಕೆಗೆ ಕಟ್ಟುತ್ತಿರುವುದಾಗಿ ಹೇಳಿದರು.

ಇತ್ತೀಚೆಗೆ ಸ.ನಂ. 145/1ಪಿಗೆ ಸಂಬಂಧಿಸಿದ 3 ಎಕರೆ ಜಾಗದಲ್ಲಿ ನಿರ್ಮಾಣಗೊಂಡ ಮನೆಗಳನ್ನು ತೆರವು ಮಾಡಲು ಮಾಲೀಕರಿಗೆ ಹೈಕೋರ್ಟ್ ಆದೇಶ ನೀಡಿರುವುದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿದಿದೆ. ಇದರಿಂದ ಎಸ್.ಎಂ.ಕೃಷ್ಣ ನಗರದ ಎಲ್ಲಾ ನಿವಾಸಿಗಳಿಗೆ ಎಲ್ಲಿ, ಯಾವಾಗ, ಏನಾಗುತ್ತದೆಯೋ ಎಂಬ ಅತಂತ್ರ, ಭಯ ಕಾಡುತ್ತಿದೆ. ಈ ಭಾಗದಲ್ಲಿ ಹೆಚ್ಚಾಗಿ ಕಡುಬಡವರು, ವಿಕಲಚೇತನರು, ಕೂಲಿಕಾರ್ಮಿಕರು ನೆಲೆಸಿದ್ದಾರೆ. ಈಗ ಏಕಾಏಕಿ ಹೈಕೋರ್ಟ್ ಆದೇಶ ನೀಡಿರುದು ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆ ಕೋರ್ಟ್‌ ಆದೇಶವನ್ನು ತಡೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ನಿವಾಸಿಗಳಾದ ಮಲ್ಲಿಕಾರ್ಜುನಪ್ಪ, ಚನ್ನಕೇಶವ, ಬಿ.ಎಂ.ಜಿ.ವೀರೇಶ್, ಕುಮಾರ, ಮಹೇಶ್, ಸಾಹೇಬ್‌ಗೌಡ, ದಾನಾಚಾರಿ, ಅಣ್ಣಪ್ಪ, ಗೌರಮ್ಮ, ಗೀತಾ, ರೂಪ ಇತರರು ಇದ್ದರು.

- - - -5ಕೆಡಿವಿಜಿ34:

ದಾವಣಗೆರೆಯ ಎಸ್‌.ಎಂ. ಕೃಷ್ಣ ನಗರದ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Share this article