ರಾಮನಗರ: ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲಸೌಲಭ್ಯ ವಿತರಿಸುವ ಪ್ರಕ್ರಿಯೆ ಮುಂದುವರಿಸುವುದು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಿಎಸ್‌ಆರ್ ಅನುದಾನದ ವ್ಯಾಪ್ತಿಗೆ ತರಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ರಾಜ್ಯಸರ್ಕಾರ ಸೆಳೆಯಬೇಕಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ತಿಳಿಸಿದರು.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದ ಕಾರಣ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ವಿತರಣೆ ಮಾಡಲಾಗುತ್ತಿತ್ತು. ಇದು ಎಲ್ಲ ರಾಜ್ಯಗಳಲ್ಲಿಯೂ ಸುಗಮವಾಗಿ ಸಾಗುತ್ತಿತ್ತು. ಆದರೀಗ ಅಮಿತ್ ಶಾ ಕೇಂದ್ರ ಸಹಕಾರ ಖಾತೆಯ ಸಚಿವರಾದ ಮೇಲೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತಿದ್ದ ಎಲ್ಲ ಸಾಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲಸೌಲಭ್ಯಗಳನ್ನು ಶೇಕಡ 60ರಷ್ಟು ನಿಲ್ಲಿಸಿದೆ. ಇನ್ನುಳಿದಂತೆ ಶೇಕಡ 40ರಷ್ಟಿರುವ ಸಾಲಸೌಲಭ್ಯಗಳನ್ನೂ ಸ್ಥಗಿತಗೊಳಿಸುವ ಪ್ರಯತ್ನಗಳು ಸಾಗಿವೆ. ಇದರಿಂದಾಗಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ನೀಡುವುದು ಕಠಿಣವಾಗಲಿದೆ. ಏಕೆಂದರೆ ಇಲ್ಲಿವರೆಗೆ ರಿಯಾಯಿತಿ ಬಡ್ಡಿ ದರದಲ್ಲಿ ಈ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇಕಡ 50ರಷ್ಟು ನೀಡುತ್ತಿದ್ದವು.ಬಡ್ಡಿಗೆ ಸಾಲ ಪಡೆದು ಶೂನ್ಯ ಬಡ್ಡಿಯಲ್ಲಿ ಸಾಲ ಕೊಡಲಾಗದು:
ಬಿಡಿಸಿಸಿ ಬ್ಯಾಂಕ್ ವತಿಯಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ರೈತರಿಗೆ 800 -850 ಕೋಟಿ ರು.ಗೂ ಹೆಚ್ಚಿನ ಮೊತ್ತದ ಕೆಸಿಸಿ ಬೆಳೆ ಸಾಲ ವಿತರಣೆ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ಹೊಸ ನೀತಿಯಿಂದ ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಣೆ ಪ್ರಕ್ರಿಯೆಯೇ ಸ್ಥಗಿತಗೊಳ್ಳುತ್ತದೆ ಎಂದು ಯರೇಹಳ್ಳಿ ಮಂಜು ಎಚ್ಚರಿಸಿದರು.
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ರೈತರು ರಾಷ್ಟ್ರೀಯ ಬ್ಯಾಂಕ್ ಗಳಿಗಿಂತ ಹೆಚ್ಚಾಗಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಹಿವಾಟು ನಡೆಸುತ್ತಾರೆ. ಚಿನ್ನಾಭರಣ ಸಾಲ, ಹಣ ಠೇವಣಿ ಮಾಡುತ್ತಾರೆ. ಹಾಗಾಗಿ ಒಂದೊಂದು ಸಂಘಗಳು 40ರಿಂದ 500 ಕೋಟಿ ರುಪಾಯಿವರೆಗೆ ವಹಿವಾಟು ನಡೆಸುತ್ತಿವೆ. ಆದರೆ, ಲಾಭ ಕಡಿಮೆ ಇರುವ ಸೊಸೖಟಿಗಳು ಸಂಕಷ್ಟದಲ್ಲಿ ಸಿಲುಕಿವೆ. ಆ ಸಂಘಗಳು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಅವಲಂಬಿಸುವಂತಾಗಿದೆ. ಬಿಡಿಸಿಸಿ ಬ್ಯಾಂಕ್ ನಿಂದ ಕೊಡುವ 5 ಲಕ್ಷ ರು.ಗಳಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವಿತರಣೆ ಹಾಗೂ ಸಿಎಸ್ ಆರ್ ಅನುದಾನದ ವ್ಯಾಪ್ತಿಗೆ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತರಬೇಕೆಂದು ಯರೇಹಳ್ಳಿ ಮಂಜು ಒತ್ತಾಯಿಸಿದರು.
16ಕೆಆರ್ ಎಂಎನ್ 1.ಜೆಪಿಜಿ