ಕಂಚಿನ ಕಂಠದ ರೆಡ್ಡಿ ಸಾಬ್‌ರ ಕಂಚಿನ ಪುತ್ಥಳಿ ಅನಾವರಣ ಇಂದು

KannadaprabhaNewsNetwork | Published : Feb 23, 2024 1:49 AM

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಲಿಂ.ವಿಶ್ವನಾಥರೆಡ್ಡಿ ಮುದ್ನಾಳ ಪುತ್ಥಳಿ ಅನಾವರಣ. ಯಾದಗಿರಿಯ ಮುದ್ನಾಳ್‌ ಕ್ರಾಸ್ ಬಳಿ ಲಿಂ.ವಿಶ್ವನಾಥರೆಡ್ಡಿ ಮುದ್ನಾಳ್‌ ವೃತ್ತದಲ್ಲಿ ಶ್ರೀರಂಭಾಪುರಿ ಜಗದ್ಗುರುಗಳಿಂದ ಪುತ್ಥಳಿ ಅನಾವರಣ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಯಾದಗಿರಿ

ಮುದ್ನಾಳ್‌ "ರೆಡ್ಡಿ ಸಾಬ್‌.. " ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳವಳಿ ಹೋರಾಟದ ದಿಟ್ಟ ನಾಯಕ, ಅಸ್ಪೃಷ್ಯತೆ ಹಾಗೂ ವರದಕ್ಷಿಣೆ ವಿರೋಧಿ ಕಾರ್ಯಗಳ ಮೂಲಕ ಕ್ರಾಂತಿಕಾರಿ ಬದಲಾವಣೆಗಳ ಅನುಷ್ಠಾನಗೊಳಿಸಿದ, ಬದುಕಿನಲ್ಲಿ ಬಸವ ತತ್ವ ಅಳವಡಿಸಿಕೊಂಡು ಅದರಂತೆಯೇ ಜೀವ ಸಾಗಿಸಿದ ಬಸವಾನುಯಾಯಿ, ನೇರ ನಿಷ್ಠುರ ಮಾತುಗಳಿಂದ ಭ್ರಷ್ಟಾಚಾರಿಗಳ ಬೆವರಿಳಿಸುತ್ತಿದ್ದ ಮಾಜಿ ಸಚಿವ ಲಿಂ.ವಿಶ್ವನಾಥರೆಡ್ಡಿ ಮುದ್ನಾಳ್‌ ಅವರಿಗೆ ಹೈದರಾಬಾದ್‌ ಕರ್ನಾಟಕ (ಇಂದಿನ ಕಲ್ಯಾಣ ಕರ್ನಾಟಕ) ಭಾಗದ ಜನ ಪ್ರೀತಿಯಿಂದ ಕರೆಯುತ್ತಿದ್ದುದು ರೆಡ್ಡಿ ಸಾಬ್‌ ಎಂದೇ...

ಇಂತಹ "ರೆಡ್ಡಿ ಸಾಬ್‌ " ಅವರ ಮೇಲಿನ ಪ್ರೀತಿ, ಅಭಿಮಾನದ ದ್ಯೋತಕವಾಗಿ, ಅಭಿಮಾನಿಗಳೇ ಎದುರು ನಿಂತು ಮಾಡಿಸಿರುವ ಕಂಚಿನ ಪುತ್ಥಳಿ ಅನಾವರಣ ಸಮಾರಂಭ ಶುಕ್ರವಾರ ಫೆ.23ರಂದು ಬೆಳಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ.

ಯಾದಗಿರಿಯ ಮುದ್ನಾಳ್‌ ಕ್ರಾಸ್‌ನ ಲಿಂ.ವಿಶ್ವನಾಥರೆಡ್ಡಿ ಮುದ್ನಾಳ್‌ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ಲಿಂ.ವಿಶ್ವನಾಥರಡ್ಡಿ ಮುದ್ನಾಳ್‌ ಅವರ ಕಂಚಿನ ಪ್ರತಿಮೆಯನ್ನು ಶ್ರೀಮದ್ ರಂಭಾಪುರಿ ಜಗದ್ಗುರುಗಳಾದ ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅನಾವರಣಗೊಳಿಸಲಿದ್ದಾರೆ.

ನಾಲವಾರದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು, ಅಬ್ಬೆತುಮಕೂರಿನ ಡಾ. ಗಂಗಾಧರ ಶಿವಾಚಾರ್ಯರು ಸೇರಿ ವಿವಿಧ ಮಠಾಧೀಶರುಗಳು, ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವರು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಗೌರವಾಧ್ಯಕ್ಷ ಡಾ. ಭೀಮಣ್ಣ ಖಂಡ್ರೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಎನ್‌. ತಿಪ್ಪಣ್ಣ, ಬಸವ ಸಮಿತಿ ಅಧ್ಯಕ್ಷರು ಹಾಗೂ ಭಾರತದ ಮಾಜಿ ಉಪರಾಷ್ಟ್ರಪತಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆಗಿದ್ದ ಬಸಪ್ಪ ದಾನಪ್ಪ ಜತ್ತಿ (ಬಿ. ಡಿ. ಜತ್ತಿ) ಅವರ ಪುತ್ರ ಅರವಿಂದ ಜತ್ತಿ ಸೇರಿ ವಿವಿಧ ಗಣ್ಯಮಾನ್ಯರು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಮಹಾರಾಷ್ಟ್ರದ ಪುಣೆಯ ಶಿಲ್ಪಿ ಯೋಗೇಶ ಕುಂಬಾರ್‌ ಅವರ ಕೈಚಳಕದಲ್ಲಿ ರೂಪುಗೊಂಡಿರುವ, 14 ಅಡಿಗಳಷ್ಟು ಎತ್ತರದ, 3 ಟನ್‌ ತೂಕದ, ಶೇ.80 ರಷ್ಟು ಹಾಗೂ ಶೇ.20 ರಷ್ಟು ಪಂಚಲೋಹ ಮಿಶ್ರಣದೊಂದಿಗೆ ತಯಾರಾಗಿರುವ ಸಿಡಿಲುರೋಧಕ ಪುತ್ಥಳಿ ಇದಾಗಿದೆ. ಲಿಂ.ಮುದ್ನಾಳ್‌ ಅವರ ಪುತ್ಥಳಿ ನಿರ್ಮಾಣಕ್ಕೆಂದೇ ರಚಿತಗೊಂಡ 25 ಸದಸ್ಯರ ಕಮೀಟಿಯೊಂದು ವಿವಿಧೆಡೆ ಅಭಿಮಾನಿಗಳಿಂದ 37 ಲಕ್ಷ ರು.ಗಳ ಹಣ ಸಂಗ್ರಹಿಸಿ ಇದಕ್ಕೆ ಖರ್ಚು ಮಾಡಲಾಗಿದೆ.

ನೇರ ನಿಷ್ಠುರವಾದಿ ಮುದ್ನಾಳ್‌ "ರೆಡ್ಡಿ ಸಾಬ್‌ "

ಯಾದಗಿರಿ: ತಾಲೂಕಿನ ಮುದ್ನಾಳ್‌ ಗ್ರಾಮದಲ್ಲಿ 1926 ಡಿ.26 ರಂದು ವಿಶ್ವನಾಥರೆಡ್ಡಿ ಮುದ್ನಾಳ್‌ ಅವರು ಜನನ. ತಂದೆ ರಾಚಣ್ಣಗೌಡ, ತಾಯಿ ಲಕ್ಷ್ಮಮ್ಮ ಗೌಡತಿ ದಂಪತಿಯ ಹಿರಿಯ ಪುತ್ರ.

ಬ್ರಿಟಿಷರ ದಾಸ್ಯದ ಜೊತೆಗೆ, ಈ ಭಾಗ ಹೈದರಾಬಾದ್‌ ನಿಜಾಮ್‌ ಪ್ರಾಂತ್ಯದಲ್ಲಿ ಬರುತ್ತಿದ್ದರಿಂದ ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಮುದ್ನಾಳರು, ಮಾತೃಭಾಷೆ ಕನ್ನಡ, ಉರ್ದು ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಹೊಂದಿದ್ದರಲ್ಲದೆ, ಹೈದರಾಬಾದ್‌ನ ಉಸ್ಮಾನಿಯಾ ವಿಶ್ವ ವಿದ್ಯಾಲಯದಿಂದ ಬಿಎಎಲ್‌ಎಲ್‌ಬಿ ಪದವಿ ಪೂರೈಸಿದ್ದರು. ಹೈದರಾಬಾದ್‌ ನಿಜಾಂ ದುರಾಡಳಿತದ ವಿರುದ್ಧ, ಹೈದರಾಬಾದ್‌ ಕರ್ನಾಟಕ ವಿಮೋಚನೆ ಹಾಗೂ ನಂತರದಲ್ಲಿ ಕರ್ನಾಟಕ ಏಕೀಕರಣದ ಹೋರಾಟ ಚಳವಳಿಯ ಮುಂಚೂಣಿ ನಾಯಕರಾಗಿದ್ದರು.

ಬದುಕಿನಲ್ಲಿ ಬಸವ ತತ್ವ ಅಳವಡಿಸಿಕೊಂಡಿದ್ದ ಲಿಂ. ಮುದ್ನಾಳರು ಬಸವ ತತ್ವಗಳಂತೆಯೇ ಜೀವ ಸವೆಸಿದವರು. ನಾಲ್ಕು ಬಾರಿ ಯಾದಗಿರಿ ಮತಕ್ಷೇತ್ರದ ಶಾಸಕರಾಗಿ, ಎರಡು ಬಾರಿ ಸಚಿವ ಸಂಪುಟದ ಸದಸ್ಯರಾಗಿ (ಪಶುಸಂಗೋಪನೆ, ತೋಟಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ) ಪ್ರಾಮಾಣಿಕತೆಯಿಂದ ಭ್ರಷ್ಟಾಚಾರರಹಿತ ಆಡಳಿತ ನೀಡಿ ಸೈ ಎನ್ನಿಸಿಕೊಂಡವರು. "ಮುದ್ನಾಳರು ನಮ್ಮ ಸಚಿವ ಸಂಪುಟದ ಮಹರ್ಷಿಗಳು " ಎಂದು ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರಿಂದ ಬಣ್ಣಿಸಲ್ಪಟ್ಟವರು.

ಮಹಾತ್ಮಾಗಾಂಧೀಜಿಯವರ ಅಹಿಂಸೆಯ ದಾರಿ ಹಾಗೂ ನೇತಾಜಿ ಸುಭಾಶ್ಚಂದ್ರ ಭೋಸ್‌ರ ಹೋರಾಟದ ಕಿಚ್ಚನ್ನು ಅಳವಡಿಸಿಕೊಂಡಿದ್ದರು. ಯಾದಗಿರಿಯಲ್ಲಿ ನೇತಾಜಿ ಪ್ರತಿಮೆ ಸ್ಥಾಪನೆಯ ರೂವಾರಿಗಳು. ಅಸ್ಪೃಷ್ಯತೆ ಹಾಗೂ ವರದಕ್ಷಿಣೆ ಪಿಡಗಿನ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಐದು ವರ್ಷಗಳೊಳಗೆ ಕನಿಷ್ಠ ಯಾದಗಿರಿ ತಾಲೂಕಿನಲ್ಲಿ ಅಸ್ಪೃಷ್ಯತಾ ತೊಲಗಿಸುವುದಾಗಿ, ಅಲ್ಲಿವರೆಗೂ ಕಂತಿಭಿಕ್ಷಯೆ ಊಟವನ್ನು ಮಾಡುವುದಾಗಿ ಪಣ ತೊಟ್ಟಿದ್ದ ಮುದ್ನಾಳರು, ಸಾಧ್ಯವಾಗದಿದ್ದರೆ ಯಾದಗಿರಿಯಲ್ಲಿ ನಿರಂತರ ಊಟ ತ್ಯಜಿಸಿ, ಕೇವಲ ಹಣ್ಣು ಹಂಪಲುಗಳ ಮೇಲೆ ಜೀವಿಸುವುದಾಗಿ ಪಟ್ಟು ಹಿಡಿದವರು. ಇದು ಪರಿಶಿಷ್ಟ ಜಾತಿ ತರುಣರ ಮನರೆದ್ದು, ಇವರ ದಿನಾಚರಣೆಯನ್ನು ಅಸ್ಪೃಷ್ಯತಾ ದಿನವನ್ನಾಗಿ ಆಚರಿಸಿದರು.

"ವರದಕ್ಷಿಣೆ ಇಲ್ಲ " ಎಂಬುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದರೆ ಮಾತ್ರ ಅಂತಹ ಮದುವೆಗಳಿಗೆ ತೆರಳುತ್ತಿದ್ದ ಮುದ್ನಾಳರು, ಮಾಜಿ ಮುಖ್ಯಮಂತ್ರಿ ದಿ. ಹೆಗಡೆಯವರ ಮಗಳ ಮದುವೆಗೂ ವರದಕ್ಷಿಣೆ ಇಲ್ಲ ಎಂದು ಮುದ್ರಿಸಿ ಕೊಟ್ಟಾಗಲೇ ತೆರಳಿದವರು. ವರದಕ್ಷಿಣೆ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸಿದ್ದರು.

- ಏಕೀಕರಣ ಪ್ರಶಸ್ತಿಯನ್ನೇ ನಿರಾಕರಿಸಿದ್ದರು..!

ಕರ್ನಾಟಕ ರಾಜ್ಯವಾಗಿ 50 ವರ್ಷಗಳ ಹಿನ್ನೆಲೆ ಸುವರ್ಣ ಕರ್ನಾಟಕ ಸಂಭ್ರಮದ ಆಚರಣೆಯಲ್ಲಿದ್ದಾಗ, ಸುವರ್ಣ ಮಹೋತ್ಸವದ ಸ್ಮರಣ ಪ್ರಶಸ್ತಿ ಇವರಿಗೆ ಅಂದಿನ ಸರ್ಕಾರ ಘೋಷಿಸಿತ್ತು. ಆದರೆ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಮುದ್ನಾಳರು, ಭೌಗೋಳಿಕವಾಗಿ ಒಂದಾಗಿದ್ದೇವಾದರೂ, ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣದವರಿಗಿಂತ ಹಿಂದಿದ್ದೇವೆ. ಎಲ್ಲೀವರೆಗೆ ಉತ್ತರ ದಕ್ಷಿಣಗಳೆರಡೂ ಸರಿ ಸಮಾನವಾಗಿ ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಪ್ರಶಸ್ತಿ ಸನ್ಮಾನ ಪಡೆಯುವುದಿಲ್ಲ ಎಂದು ಹೇಳಿ ನಿರಾಕರಿಸಿದ್ದರು. 81ರ ಇಳಿವಯಸ್ಸಲ್ಲೂ ಹೈದರಾಬಾದ್ ಕರ್ನಾಟಕದ ನಕಾಶೆಯ ಧ್ವಜಾರೋಹಣ ನೆರವೇರಿಸಿದವರು.

ಹಿನ್ನೀರಿನಲ್ಲಿ ಕೂಡಲ ಸಂಗಮ ಮುಳುಗವ ಆತಂಕ ಎದುರಾದಾಗ, ದಿ. ಹೆಗಡೆಯವರ ಸರ್ಕಾರವಧಿಯಲ್ಲಿ ಮುದ್ನಾಳ್‌ ಸಮಿತಿ ನೀಡಿದ ವರದಿ ಐತಿಹಾಸಿಕ ದಾಖಲೆಯಾಯಿತು. 1979ರಲ್ಲಿ ಬಸವಕಲ್ಯಾಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಸಿದ್ಧತೆ ಹಿಂದಿನ ದಿನವೇ ಬಸವೇಶ್ವರ ಪ್ರತಿಮೆ ನಾಪತ್ತೆಯಾದಾಗ, ಸರ್ಕಾರದ ವಿರುದ್ಧ ಸಿಡಿದೆದ್ದ ಮುದ್ನಾಳರು, ಸರ್ಕಾರವೇ ಕಂಚಿನ ಪುತ್ಥಳಿ ಮಾಡಿಸಿ ಕೊಡಲಿ ಎಂದು ಪಟ್ಟು ಹಿಡಿದು, ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು 11 ದಿನಗಳ ಕಾಲ ಸತ್ಯಾಗ್ರಹ ನಡೆಸಿದಾಗ, ಮಣದ ಸರ್ಕಾರ ಪ್ರತಿಮೆ ಮಾಡಿಸಿತ್ತು. ಅಭಾವೀ ಮಹಾಸಭಾದ ಹಿರಿಯ ಉಪಾಧ್ಯಕ್ಷರಾಗಿದ್ದರು, ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪಕರು.

ಸಚಿವರಾಗಿದ್ದ ವೇಳೆ ಸಮಾರಂಭವೊಂದರಲ್ಲಿ ನೀರಿನ ಬಾಟಲಿಗಳನ್ನು ತಂದಿಟ್ಟ ಅಧಿಕಾರಿಗಳಿಗೆ ಅನಾವಶ್ಯಕ ದುಡ್ಡು ಖರ್ಚು ಬೇಡ ಎಂದು ವಾಪಸ್ ಕಳುಹಿಸಿ ಸರಳತೆ ಮೆರೆದವರು.

ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಹಿತ್ಯ, ಪತ್ರಕರ್ತ, ರಾಜಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಲಿಂ. ವಿಶ್ವನಾಥರೆಡ್ಡಿ ಮುದ್ನಾಳ್‌ರ ಕೊಡುಗೆ ಅಪಾರ. ಯಾದಗಿರಿ ಜಿಲ್ಲೆ ರಚನೆಗೆ ಅವರ ಹೋರಾಟ ಸ್ಮರಣೀಯ.

2008 ಡಿ.1ರಂದು ವಿಶ್ವನಾಥರೆಡ್ಡಿ ಮುದ್ನಾಳರು ಇಹಲೋಕ ತ್ಯಜಿಸಿದರು. ಅವರ ಹಿರಿಯ ಪುತ್ರಿ ಇಂದಿರಾ ಸ್ತ್ರೀರೋಗ ತಜ್ಞೆ, ಪುತ್ರ ವೆಂಕಟರೆಡ್ಡಿ ಮುದ್ನಾಳ್‌ ಈ ಹಿಂದಿನ ಬಿಜೆಪಿ ಸರ್ಕಾರವಧಿಯಲ್ಲಿ ಶಾಸಕರಾಗಿದ್ದವರು. ಮತ್ತೋರ್ವ ಪುತ್ರ ಹಣುಮಂತರೆಡ್ಡಿ ಉದ್ಯಮಿಯಾದರೆ, ವೆಂಕಟರೆಡ್ಡಿ ಅವರ ಪುತ್ರ ಮಹೇಶರೆಡ್ಡಿ ಬಿಜೆಪಿ ಯುವ ಮುಖಂಡರು. ರಾಜಕೀಯ ದಾರಿಯಲ್ಲಿ ಮನೆತನ ಮುಂದುವರೆದಿದೆ.

Share this article