ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳ ಸೇವನೆ ಬಹುಮುಖ್ಯ

KannadaprabhaNewsNetwork | Published : Feb 23, 2024 1:49 AM

ಸಾರಾಂಶ

ಮುದ್ದೇಬಿಹಾಳ ಪಟ್ಟಣದ ಸಂಗಮೇಶ ನಗರ ಬಡಾವಣೆಯಲ್ಲಿರುವ ಶ್ರೀಸಂತ ಕನಕದಾಸ ಶಾಲೆ ಆವರಣದಲ್ಲಿ ಜಿಪಂ, ತಾಪಂ, ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಅವರು ಸಾಯಿ ಶ್ಯೂರ್ ಹೆಲ್ತ್ ಮಿಕ್ಸ್ ರಾಗಿ ಪೌಡರ್‌ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಲಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಆರೋಗ್ಯ ವೃದ್ಧಿಗೆ ಪೂರಕವಾಗುವ ಸಿರಿಧಾನ್ಯಗಳ ಸೇವನೆ ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಿ ಪೌಷ್ಠಿಕಾಂಶಯುಳ್ಳ ಆಹಾರ ಪದ್ಧತಿ ಒದಗಿಸಲು ಸರ್ಕಾರ ೧ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯದ ಜೊತೆಗೆ ರಾಗಿ ಸೇರಿದಂತೆ ಸಿರಿಧಾನ್ಯಗಳ ಗಂಜಿ ವಿತರಿಸುತ್ತಿದೆ. ಎಲ್ಲ ಮಕ್ಕಳು ಇದರ ಸದುಯೋಗಪಡಿಸಿಕೊಳ್ಳಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಲಗಿ ಹೇಳಿದರು.

ಪಟ್ಟಣದ ಸಂಗಮೇಶ ನಗರ ಬಡಾವಣೆಯಲ್ಲಿರುವ ಶ್ರೀಸಂತ ಕನಕದಾಸ ಶಾಲೆ ಆವರಣದಲ್ಲಿ ಜಿಪಂ, ತಾಪಂ, ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಅವರು ಸಾಯಿ ಶ್ಯೂರ್ ಹೆಲ್ತ್ ಮಿಕ್ಸ್ ರಾಗಿ ಪೌಡರ್‌ ವಿತರಣೆ ಕಾರ್ಯಕ್ರಮ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಕ್ಕಳ ಬೇಕರಿ, ಜಂಕ್‌ಫುಡ್ ಸೇವನೆಯಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆಯಿಂದಾಗಿ ಮಕ್ಕಳ ಬೆಳವಣಿಗೆ ಹಾಗೂ ಮಾನಸಿಕವಾಗಿ ದುರ್ಬಲರಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣ ಮತ್ತು ಅವರ ಆರೋಗ್ಯ ರಕ್ಷಿಸುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಲೆ ಇದೆ. ಅದರಂತೆ ಮಕ್ಕಳ ಕ್ಷೀರ ಭಾಗ್ಯದ ಜೊತೆಗೆ ರಾಗಿ ಸೇರಿದಂತೆ ಸಿರಿಧಾನ್ಯದ ಗಂಜಿ ನೀಡುತ್ತಿದೆ. ಸಿರಿಧಾನ್ಯವೂ ಪೂರ್ವಿಕರ ಆಹಾರವಾಗಿದೆ. ಇದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇವು ಪ್ರಾಣಿಗಳಿಗೂ ಉತ್ತಮ ಆಹಾರವಾಗಿವೆ. ಜನರಲ್ಲಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಕ್ಯಾನ್ಸರ್‌ನಂತ ರೋಗಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವೆಲ್ಲವುಗಳ ತಡೆಗೆ ಸಿರಿಧಾನ್ಯಗಳ ಬಳಕೆ ರಾಮಬಾಣವಾಗಿದೆ ಎಂದರು.

ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟ ಪೌಷ್ಟಿಕಾಂಶಯುಳ್ಳ ಆಹಾರ ಪದ್ಧತಿ ರೂಢಿಯಲ್ಲಿಡಬೇಕು. ಇದರಿಂದ ಮಕ್ಕಳು ಸದಾ ಕ್ರಿಯಾಶೀಲರಾಗಿ ಆರೋಗ್ಯವಂತರಾಗಿರುತ್ತಾರೆ. ಮಾತ್ರವಲ್ಲದೇ ಎಲ್ಲ ರಂಗದಲ್ಲೂ ಪ್ರತಿನಿಧಿಸುವ ಮಾನಸಿಕ ಸ್ಥೈರ್ಯ ಆತ್ಮಬಲ ತುಂಬಿದಂತಾಗುತ್ತದೆ. ಸರ್ಕಾರ ಆರೋಗ್ಯ ವೃದ್ಧಿಗೆ ಪೂರಕವಾಗುವ ಗುಣಮಟ್ಟ ಆಹಾರ ಒದಗಿಸಲು ಒಳ್ಳೆಯ ತೀರ್ಮಾನ ಕೈಗೊಂಡಿದೆ ಎಂದರು.ತಾಲೂಕು ಬಿಸಿಯೂಟ ಸಹಾಯಕ ನಿರ್ದೇಶಕ ಸಂಗಮೇಶ ಬಿ.ಹೋಲ್ದೂರ ಮಾತನಾಡಿ, ರಾಜ್ಯದ ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ಮತ್ತು ಅನಿಮಿಯಾ (ರಕ್ತ ಹೀನತೆ)ವನ್ನು ನಿವಾರಿಸುವುದು. ಶಾಲಾ ಮಕ್ಕಳಲ್ಲಿ ನಿರಂತರ ಕಲಿಕೆಯನ್ನು ಕಲಿಕಾ ಚಟುವಟಿಕೆಯಲ್ಲಿ ಆಸಕ್ತಿಯಿಂದ ಲವಲವಿಕೆಯಿಂದ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು. ಶಾಲಾ ಮಕ್ಕಳಲ್ಲಿ ರಾಜ್ಯದಲ್ಲಿ ದೊರೆಯುವ ಸಿರಿಧಾನ್ಯ ಬೆಳೆಗಳ ಬಗ್ಗೆ ಪರಿಚಯ, ಸಿರಿಧಾನ್ಯ ಆಹಾರದ ಪೌಷ್ಟಿಕಾಂಶಗಳ, ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವುದು. ಶಾಲಾ ಮಕ್ಕಳ ಸಮತೋಲಿತ ಆರೋಗ್ಯಕರ ಬೆಳವಣಿಗೆ, ರೋಗ ನಿರೋಧಕತೆ ಮತ್ತು ಉತ್ತಮ ಆರೋಗ್ಯವನ್ನು ವೃದ್ಧಿಸಿ ಸಂರಕ್ಷಿಸುವುದು. ಸದುದ್ದೇಶದಿಂದ ಶಾಲಾ ದಿನಗಳಂದು ಪ್ರತಿ ವಾರದಲ್ಲಿ ಕ್ಷೀರ ಭಾಗ್ಯ ಯೋಜನೆಯಡಿ ಬೆಳಗಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ೧-೧೦ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಬಿಸಿಹಾಲು (ಸಕ್ಕರೆಯುಕ್ತ) ಪ್ರತಿ ದಿನಕ್ಕೆ ಪ್ರತಿ ವಿದ್ಯಾರ್ಥಿಗೆ ೧೫೦ ಮಿಲೀ ಪ್ರಮಾಣಕ್ಕೆ, ಉಚಿತವಾಗಿ ನೀಡುತ್ತಿರುವ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪೌಡರ್‌ನಿಂದ ಪ್ರತಿ ವಿದ್ಯಾರ್ಥಿಗೆ ೫ ಗ್ರಾಂ ಪ್ರಮಾಣದಲ್ಲಿ ಮಿಶ್ರಣವನ್ನು ಸಿದ್ಧಪಡಿಸಿ ಬಿಸಿಹಾಲಿನಲ್ಲಿ ಬೆರೆಸಿ ಕದಡಿ ಕಲಾಯಿಸಿ ಕುದಿಸಿ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಬೆರೆಸಿದ ಬಿಸಿಹಾಲನ್ನು ಸಿದ್ಧಪಡಿಸಿ ಶಾಲಾ ಮಕ್ಕಳಿಗೆ ಕುಡಿಯಲು ವಿತರಿಸಲಾಗುತ್ತದೆ ಎಂದರು.ಈ ವೇಳೆ ತಾಲೂಕು ಪಂಚಾಯತ್ ಯೋಜನಾ ನಿರ್ದೇಶಕ ಖೂಬಾಶಿಂಗ್ ಜಾಧವ, ತಾಲೂಕು ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಶ್ರೀ ಸಂತ ಕನಕದಾಸ ಶಾಲೆಯ ಅಧ್ಯಕ್ಷ ಮಲಕೇಂದ್ರಾಯಗೌಡ ಪಾಟೀಲ, ಶಾಲಾ ಆಡಳಿತ ಮಂಡಳಿಯ ಮುಖಂಡರಾದ ಬಿ.ಎಸ್.ಮೇಟಿ, ಸಂಗಪ್ಪ ಮೇಲಿಮನಿ, ಹಿರಿಯ ಪತ್ರಕರ್ತರಾದ ಶಂಕರ ಹೆಬ್ಬಾಳ, ಗುಲಾಮ ದಪ್ಪೆದಾರ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಖ ಬಿ.ಎಸ್.ಕವಡಿಮಟ್ಟಿ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಹಾಗೂ ದೂರದರ್ಶನ ಖ್ಯಾತಿಯ ಹಾಸ್ಯ ಕಲಾವಿದ ಗೋಪಾಲ ಹೂಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಮತಕ್ಷೇತ್ರದ ಎಲ್ಲ ಶಾಲೆಯ ಅಡುಗೆ ಸಹಾಯಕರು, ಶಿಕ್ಷಕರು ಮುಖ್ಯಸ್ಥರು ಎಲ್ಲಿಯೂ ಲೋಪವಾಗದಂತೆ ಮಕ್ಕಳಿಗೆ ಈ ಯೋಜನೆಯ ಸಮರ್ಪಕವಾಗಿ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು.

-ಬಿ.ಎಸ್.ಸಾವಲಗಿ,

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ.

Share this article