ಶ್ರೀ ಕ್ಷೇತ್ರ ಹೊರನಾಡು ಟ್ರಸ್ಟಿ ಗಿರಿಜಾಶಂಕರ ಜೋಶಿ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶ್ರೀ ಕ್ಷೇತ್ರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದಿವಂಗತ ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಮತ್ತು ದಿ. ನರಸಮ್ಮ ವೆಂಕಟಸುಬ್ಬಾ ಜೋಯಿಸ್ ದಂಪತಿ ಕಂಚಿನ ಪುತ್ಥಳಿ ಅನಾವರಣ, ಶ್ರೀ ಅನ್ನಪೂರ್ಣ ಪಾದಸೇವಾ ಧುರಂದರ ಪುಸ್ತಕ ಲೋಕಾರ್ಪಣೆ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಸೌಲತ್ತುಗಳ ವಿತರಣಾ ಕಾರ್ಯಕ್ರಮ ಮೇ.೮ ರಂದು ಬೆಳಗ್ಗೆ ೧೧ ಗಂಟೆಗೆ ಏರ್ಪಡಿಸಲಾಗಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಕ್ಷೇತ್ರ ಹೊರನಾಡು ಟ್ರಸ್ಟಿ ಗಿರಿಜಾಶಂಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಧರ್ಮಕರ್ತ ಜಿ. ಭೀಮೇಶ್ವರ ಜೋಶಿ ವಹಿಸುವರು. ಪುತ್ಥಳಿಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅನಾವರಣಗೊಳಿಸುವರು. ಹರಿಹರ ಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿ ದಿವ್ಯಸಾನ್ನಿಧ್ಯ ವಹಿಸುವರು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಮತ್ತು ಅರ್ಚಕ ನಿವಾಸದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನಾಮಫಲಕ ಅನಾವರಣಗೊಳಿಸಲಿದ್ದಾರೆಂದು ಹೇಳಿದರು.ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ದಿ. ಡಿ.ಬಿ ವೆಂಕಟಸುಬ್ಬಾ ಅವರಿಗೆ ನುಡಿನಮನ ಸಲ್ಲಿಸುವರು. ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಶ್ರೀ ಅನ್ನಪೂರ್ಣ ಪಾದಸೇವಾ ಧುರಂದರ ಪುಸ್ತಕ ಲೋಕಾರ್ಪಣೆ ಮಾಡುವರು. ಗ್ರಾಮೀಣಾಭಿವೃದ್ಧಿ ಯೋಜನೆ ವಿವಿಧ ಸೌಲತ್ತುಗಳ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ನಯನಾ ಮೋಟಮ್ಮ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸುತ್ತಿರುವುದರಿಂದ ಝಡ್‌ಪ್ಲಸ್ ಕೆಟಗರಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಆಹ್ವಾನ ಗೌರವಿಸಿ ಬರುವ ಎಲ್ಲಾ ಭಕ್ತರು ಬೆಳಗ್ಗೆ ೯ ಗಂಟೆ ಒಳಗೆ ದೇವಸ್ಥಾನದ ಮುಂಭಾಗದಲ್ಲಿರುವ ಆವರಣದ ಒಳಗೆ ಬಂದು ಸೇರುವಂತೆ ಮನವಿ ಮಾಡಿದ ಅವರು, ಭಾಗವಹಿಸುವ ಆಹ್ವಾನಿತರಿಗೆ ಬ್ಯಾಡ್ಜ್, ಪಾಸ್ ಮತ್ತು ವಾಹನ ಪಾಸ್‌ಗಳನ್ನು ಶ್ರೀ ಕ್ಷೇತ್ರದ ಪ್ರವೇಶ ಧ್ವಾರದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು.ಅಂದು ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧ ಗಂಟೆವರೆಗೆ ದೇವರ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮಧ್ಯಾಹ್ನದ ನಂತರ ಎಂದಿನಂತೆ ದೇವರ ದರ್ಶನ ಮತ್ತು ಪ್ರಸಾದ ಮುಂದುವರಿಯುತ್ತದೆ. ಈ ಬದಲಾವಣೆಗೆ ಕ್ಷೇತ್ರಕ್ಕೆ ಬರುವ ಭಕ್ತರು ಸಹಕರಿಸುವಂತೆ ವಿನಂತಿಸಿದ ಅವರು, ಹೆಚ್ಚಿನ ಮಾಹಿತಿಗೆ ೮೨೧೭೬೨೯೯೭೯ ಈ ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಕೋರಿದರು.