ರಾಮನಗರ: ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪೊರಕೆ ಚಳವಳಿ ನಡೆಸಿದರು.
ಶಿವಸೇನೆ ಮತ್ತು ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರದಲ್ಲಿರುವ ಎಲ್ಲಾ ರಾಜಕಾರಣಿಗಳು ರಾಜೀನಾಮೆ ನೀಡಬೇಕು. ಸಾಂಬಾಜಿ ಪ್ರತಿಮೆ ತೆಗೆಯಬೇಕು. ಕನ್ನಡ ಚಾಲಕನ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಮಹದಾಯಿ - ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆ ಕಾರ್ಯಗತವಾಗಲೇಬೇಕು ಎಂದು ಒತ್ತಾಯಿಸಿದರು.
ವಾಟಾಳ್ ನಾಗರಾಜ್ ಮಾತನಾಡಿ, ಮಾ.22ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ದಿನೇಶ್ ಗೌಡ, ಮಂಜುನಾಥ್ ದೇವ್ ಸೇರಿದಂತೆ ಸಾವಿರಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದವರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ಆಟೋ ಚಾಲಕರ ಸಂಘ, ಏರ್‌ಪೋರ್ಟ್ ಕಾರು ಚಾಲಕರು, ಖಾಸಗಿ ಬಸ್ ಮಾಲೀಕರು, ಸಾರಿಗೆ ಬಸ್ ಸಿಬ್ಬಂದಿ ಸೇರಿದಂತೆ ಅನೇಕರನ್ನು ಭೇಟಿಯಾಗಿ ಬಂದ್ ಕುರಿತು ಚರ್ಚೆ ಮಾಡಿದ್ದು, ಅವರೆಲ್ಲರಿಂದಲೂ ಬೆಂಬಲ ವ್ಯಕ್ತವಾಗಿದೆ. ಇದು ಕನ್ನಡದ ಗೌರವದ ಪ್ರಶ್ನೆ. ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಆದ್ದರಿಂದ ಆ ದಿನ ಚಾಲಕರು ವಾಹನಗಳನ್ನು ಹತ್ತಬಾರದು ಎಂದು ಮನವಿ ಮಾಡಿದರು.
ಬಿಜೆಪಿಯವರು ಬೆಳಗಾವಿ ಮಹಾನಗರ ಪಾಲಿಕೆ ಗೆದ್ದಿದ್ದಾರೆ. ಆದರೆ, ಅವರೆಲ್ಲರು ಮರಾಠಿಗರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸಾಂಬಾಜಿ ಪ್ರತಿಮೆ ಬಂದಿದೆ. ಈ ಕೂಡಲೇ ಮಹಾರಾಷ್ಟ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ , ಜಿಲ್ಲಾಧ್ಯಕ್ಷ ಸಿ.ಎಸ್ .ಜಯಕುಮಾರ್ , ತಾಲೂಕು ಅಧ್ಯಕ್ಷ ಗಂಗಾಧರ್ , ಯುವಕ ಘಟಕ ಅಧ್ಯಕ್ಷ ಆರ್ .ಜೆ.ಅರ್ಜುನ್ , ದಲಿತ ಘಠಕ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲೂಕು ಮಹಿಳಾಧ್ಯಕ್ಷೆ ಭಾಗ್ಯಸುಧಾ, ಬಿಡದಿ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ , ಜಿಲ್ಲಾ ಉಪಾಧ್ಯಕ್ಷ ಕೆಂಪರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಗರ ಘಟಕ ಅಧ್ಯಕ್ಷ ಪ್ರಸನ್ನ, ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.
ದಕ್ಷಿಣ ರಾಜ್ಯಗಳ ಸಭೆಗೆ ಸಿಎಂ ಹೋಗಬಾರದು
ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನೋಡಿದರೆ ಭಾರತದಲ್ಲಿ ದಕ್ಷಿಣ ರಾಜ್ಯಗಳೇ ಬೇರೆ ಎಂಬುದಾಗಿ ಪ್ರತಿಬಿಂಬಿಸಲು ಹೊರಟಂತಿದೆ. ಆದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಆ ಸಭೆಗೆ ಹೋಗಬಾರದು ಎಂದರು.
13ಕೆಆರ್ ಎಂಎನ್ 3.ಜೆಪಿಜಿ