ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ: ರಸ್ತೆ ಅಪಘಾತವೆಂದು ಬಿಂಬಿಸಲೆತ್ನಿಸಿದ್ದ ಆರೋಪಿಗಳು

KannadaprabhaNewsNetwork |  
Published : Mar 16, 2026, 01:15 AM IST
1)- 15ಎಚ್‌ ಆರ್‌ ಪಿ 1 -ಆರೋಪಿ ಪತ್ರೆಗೌಡ 2)-15ಎಚ್‌ ಆರ್‌ ಪಿ 2 - ಆರೋಪಿ ಉತ್ತಂಗಿ ನಾರಪ್ಪ  | Kannada Prabha

ಸಾರಾಂಶ

ಕೊಲೆ ಮಾಡಿದ ಬಳಿಕ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳ ಬಣ್ಣ ಬಯಲಾಗಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರಪನಹಳ್ಳಿ: ಆಸ್ತಿ ಆಸೆಗಾಗಿ ಹೆತ್ತ ಅಣ್ಣನನ್ನೇ ತಮ್ಮ ಮತ್ತು ಆತನ ಸ್ನೇಹಿತ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.

ಕೊಲೆ ಮಾಡಿದ ಬಳಿಕ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳ ಬಣ್ಣ ಬಯಲಾಗಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೀಡಾದ ಯುವಕನನ್ನು ಹರಪನಹಳ್ಳಿ ತಾಲೂಕಿನ ಹಗರಿ ಶಿರನಹಳ್ಳಿ ಗ್ರಾಮದ ಮರಳುಸಿದ್ದೇಶ (26) ಎಂದು ಗುರುತಿಸಲಾಗಿದೆ. ಈತನ ಸ್ವಂತ ತಮ್ಮ ಹಗರಿಶಿರನಹಳ್ಳಿಯ ಪತ್ರಿಗೌಡ (24) ಹಾಗೂ ಈತನ ಸ್ನೇಹಿತ ಕಡಬಗೆರೆ ಗ್ರಾಮದ ಉತ್ತಂಗಿ ನಾರಪ್ಪ (29) ಎಂಬವರನ್ನು ಬಂಧಿಸಲಾಗಿದೆ.

ಮೃತನ ತಾಯಿ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ನೀಡಿದ ದೂರಿನನ್ವಯ ಹಿರಿಯ ಮಗ ಮರಳು ಸಿದ್ದೇಶ ಮನೆಯ ಜವಾಬ್ದಾರಿ, ಜಮೀನು, ಟ್ರ್ಯಾಕ್ಟರ್ ನೋಡಿಕೊಳ್ಳುತ್ತಿದ್ದ. ಆದರೆ ಆಸ್ತಿಯಲ್ಲಿ ಪಾಲು ಬೇಕು, ಹಂಚಿ ಕೊಡಿ ಎಂದು ತಾಯಿ ಮತ್ತು ಅಣ್ಣನೊಂದಿಗೆ ಪತ್ರಿಗೌಡ ಜಗಳವಾಡಿದ್ದ.

ಮಾ.13ರಂದು ಮಧ್ಯಾಹ್ನ ಇದೇ ವಿಚಾರವಾಗಿ ಜಗಳ ತೆಗೆದಿದ್ದ ಆರೋಪಿ ಪತ್ರಿಗೌಡ, ಪಾಲು ಕೊಡದಿದ್ದರೆ ನಾನು ದುಡಿಯಲು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಮನೆ ಬಿಟ್ಟು ಹೋಗಿದ್ದ.

ಮೃತ ಮರಳುಸಿದ್ದೇಶನು ಉತ್ತಂಗಿ ನಾರಪ್ಪ ಎಂಬಾತನನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಮನೆ ಬಿಟ್ಟು ಹೋಗಿದ್ದ ಸಹೋದರ ಪತ್ರಿ ಗೌಡನನ್ನು ಹುಡುಕಲು ತೆರಳಿದ್ದ. ತಡರಾತ್ರಿ ಒಂದು ಗಂಟೆಗೆ ಹಿರೇಮೇಗಳಗೆರೆ ಸಮೀಪದ ಹೊಸಹಳ್ಳಿ ಕ್ರಾಸ್ ಬಳಿ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ ಎಂದು ದೂರದ ಸಂಬಂಧಿ ಜಯಪ್ಪ ಅವರು ಶಾಂತಮ್ಮ ಅವರಿಗೆ ತಿಳಿಸಿದ್ದಾರೆ.

ಶಾಂತಮ್ಮ ಅವರು ಕೂಡಲೇ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದ ಶವ ನೋಡಿ ಮರುಳುಸಿದ್ದೇಶನ ತಲೆ, ಎದೆ, ಮುಖದ ಮೇಲೆ ಬಲವಾದ ಪೆಟ್ಟುಗಳಾಗಿದ್ದವು. ಆದರೆ ಇದು ವಾಹನ ಅಪಘಾತದಿಂದ ಆದ ಗಾಯಗಳಂತೆ ಇರಲಿಲ್ಲ. ಬೈಕ್ ನಲ್ಲಿದ್ದ ತಮ್ಮ ಮತ್ತು ಆತನ ಸ್ನೇಹಿತನಿಗೆ ಯಾವುದೇ ಸಣ್ಣ ಗಾಯವೂ ಆಗಿರಲಿಲ್ಲ. ಆಸ್ತಿ ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆಂದು ತಾಯಿ ಶಾಂತಮ್ಮ ಅರಸೀಕೆರೆ ಪೊಲೀಸರಿಗೆ ದೂರು ನೀಡಿದ್ದರು.

ದೂರು ನೀಡಲು ಬಂದಾಗ ಇದು ಒಂದು ಕೊಲೆ ಇರಬಹುದು ಎಂದು ತಿಳಿದು ಅನುಮಾನಗೊಂಡ ಪೊಲೀಸರು ಘಟನೆ ನಡೆದು 24 ತಾಸುಗಳಲ್ಲೇ ಪ್ರಕರಣ ಭೇದಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಎಸ್. ಜಾಹ್ನವಿ ಭೇಟಿ ನೀಡಿ ಡಿವೈಎಸ್ಪಿ ಸಂತೋಷ್ ಚೌಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್‌ಐಗಳಾದ ವಿಜಯ ಕೃಷ್ಣ, ನಾಗರತ್ನಾ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಪದೋಷ ನಿಯಂತ್ರಣಕ್ಕೆ ಮಾಹಿತಿ ಹಕ್ಕು ಕಾಯ್ದೆ ಸಹಕಾರಿ: ಪವನ ಗುನಗಾ
ಕೊಪ್ಪಳ: ಸಚಿವ ಸ್ಥಾನಕ್ಕಾಗಿ ಪೈಪೋಟಿ ಶುರು?