;Resize=(412,232))
ಬೆಂಗಳೂರು : ಆಸ್ತಿ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ತಂಗಿಯನ್ನೇ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೀನಾಕ್ಷಿ (39) ಕೊಲೆಯಾದವರು. ಅಡ್ವೊಕೇಟ್ ಜಯರಾಮ್ (42) ಆರೋಪಿ. ಜುನ್ನಸಂದ್ರದಲ್ಲಿ ಬುಧವಾರ 11.30 ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಜಯರಾಮ್‌ಗಾಗಿ ಎಲ್ಲೆಡೆ ಶೋಧ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಯರಾಮ್ ಮತ್ತು ಮೀನಾಕ್ಷಿ ಸ್ವಂತ ಅಣ್ಣ ತಂಗಿಯಾಗಿದ್ದು, ಇಬ್ಬರಿಗೂ ಮದುವೆಯಾಗಿದ್ದು, ಇಬ್ಬರು ಪ್ರತ್ಯೇಕವಾಗಿ ಜುನ್ನಸಂದ್ರದಲ್ಲಿರುವ ಎದುರು ಬದರು ಮನೆಯಲ್ಲಿ ವಾಸವಾಗಿದ್ದರು. ಮೀನಾಕ್ಷಿ ಅವರು ತಮ್ಮ ತಾಯಿ ಮಕ್ಕಳೊಂದಿಗೆ ವಾಸವಿದ್ದರು. ಜಯರಾಮ್ ಕೂಡ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದ. ಆರೋಪಿ ವೃತ್ತಿಯಲ್ಲಿ ವಕೀಲನಾಗಿದ್ದ. ಆಸ್ತಿ ವಿಚಾರಕ್ಕೆ ಮೊದಲಿನಿಂದಲೂ ಅಣ್ಣ ತಂಗಿಯ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಆರೋಪಿ ಅಮ್ಮನ ಬಿಟ್ಟು ನೀನು ಬೇರೆ ಕಡೆ ಹೋಗು ಎಂದು ಹೇಳುತ್ತಿದ್ದ. ಆದರೆ, ಮೀನಾಕ್ಷಿ ಅಮ್ಮನೊಂದಿಗೆ ತಾನು ಇರುವುದಾಗಿ ಹೇಳುತ್ತಿದ್ದಳು.
ಆಸ್ತಿ ವಿಚಾರಕ್ಕೆ ಬುಧವಾರ 11.30ರ ಸುಮಾರಿಗೆ ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಜಗಳ ತಾರಕಕ್ಕೇರಿದ್ದಾಗ ಆರೋಪಿ ಕ್ರಿಕೆಟ್ ಬ್ಯಾಟ್‌ನಿಂದ ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತೀವ್ರ ರಕ್ತ ಸ್ರಾವವಾಗಿ ಮೀನಾಕ್ಷಿ ಮೃತಪಟ್ಟಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.