ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಾಳಿಕೋಟಿಯಲ್ಲಿ ಸರ್ಕಾರಿ ಪದವಿ ಕಾಲೇಜು ಸ್ಥಾಪಿಸುವ ಅಗತ್ಯವಿದೆ. ಸರ್ಕಾರದ ಹಣಕಾಸಿನ ತೊಂದರೆಯಿಂದ ಅನುದಾನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಎಸ್ಡಿಎಲ್ ಅಧ್ಯಕ್ಷನಾಗಿ ಸಿಎಸ್ಆರ್ ನಿಧಿಯಿಂದ ₹೪ ಕೋಟಿ ನೀಡಲು ಸಿದ್ಧನಿದ್ದೇನೆ ಎಂದು ಕೆಎಸ್ಡಿಎಲ್ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಾಳಿಕೋಟಿಯಲ್ಲಿ ಸರ್ಕಾರಿ ಪದವಿ ಕಾಲೇಜು ಸ್ಥಾಪಿಸುವ ಅಗತ್ಯವಿದೆ. ಸರ್ಕಾರದ ಹಣಕಾಸಿನ ತೊಂದರೆಯಿಂದ ಅನುದಾನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಎಸ್ಡಿಎಲ್ ಅಧ್ಯಕ್ಷನಾಗಿ ಸಿಎಸ್ಆರ್ ನಿಧಿಯಿಂದ ₹೪ ಕೋಟಿ ನೀಡಲು ಸಿದ್ಧನಿದ್ದೇನೆ ಎಂದು ಕೆಎಸ್ಡಿಎಲ್ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಭರವಸೆ ನೀಡಿದರು.ಪಟ್ಟಣದ ಸಾಂಬಪ್ರಭು ಶರಣಮುತ್ತಯ್ಯ ದೇವಸ್ಥಾನದ ಆವರಣದಲ್ಲಿ ಹಜರತ್ ಟಿಪ್ಪು ಸುಲ್ತಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾವೈಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಉಳಿದ ಹಣವನ್ನು ಬೇರೆ ಮೂಲಗಳಿಂದ ಹೊಂದಿಸಲು ಪ್ರಯತ್ನಿಸಲಾಗುವುದು. ಈ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರೊಂದಿಗೆ ಚರ್ಚಿಸಿದ್ದು, ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಪದವಿ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ಪದವಿ ಮುಗಿದ ಕೂಡಲೇ ಶಿಕ್ಷಣ ನಿಲ್ಲಿಸಬಾರದು. ಉನ್ನತ ಶಿಕ್ಷಣ ಪಡೆದು ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಮೀನುಗಾರರ ಕುಟುಂಬದಲ್ಲಿ ಜನಿಸಿದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಶಿಕ್ಷಣದ ಬಲದಿಂದ ದೇಶದ ರಾಷ್ಟ್ರಪತಿ ಸ್ಥಾನಕ್ಕೇರಿದರು. ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಅಪಾರ ಜ್ಞಾನ ಮತ್ತು ವಿದ್ಯೆಯಿಂದ ರಾಷ್ಟ್ರಮಟ್ಟದಲ್ಲಿ ಗೌರವ ಗಳಿಸಿದರು. ಹೀಗಾಗಿ ಖಡ್ಗಕ್ಕಿಂತ ಲೇಖನಿ ಹೆಚ್ಚು ಶಕ್ತಿಶಾಲಿ ಎಂಬುವುದನ್ನು ಯುವಜನತೆ ಅರಿಯಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ಬದಲಾವಣೆ ತರಲು ಸಾಧ್ಯ ಎಂದರು.ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಬಾಗಲಕೋಟೆ ಉಸ್ತವಾರಿ ಸಚಿವ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಈ ಹಿಂದೆ ನೀಡಲಾಗಿದ್ದ ೨ಬಿ ಮೀಸಲಾತಿ ಮರುಸ್ಥಾಪಿಸುವ ನಿಟ್ಟಿನಲ್ಲಿಯೂ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಂದಿನ ವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಮತ್ತೆ ಆರಂಭಿಸುವ ಕುರಿತು ಸಿಎಂ ಹಾಗೂ ಡಿಸಿಎಂ ಗಳೊಂದಿಗೆ ಚರ್ಚಿಸಿ ಅಗತ್ಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ನಾವೆಲ್ಲರೂ ಜಾತಿ, ಧರ್ಮಗಳ ಭೇದ-ಭಾವ ಮರೆತು ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಬದುಕಬೇಕು. ಯಾವುದೇ ಧರ್ಮಗ್ರಂಥವೂ ಮತ್ತೊಬ್ಬರಿಗೆ ಕೆಟ್ಟದ್ದನ್ನು ಬಯಸುವಂತೆ ಬೋಧಿಸುವುದಿಲ್ಲ. ಪರಸ್ಪರ ಪ್ರೀತಿ, ಸಹಾಯ, ಸಹಕಾರದಿಂದ ಬದುಕಬೇಕು ಎಂಬುವುದೇ ಎಲ್ಲ ಧರ್ಮಗಳ ಸಾರವಾಗಿದೆ. ಇದನ್ನು ಅರಿತು ನಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ, ಸೈಯದಫೈಸಲ್ಸಖಾಪ್ಖಾದ್ರಿ ಸಾದತ್, ಜೈಭೀಮ ಮುತ್ತಗಿ, ಅಲ್ಲಾಭಕ್ಷ ಚಳ್ಳಿಗಿಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಸಂಘಟಿಕರಿಂದ ಟಿಪ್ಪು ಜಯಂತಿ ಅಂಗವಾಗಿ ಬೃಹತ್ ಬೈಕ್ರ್ಯಾಲಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಶುಭ ಸಂದೇಶ ಕಳುಹಿಸಿದ ಸಚಿವ ಯು.ಟಿ.ಖಾದರ್ ಹಾಗೂ ಸಿದ್ದಲಿಂಗ ಶ್ರೀಗಳ ಸಂದೇಶ ಸಭಿಕರಿಗೆ ನೀಡಲಾಯಿತು.ವೇದಿಕೆಯ ಮೇಲೆ ಶರಣರ ಮಠದ ಶರಣರು, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ್ಮದ ಖಾಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ), ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಮಡುಸಾಹುಕಾರ ಬಿರಾದಾರ, ಸಿದ್ದನಗೌಡ ಪಾಟೀಲ(ನಾವದಗಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಅಬ್ದುಲ್ರಜಾಕ್ ಮನಗೂಳಿ, ಪ್ರಭುಗೌಡ ಮದರಕಲ್ಲ, ನಿರಂಜನಶಾ ಮಕಾಂದಾರ, ರೋಶನ್ ಡೋಣಿ, ಅಕ್ಕಮಹಾದೇವಿ ಕಟ್ಟಿಮನಿ, ಆರೀಫ್ ಹೊನ್ನುಟಗಿ, ರೇಷ್ಮಾ ಮಾರಬಸರಿ, ಸಮಿತಿ ಅಧ್ಯಕ್ಷ ಸದ್ದಾಂ ಮನಗೂಳಿ, ಉಪಾಧ್ಯಕ್ಷ ರಿಯಾಜಅಹ್ಮದ ಡೋಣಿ, ಸದ್ದಾಂ ಹೊನ್ನಳ್ಳಿ, ಹುಸೇನ ಹಡಗಿನಾಳ, ಫಯಾಜ್ ಉತ್ನಾಳ, ಮಹಿಬೂಬ್ ಲಾಹೋರಿ, ಸದ್ದಾಂ ನಮಾಜಕಟ್ಟಿ, ರಾಜು ಚಿತ್ತರಗಿ, ರಮೀಜ್ ತಾಳಿಕೋಟಿ, ರಜಾಕ್ ಮುಲ್ಲಾ, ಫಾಡಿಶ್ಯಾ ಮಕಾಂದಾರ, ಇಜಾಜ್ ಬೇಪಾರಿ, ಸದ್ದಾಂ ಬೇಪಾರಿ, ರಹೇಮಾನ್ ವಠಾರ, ಇಮ್ತಿಯಾಜ್ ಉಸ್ತಾದ, ಅಯಾನ್ ಮಕಾಂದಾರ ಮೊದಲಾದವರು ಇದ್ದರು. ಅಬ್ದುಲ್ಗನಿ ಮಕಾಂದಾರ ನಿರೂಪಿಸಿ, ವಂದಿಸಿದರು.ಶಿವಪುರ ಗ್ರಾಮದಲ್ಲಿ ಅಲ್ಪಸಂಖ್ಯಾತರಿಗಾಗಿ ವಸತಿ ಶಾಲೆ ಆರಂಭಿಸಲು ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ನಿವೇಶನ ಕಾಯ್ದಿರಿಸುವ ಪ್ರಕ್ರಿಯೆ ಪೂರ್ಣಗೊಂಡು ಜಿಲ್ಲಾಧಿಕಾರಿಗಳ ಅನುಮತಿ ದೊರೆತ ತಕ್ಷಣ ಶಾಲೆ ಪ್ರಾರಂಭಿಸಲಾಗುವುದು.
-ಸಿ.ಎಸ್.ನಾಡಗೌಡ(ಅಪ್ಪಾಜಿ), ಕೆಎಸ್ಡಿಎಲ್ ಅಧ್ಯಕ್ಷ, ಶಾಸಕರು.