ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬುಧವಾರ ಬೆಳಗ್ಗೆ 10 ಗಂಟೆಗೆ ಪುರಲೆ ಗ್ರಾಮದ ವೃತ್ತದಿಂದ ಹಸಿರು ಬಾವುಟಗಳೊಂದಿಗೆ ಆರಂಭಗೊಂಡ ಟ್ರ್ಯಾಕ್ಟರ್ ರ್‍ಯಾಲಿ ಚಿಕ್ಕಲ್ ಮೂಲಕ ಬಿಹೆಚ್ ರಸ್ತೆ, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮೂಲಕ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ರೈತ ಸಂಘದ ಹಿರಿಯ ನಾಯಕ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಅಚ್ಚುಕಟ್ಟು ಪ್ರದೇಶದ ಭದ್ರಾವತಿ, ಮಲೆಬೆನ್ನೂರು, ದಾವಣಗೆರೆ, ಚಿಕ್ಕಮಗಳೂರು, ವಿಜಯಪುರ ಭಾಗದ ಸಾವಿರಾರು ರೈತರು ಟ್ರ್ಯಾಕ್ಟರ್ ಸಮೇತ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರುಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕದಂತೆ ಪೊಲೀಸರು ಹಾಕಿದ ಗೇಟ್ ನ್ನು ತಳ್ಳಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.ಪೊಲೀಸರು ಮುತ್ತಿಗೆ ಹಾಕದಂತೆ ತಡೆಯಲು ಎಷ್ಟೇ ಪ್ರಯತ್ನಿಸಿದರೂ ರೈತರು ಡಿಸಿ ಕಚೇರಿ ಆವರಣದೊಳಗೆ ಟ್ರ್ಯಾಕ್ಟರ್ ತರುವಲ್ಲಿ ಯಶಸ್ವಿಯಾದರು.
ರೈತರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿರುವ ಡಿ.ಕೆ ಶಿವಕುಮಾರ್ ರೈತ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ,ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಶಾಸಕ ಶಾಂತನಗೌಡ ವಿರುದ್ಧ ಧಿಕ್ಕಾರ ಕೂಗಿದರು.
ಗ್ಯಾರಂಟಿ ಕೊಟ್ಟು ರೈತರ ಬದುಕು ಹಾಳು ಮಾಡಿದ್ದಾರೆ ಎಂದ ಪ್ರತಿಭಟನಾನಿರತ ರೈತರು, ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬಲ ಮತ್ತು ಎಡದಂಡೆ ನಾಲೆಗಳಲ್ಲಿ 20 ದಿನ ನೀರು ಹರಿಸಬೇಕು. ಜನವರಿಯಿಂದ ರೈತರ ಬೆಳೆಗಳಿಗೆ ನೀರು ಒದಗಿಸುವ ವೇಳಾಪಟ್ಟಿಯನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಚ್.ಎಸ್. ಮಂಜುನಾಥೇಶ್ವರ , ಹಿರಣಯ್ಯ, ಯಶವಂತ್ ರಾವ್ ಗೋರ್ಪಡೆ, ರಘುನಾಥ್, ಸಂಜಯಕುಮಾರ್, ಕೃಷ್ಣಮೂರ್ತಿ, ಮಂಜುನಾಥ್, ಮೆಸ್ತ್ರಿ, ಶಿವು, ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಪೋಟೋ: 25ಎಸ್‌ಎಂಜಿಕೆಪಿ04