-ನೀರು ಹರಿಸಲು ಪಟ್ಟು, ಶಿವಮೊಗ್ಗ ಬಂದ್ ಕರೆ ನೀಡುವುದಾಗಿ ರೈತರ ಎಚ್ಚರಿಕೆ
ಭದ್ರಾ ಜಲಾಶಯದ ಬಲದಂಡೆ ಹಾಗೂ ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೈತರ ಟ್ರ್ಯಾಕ್ಟರ್ ರ್‍ಯಾಲಿ ಸಂಜೆ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತು.
ನಗರದ ಕೋರ್ಟ್ ವೃತ್ತ, ವೀರಭದ್ರ ಟಾಕೀಸ್ ವೃತ್ತ, ಮಹಾವೀರ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡಹಾಕಿ ಪ್ರತಿಭಟನೆ ನಡೆಸಿದರೆ ಇತ್ತ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ವಿಭಜಕದ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ ಪರಿಣಾಮ ಕಬ್ಬಿಣದ ರಾಡ್‌ಗಳು ಮುರಿದು ತುಂಡಾಗಿ ಬಿದ್ದಿವೆ.ರಾಜ್ಯ ಸರ್ಕಾರ ಬುಧವಾರವೇ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ನ.26ರಂದು ಶಿವಮೊಗ್ಗ ಬಂದ್ ಗೆ ಕರೆ ನೀಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಎಸ್ಪಿ ಅವರ ಮನವಿಗೆ ಸ್ಪಂದಿಸಿದ ರೈತರು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಡಿವೈಡರ್ ಮೇಲೆ ಹತ್ತಿದ ಟ್ರ್ಯಾಕ್ಟರ್:
ನೀರು ಬಿಡುವ ಕುರಿತು ತೀರ್ಮಾನ ಪ್ರಕಟಿಸದಿದ್ದರೆ ಗುರುವಾರ ಶಿವಮೊಗ್ಗ ನಗರ ಬಂದ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಟ್ರ್ಯಾಕ್ಟರ್‌ಗಳನ್ನು ತೆರವುಗೊಳಿಸಿದರೂ ಬೆಕ್ಕಿನಕಲ್ಮಠ, ಚರ್ಚ್ ಸರ್ಕಲ್ ನಲ್ಲೂ ಪ್ರತಿಭಟನೆ ಮುಂದುವರೆದಿದೆ.