ಮಧುಗಿರಿ: ಹುಬ್ಬೆ, ಉತ್ತರೆ ಮಳೆಯಾಗದಿರುವುದರಿಂದ ರೈತರ ತೀವ್ರ ಸಂಕಷ್ಟಕ್ಕೀಡಾಗುವಂತಾಗಿದೆ. ತಾಲೂಕಿನಲ್ಲಿ ಮಘೇ ಮಳೆ ನಂತರ ಹುಬ್ಬೆ, ಉತ್ತರೆ ಮಳೆ ಆಗಿಲ್ಲ. ಭಿತ್ತಿದ ಬೆಳೆಗಳು ಸಂಪೂರ್ಣ ಒಣಗುತ್ತಿವೆ ಎಂದು ರೈತರು ಚಿಂತೆಗೀಡಾಗಿದ್ದಾರೆ.
ಮಧುಗಿರಿ: ಹುಬ್ಬೆ, ಉತ್ತರೆ ಮಳೆಯಾಗದಿರುವುದರಿಂದ ರೈತರ ತೀವ್ರ ಸಂಕಷ್ಟಕ್ಕೀಡಾಗುವಂತಾಗಿದೆ. ತಾಲೂಕಿನಲ್ಲಿ ಮಘೇ ಮಳೆ ನಂತರ ಹುಬ್ಬೆ, ಉತ್ತರೆ ಮಳೆ ಆಗಿಲ್ಲ. ಭಿತ್ತಿದ ಬೆಳೆಗಳು ಸಂಪೂರ್ಣ ಒಣಗುತ್ತಿವೆ ಎಂದು ರೈತರು ಚಿಂತೆಗೀಡಾಗಿದ್ದಾರೆ.
ಸಾಲ ಮಾಡಿ ಭಿತ್ತಿದ ಬೀಜ, ಗೊಬ್ಬರ ಮಣ್ಣು ಪಾಲಾಗಿವೆ. ಪ್ರತಿ ವರ್ಷ ಪ್ರಾರಂಭದಲ್ಲಿ ಮಳೆರಾಯ ರೈತನಿಗೆ ಆಸೆ ಹುಟ್ಟಿಸಿ ನಂತರ ಕೈ ಕೊಡುವ ಪರಿಪಾಠ ಮತ್ತೆ ಮುಂದುವರಿದಿದೆ. ಕೈಗೆ ಬರಬೇಕಾದ ಫಸಲು ಮಳೆ ಇಲ್ಲದ ಕಾರಣ ಬರುತ್ತಿಲ್ಲ. ರೈತರು ಒಣಗುತ್ತಿರುವ ಬೆಳೆ ಕಂಡು ವರುಣನ ಅಟ್ಟಹಾಸಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ತಾಲೂಕಿನಲ್ಲಿ ಶೇಂಗಾ, ಮುಸುಕಿನಜೋಳ ಅಂದಾಜು ಶೇ.40 ಬಿತ್ತನೆ ಆಗಿದ್ದು, ಈಗಾಗಲೇ ಶೇಂಗಾ ಬೆಳೆಗೆ ಬೂದಿ ರೋಗ ಆವರಿಸಿದೆ. ಈ ಪೈಕಿ ಶೇಂಗಾ ಕಾಯಿ ಬಲಿಯುವ ಮುಸುಕಿನ ಜೋಳ ಕಾಳು ಕಟ್ಟುವ ವೇಳೆಗೆ ಮಳೆ ಕೈ ಕೊಟ್ಟ ಪರಿಣಾಮ ಬಿತ್ತಿರುವ ಬೀಜ ಕೂಡ ವಾಪಸ್ ಸಿಗಲ್ಲ. ಇನ್ನು ಕೊರಲೆ, ನವಣೆ ಎಲ್ಲ ಬೆಳೆಗಳು ಸಂಪೂರ್ಣ ಒಣಗಿವೆ. ಈಗ ಮಳೆ ಬಿದ್ದರೆ ದನ ಕರುಗಳಿಗೆ ಮೇವು, ಕುಡಿವ ನೀರು ಮತ್ತು ತೊಗರಿ, ಉರುಳಿ, ರಾಗಿ ಬೆಳೆ ಕೈಗೆ ಸಿಗಬಹುದು. ಅಲ್ಪ ಸ್ವಲ್ಪ ಬೆಳೆಗಳಿಗೆ ಐ.ಡಿ.ಹಳ್ಳಿ ಹೋಬಳಿ ಮೈದನಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತ ಕೆಲವು ಪ್ರದೇಶಗಳಲ್ಲಿ ನವಿಲು, ಹಂದಿ, ಜಿಂಕೆ, ಕರಡಿಗಳ ಕಾಟಕ್ಕೆ ಬೆಳೆಗಳು ನಾಶವಾಗುತ್ತವೆ.
ತಾಲೂಕಿನ ಪುರವರ, ಮಿಡಿಗೇಶಿ, ಐ.ಡಿ.ಹಳ್ಳಿ, ಮಧುಗಿರಿ ಕಸಬಾ ಹಾಗೂ ದೊಡ್ಡೇರಿ ಈ ಆರು ಹೋಬಳಿಗಳಲ್ಲೂ ಸಹ ಮಳೆಗಾಗಿ ರೈತರು ಜಾತಕ ಪಕ್ಷಿಯಂತೆ ಆಕಾಶದತ್ತ ಮುಖ ಮಾಡಿದ್ದಾರೆ. ನೇರಳೇಕೆರೆ ಸುತ್ತಮುತ್ತ ಮಳೆ ಕೈ ಕೊಟ್ಟ ಪರಿಣಾಮ ಗ್ರಾಮದ ರೈತ ನಾಗರಾಜು ರಾಗಿ ಫಸಲು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸುವ ದೃಶ್ಯ ಕಂಡು ಬಂದಿದೆ.
ದನಕರುಗಳ ಮೇವಿನ ಜೋಳ ಬಿತ್ತನೆ ಮಾಡಬಹುದು. ಆದರೆ ಸರ್ಕಾರ ಬಿತ್ತನೆ ಜೋಳವನ್ನು ಸರ್ಕಾರ ರೈತರಿಗೆ ಸಹಕಾರ ಸಂಘಗಳು ಅಥವಾ ಹಾಲಿನ ಡೈರಿ ಮೂಲಕ ಉಚಿತವಾಗಿ ಒದಗಿಸಬೇಕಿದೆ. ಇದೇ ರೀತಿ ಮಳೆ ಬಾರದೇ ಮುಂದುವರಿದರೆ ಮೇವಿನ ಹಾಹಾಕಾರ ಶುರುವಾಗಲಿದ್ದು, ಜನವರಿ ವೇಳೆಗೆ ಸರ್ಕಾರ ಗೋಶಾಲೆ ತೆರೆಯಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ರೈತರ ಹಿತ ಕಾಪಾಡಲು ಮುಂದಾಗಬೇಕು ಎಂಬುದು ರೈತರ ಒತ್ತಾಸೆಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.