ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳ ಮಾರಾಟ ಆರಂಭ

KannadaprabhaNewsNetwork |  
Published : Sep 22, 2024, 01:48 AM IST
6 | Kannada Prabha

ಸಾರಾಂಶ

ಮೈಸೂರು ನಗರದ ನಂಜರಾಜ ಬಹದ್ದರೂ ಛತ್ರದಲ್ಲಿ ಆರಂಭವಾದ ಎರಡು ದಿನಗಳ ಈ ಮೇಳದಲ್ಲಿ ಗೋಕರ್ಣ, ಎಚ್.ಡಿ. ಕೋಟೆ, ರಾಣೆಬೆನ್ನೂರು, ಹಾವೇರಿ, ಮೈಸೂರು, ಖಾನಾಪುರ, ಬೆಳಗಾವಿ, ಗೋಕರ್ಣ, ಸವದತ್ತಿ, ಕುಂದಗೋಳ ಸೇರಿದಂತೆ ವಿವಿಧೆಡೆಯಿಂದ ನೂರಾರು ಮಂದಿ ರೈತರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ಶನಿವಾರ ಆಯೋಜಿಸಿದ್ದ ಎರಡು ದಿನಗಳ ಸೊಪ್ಪು ಮೇಳದಲ್ಲಿ ರಾಜ್ಯದ ವಿವಿಧ ಭಾಗದಿಂದ ಬಂದ ರೈತರು ಅನೇಕ ಬಗೆಯ ಸೊಪ್ಪು ಮತ್ತು ಅವುಗಳ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶಿಸಿ, ಮಾರಾಟ ಮಾಡಿದರು.

ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆರಂಭವಾದ ಎರಡು ದಿನಗಳ ಈ ಮೇಳದಲ್ಲಿ ಗೋಕರ್ಣ, ಎಚ್.ಡಿ. ಕೋಟೆ, ರಾಣೆಬೆನ್ನೂರು, ಹಾವೇರಿ, ಮೈಸೂರು, ಖಾನಾಪುರ, ಬೆಳಗಾವಿ, ಗೋಕರ್ಣ, ಸವದತ್ತಿ, ಕುಂದಗೋಳ ಸೇರಿದಂತೆ ವಿವಿಧೆಡೆಯಿಂದ ನೂರಾರು ಮಂದಿ ರೈತರು ಪಾಲ್ಗೊಂಡಿದ್ದರು.

ರಂಗಾಯಣ ನಿರ್ದೇಶಕ ಸತೀಶ್ತಿಪಟೂರು ಈ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಸೊಪ್ಪು ವ್ಯಾಪಾರ ಎಂಬುದು ಕಾಡಂಚಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪುವ ಅವಕಾಶವಿದೆ. ನಗರಗಳಲ್ಲಿ ಸೊಪ್ಪಿನ ಬೆಲೆ ದುಬಾರಿಯಾದರೂ, ಹಳ್ಳಿಗಳಲ್ಲಿ ಕಡಿಮೆಗೆ ಸಿಗಲಿದೆ. ಈ ಮೇಳದಲ್ಲಿ ಅತಿ ಅಪರೂಪದ ಸೊಪ್ಪುಗಳು ಸಿಗುತ್ತಿದೆ ಎಂದರು.

ಸಹಜ ಸಮೃದ್ಧ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮಾತನಾಡಿ, ಹಲಸು, ಗೆಡ್ಡೆ, ಗೆಣಸು, ಸಿರಿಧಾನ್ಯ ಮೇಳ ಮುಂದುವರೆದು ಸೊಪ್ಪು ಮೇಳ ಆಯೋಜಿಸಲಾಗಿದೆ. ಸೊಪ್ಪು ಪ್ರಚಾರಕ್ಕೆ ಬರಬೇಕು, ಅದರ ಮಹತ್ವದ ಕುರಿತು ಅರಿವು ಮೂಡಿಸುವುದೇ ಈ ಮೇಳದ ಉದ್ದೇಶ ಎಂದರು.

ಕೃಷಿಕರ ಬದುಕು ಹಸಿರನ್ನಾಗಿಸಲು ಸೊಪ್ಪು ಸಹಕಾರಿಯಾಗಿದೆ. ಸೊಪ್ಪು ಬ್ರ್ಯಾಂಡ್ಆಗಬೇಕು. ಈ ಮೇಳ ಎಲ್ಲರದ್ದು, ರೈತರಿಗೆ ಹೆಚ್ಚು ಅನುಕೂಲವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜೆಎಸ್ಎಸ್ ಕೃಷಿ ವಿಜ್ಞಾನದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ಎಲ್ಲೆಡೆ ಸೊಪ್ಪಿನ ಪ್ರಮಾಣ ಹೆಚ್ಚಿದೆ. ಸೋಪ್ಪು ಆರೋಗ್ಯಕ್ಕೆ ಉತ್ತಮ ಆಹಾರ. ಸೊಪ್ಪಿನಲ್ಲಿರುವ ಪೋಷಕಾಂಶದ ಕುರಿತು ಹೆಚ್ಚಿನ ಅರಿವು ಅಗತ್ಯ ಎಂದರು.

ಬಸಳೆ, ನೆಲ ಬಸಳೆ, ಹರಿವೆ, ಹಾಡೆಬಳ್ಳಿ, ಕಿರ್ಕಸಾಲಿ, ಕೆಸು ಸೇರಿ ಹತ್ತಾರು ಮಾದರಿಯ ಸೊಪ್ಪುಗಳು ಇದ್ದವು. ಮೇಳಕ್ಕೆ ಬಂದವರು ಯಾರೂ ಕೂಡ ಬರಿ ಕೈಯಲ್ಲಿ ಹಿಂದಿರುಗಲಿಲ್ಲ.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬಿ.ಡಿ. ಜಯರಾಮ್ಮಾತನಾಡಿದರು. ಜೇನು ಕುರುಬ ಸಮುದಾಯದ ನಾಯಕರಾದ ಪಾರ್ವತಿ ಹಾಗೂ ಸೊಪ್ಪು ಬೆಳೆಗಾರರು ಸೇರಿದಂತೆ ಸಾರ್ವಜನಿಕರು ಇದ್ದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?