ಹುಬ್ಬಳ್ಳಿ:
ಬಾಗಿಲಲ್ಲಿ ನಿಂತು ದಾಂಧಲೆ ಮಾಡುತ್ತ ಪ್ರಯಾಣಿಕರಿಗೆ ಅಡಚಣೆ ಉಂಟು ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದ ಚಾಲಕನ ಮೇಲೆಯೇ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ಕಿಮ್ಸ್ ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.ಈ ಬಿಆರ್‌ಟಿಎಸ್ ಬಸ್ ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿತ್ತು. ಮಧ್ಯದಲ್ಲಿ ಬಸ್ ಏರಿದ ಐವರು ವಿದ್ಯಾರ್ಥಿಗಳು (ತೆಳು ಗುಲಾಬಿ ಸಮವಸ್ತ್ರದ ಕಿಸೆಯ ಮೇಲೆ ಸನಾ ಎಂದು ಬರೆದಿತ್ತು) ಸ್ವಯಂಚಾಲಿತ ನಿರ್ವಹಣೆಯಾಗುವ ಬಾಗಿಲು ಬಳಿ ನಿಂತು ಗದ್ದಲ ಮಾಡುತ್ತಿದ್ದರು. ಪ್ರತಿ ನಿಲ್ದಾಣದ ಬಳಿ ಬಸ್ ಬಂದಾಗ ಬಸ್ ಏರುವ- ಇಳಿಯುವ ಪ್ರಯಾಣಿಕರಿಗೆ ಇವರಿಂದ ಕಿರಿಕಿರಿ ಆಗುತ್ತಿತ್ತು.
ವಿದ್ಯಾನಗರ ನಿಲ್ದಾಣದ ಬಳಿ ಬಾಗಿಲು ಅಡಿಯಲ್ಲಿ ಓರ್ವ ವಿದ್ಯಾರ್ಥಿಯ ಶೂ ಸಿಲುಕಿತು. ಇದರಿಂದ ಬಾಗಿಲು ಜಾಮ್ ಆಯಿತು. ಕಿಮ್ಸ್ ನಿಲ್ದಾಣಕ್ಕೆ ಬಂದಾಗ ಬಾಗಿಲು ಸರಳವಾಗಿ ಬಾರದೆ ಪ್ರಯಾಣಿಕರು ಅಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಜತೆ ವಾಗ್ವಾದಕ್ಕೆ ಇಳಿದರು. ಆಗ ವಿದ್ಯಾರ್ಥಿಗಳ ಬಳಿ ಬಂದ ಚಾಲಕ "ನೀವೆಲ್ಲ ಓದಲು ಬರುತ್ತೀರಿ. ಹೀಗೆ ದಾಂಧಲೆ ಮಾಡಿ ಪ್ರಯಾಣಿಕರಿಗೆ ತೊಂದರೆ ಮಾಡಿ ನಿಮ್ಮ ತಂದೆ-ತಾಯಿಗಳ ಮರ್ಯಾದೆ ಕಳೆಯುತ್ತೀರಿ " ಎಂದು ಬುದ್ಧಿವಾದ ಹೇಳಿದ್ದಕ್ಕೆ ಕುಪಿತಗೊಂಡ ಅವರೆಲ್ಲರೂ ಏಕವಚನದಲ್ಲಿ ನಿಂದಿಸುತ್ತ ಚಾಲಕನ ಮೈಮೇಲೆ ಹೋದರು. ಮಾತು ಜೋರಾದಾಗ ಓರ್ವ ವಿದ್ಯಾರ್ಥಿ ಹಿಂದಿನಿಂದ ಬಂದು ಚಾಲಕನ ಬೆನ್ನಿಗೆ ಹೊಡೆದ. ಆಗ ಎದುರಿದ್ದವರೂ ಶರ್ಟ್ ಹಿಡಿದು ತಳ್ಳಾಡಿ ಹೊಡೆದರು.ಹೀಗೆ ಗದ್ದಲ ಆಗುತ್ತಿದ್ದಾಗ ಹಿಂದೆ ಬಂದ ಮೂರು ಬಿಆರ್‌ಟಿಎಸ್ ಬಸ್‌ಗಳು ಸಾಲುಗಟ್ಟಿ ನಿಂತವು. ಆಗ ಪ್ರಯಾಣಿಕರಲ್ಲಿ ತೀವ್ರ ಗೊಂದಲ ಉಂಟಾಯಿತು. ಉಳಿದ ಬಸ್‌ಗಳ ಚಾಲಕರು ಬಂದು ಹಲ್ಲೆಗೊಳಗಾದ ಚಾಲಕನನ್ನು ಬಿಡಿಸಿಕೊಂಡು ಪಾರು ಮಾಡಿದರು. ಇನ್ನೇನು ಎಲ್ಲರೂ ಕೂಡಿ ತಮ್ಮನ್ನು ಹಿಡಿದು ಥಳಿಸುತ್ತಾರೆ ಎನ್ನುವ ಭಯದಿಂದ ವಿದ್ಯಾರ್ಥಿಗಳು ನಿಲ್ದಾಣದಿಂದ ಕೆಳಗೆ ಜಿಗಿದು ಓಡಿ ಹೋದರು.
ಸುಮಾರು 20 ನಿಮಿಷ ಈ ಹಲ್ಲೆ, ಗದ್ದಲ, ಗೊಂದಲ ನಡೆದಿದ್ದರಿಂದ ಕಿಮ್ಸ್ ಬಳಿ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಸುಮಾರು 55 ವಯೋಮಾನದ ಚಾಲಕ ಈ ಆಕಸ್ಮಿಕ ದಾಳಿಯಿಂದ ತೀವ್ರ ನೊಂದುಕೊಂಡು ಕಣ್ಣೀರು ಹಾಕಿತ್ತಲೇ ಮತ್ತೆ ಬಸ್ ಏರಿದರು.ಹಲ್ಲೆಗೆ ಒಳಗಾದ ಈ ಚಾಲಕ ಪೊಲೀಸರಿಗೆ ದೂರು ನೀಡಿದ ಬಗ್ಗೆ ಗೊತ್ತಾಗಿಲ್ಲ.