ಶಿವಾನಂದ ಗೊಂಬಿ
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಧ್ಯೆ ಓಡಾಡುತ್ತಿರುವ ಬಿಆರ್‌ಟಿಎಸ್ ಸರಿಯಿಲ್ಲ. ಈ ವ್ಯವಸ್ಥೆಯನ್ನೇ ರದ್ದುಗೊಳಿಸಿ ಎಂಬ ಕೂಗು ಒಂದೆಡೆ ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ಪರ್ಯಾಯ ಸಾರಿಗೆ ವ್ಯವಸ್ಥೆಗೆ ಜಾರಿಗೊಳಿಸಲು ಚಿಂತನೆ ನಡೆದಿದೆ. ಆದರೆ ಬಿಆರ್‌ಟಿಎಸ್ ಸರಿಯಿಲ್ಲದಿದ್ದಲ್ಲಿ ಆರು ವರ್ಷದಲ್ಲಿ ನಾಲ್ಕು ಪ್ರಶಸ್ತಿ ಪಡೆಯಲು ಅದ್ಹೇಗೆ ಸಾಧ್ಯವಾಯಿತು?
ಇದು ಪ್ರಜ್ಞಾವಂತರು, ಪ್ರಯಾಣಿಕರನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ದಕ್ಷಿಣ ಭಾರತದ ಮೊದಲ ಬಿಆರ್‌ಟಿಎಸ್ ಸಾರಿಗೆ ಹುಬ್ಬಳ್ಳಿ ಆರಂಭವಾಗಿ ಬರೋಬ್ಬರಿ 6 ವರ್ಷ ಕಳೆದಿದೆ. ಈ ಆರು ವರ್ಷದಲ್ಲಿ ನಾಲ್ಕು ವರ್ಷ ಸತತವಾಗಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.ಬಂದಿರುವ ಪ್ರಶಸ್ತಿಗಳಿವು:
2019ರಲ್ಲಿ ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದಿಂದ ಬೆಸ್ಟ್ ಅರ್ಬನ್ ಮಾಸ್ ಟ್ರಾನ್ಸಿಟ್ ಪ್ರಾಜೆಕ್ಟ್ (ನಗರದ ಅತ್ಯುತ್ತಮ ಸಾಮೂಹಿಕ ಸಾರಿಗೆ ಯೋಜನೆ), 2020ರಲ್ಲಿ ಸ್ಕಾಚ್ ಗೋಲ್ಡ್ ಅವಾರ್ಡ್ ಪರಿಸರ ಮತ್ತು ಸಮರ್ಥನಿಯತೆ (ಎನ್ವಾರ್‍ವೆಂಟ್ ಆ್ಯಂಡ್ ಸಸ್ಟೇನಬಿಲಿಟಿ), 2021ರಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಸಿಟಿ ವಿತ್ ಬೆಸ್ಟ್ ಇಟ್ಸ್, 2022ರಲ್ಲಿ ಮೋಸ್ಟ್ ಫ್ರಿಪೇರ್ ಬಿಆರ್‌ಟಿಎಸ್ ಅರ್ಬನ್ ಇನ್ಫ್ರಾ ಬಿಜಿನೆಸ್ ಲೀಡರ್‌ಶಿಪ್ ಅವಾರ್ಡ್ ಹೀಗೆ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಸತತವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನೇ ಬಿಆರ್‌ಟಿಎಸ್ ಪಡೆದಿದೆ.ಅದ್ಹೇಗೆ ಕೊಟ್ಟರು:
ಇದೀಗ ಬಿಆರ್‌ಟಿಎಸ್‌ನಿಂದ ಟ್ರಾಫಿಕ್ ಕಿರಿಕಿರಿಯಾಗುತ್ತದೆ. ಇದು ಅವೈಜ್ಞಾನಿಕವಾಗಿದೆ. 11 ನಗರಗಳಲ್ಲಿ ವಿಫಲವಾಗಿರುವ ಯೋಜನೆ. ಇಲ್ಲೂ ಬಂದ್ ಮಾಡಿ ಎಂಬ ಬೇಡಿಕೆಗಳೆಲ್ಲ ಕೇಳಿ ಬರುತ್ತಿವೆ. ಹತ್ತಾರು ಜನರು ಅಧಿಕಾರಿ ವರ್ಗ, ಸಚಿವರಿಗೆಲ್ಲ ಮನವಿ ಪತ್ರ ಕೊಟ್ಟಿದ್ದು ಆಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಿಆರ್‌ಟಿಎಸ್‌ಗೆ ಪರ್ಯಾಯವಾಗಿ ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ಜಾರಿಗೊಳಿಸಲು ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಸಮೀಕ್ಷೆಯನ್ನೂ ನಡೆದು,. ಒಂದು ಬಾರಿ ಸಭೆಯನ್ನೂ ನಡೆಸಲಾಗಿದೆ.ಬಿಆರ್‌ಟಿಎಸ್ ಸರಿಯಿಲ್ಲದಿದ್ದಲ್ಲಿ ಅದ್ಹೇಗೆ ನಾಲ್ಕು ವರ್ಷ ಸತತವಾಗಿ ಪ್ರಶಸ್ತಿಗಳು ಬಂದಿವೆ. ಈ ಪ್ರಶಸ್ತಿಗಳನ್ನೆಲ್ಲ ಕೊಟ್ಟಿದ್ದು ಯಾವುದೋ ಖಾಸಗಿ ಸಂಘಟನೆಯಲ್ಲ. ಕೇಂದ್ರ ಸರ್ಕಾರದ ಸಚಿವಾಲಯಗಳು, ಈ ಪ್ರಶಸ್ತಿಗೆ ಆಯ್ಕೆಯಾಗುವುದೇ ದೊಡ್ಡ ಹೆಮ್ಮೆಯ ವಿಷಯ. ಪ್ರಶಸ್ತಿ ಕೊಡಬೇಕೆಂದರೆ ಬಿಆರ್‌ಟಿಎಸ್‌ನಿಂದ ಆಗಿರುವ, ಆಗುತ್ತಿರುವ ಸಾಧಕ-ಬಾಧಕ, ಅದರ ಯಶಸ್ವಿಗಳನ್ನೆಲ್ಲ ನೋಡಿಯೇ ಆಯ್ಕೆ ಮಾಡಿರುತ್ತಾರೆ. ಜನರು ಹೇಳಿದಂತೆ ಬಿಆರ್‌ಟಿಎಸ್ ಸರಿಯಿಲ್ಲದಿದ್ದಲ್ಲಿ ಈ ಪ್ರಶಸ್ತಿಗಳಿಗೆ ಬೆಲೆ ಇಲ್ಲವೇ? ಈ ಪ್ರಶಸ್ತಿಗೆ ಆಯ್ಕೆ ಮಾಡಿರುವ ಮಾನದಂಡಗಳು ಸರಿಯಿಲ್ಲವೇ? ಎಂಬ ಪ್ರಶ್ನೆ ಕಾಡುತ್ತಿದೆ.
ಬಿಆರ್‌ಟಿಎಸ್ ಅನುಷ್ಠಾನದಲ್ಲಿ ಕೆಲವೊಂದಿಷ್ಟು ಲೋಪದೋಷಗಳಾಗಿರಬಹುದು. ಹಾಗಂತ ಅದು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂಬುದಕ್ಕೆ ಈ ಪ್ರಶಸ್ತಿಗಳೇ ಸಾಕ್ಷಿಯಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಂಬುದು ಪ್ರಜ್ಞಾವಂತರ ಅಂಬೋಣ. ಬಿಆರ್‌ಟಿಎಸ್‌ನಲ್ಲಿ ಕೆಲವೊಂದಿಷ್ಟು ಲೋಪದೋಷಗಳಿರುವುದು ನಿಜ. ಅದರೊಂದಿಗೆ ಅದೊಂದು ಉತ್ತಮ ಸೇವೆಯನ್ನು ಒದಗಿಸುತ್ತಿದೆ ಎಂಬುದು ಕೂಡ ಅಷ್ಟೇ ಸ್ಪಷ್ಟ ಎಂದು ಹಿರಿಯ ನಾಗರಿಕ ಮಂಜುನಾಥ ಪಾಟೀಲ ಹೇಳಿದರು.