ಗ್ರಾಮೀಣ ನೆಲದ ನುಡಿ ಪ್ರೀತಿಗೆ ಮಾದರಿಯಾದ ಮೊಗಸಾಲೆ: ಡಾ. ಹೆಗ್ಗಡೆ

KannadaprabhaNewsNetwork |  
Published : Sep 22, 2024, 01:49 AM IST
ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆಯವರಿಗೆ 80ರ ಅಭಿನಂದನೆಗ್ರಾಮೀಣ ನೆಲದ ನುಡಿ ಪ್ರೀತಿಗೆ ಮಾದರಿಯಾದ ಮೊಗಸಾಲೆ: ಡಾ. ಹೆಗ್ಗಡೆ.  | Kannada Prabha

ಸಾರಾಂಶ

ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರಿಗೆ 80 ರ ಅಭಿನಂದನಾ ಸಮಾರಂಭ ನಡೆಯಿತು.

ಮೂಡುಬಿದಿರೆ: ಮಣ್ಣಿನ ಸೊಗಡು, ಪ್ರೀತಿ ಉಳಿಸಿಕೊಂಡಿರುವ ಗ್ರಾಮೀಣ ಪರಿಸರದಲ್ಲಿ ಫಲವತ್ತತೆಯ ಮಣ್ಣು ಬೀಜಾಂಕುರಕ್ಕೆ ಪ್ರಶಸ್ತವಾಗಿರುವಂತೆ ಕಾಂಕ್ರೀಟು ಕಟ್ಟಡಗಳ ನಗರ ಪರಿಸರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯದ ಫಸಲು ಕೂಡ ಸಮೃದ್ಧವಾಗಿರುತ್ತದೆ ಎನ್ನುವುದನ್ನ ಸಾಧಿಸಿ ತೋರಿಸಿದವರು ಡಾ. ನಾ. ಮೊಗಸಾಲೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.

ಅವರು ಶನಿವಾರ ಇಲ್ಲಿನ ಸ್ವರ್ಣ ಮಂದಿರದಲ್ಲಿ ಸಮಾಜಮಂದಿರ ಸಭಾ, ಮೂಡುಬಿದಿರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದ.ಕ ಜಿಲ್ಲಾ ಹಾಗೂ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವುಗಳ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರಿಗೆ 80 ರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಸಮ್ಮಾನ ನೆರವೇರಿಸಿ ಮಾತನಾಡಿದರು.

ಕಳೆದ ಐದು ದಶಕಗಳಲ್ಲಿ ಕಾಂತಾವರವೆಂಬ ಸಣ್ಣ ಗ್ರಾಮದಿಂದ ಕನ್ನಡ ಸಾಹಿತ್ಯ ಸೇವೆ, ಸಂಘಟನೆಯಲ್ಲಿ ಅವರದ್ದು ಅಭಿಮಾನ ಪಡುವ ದೊಡ್ಡ ಸಾಧನೆ.ವಯಸ್ಸು ದೇಹಕ್ಕಾಗಿರಬಹುದು. ಆದರೆ ಉತ್ಸಾಹದ ಮನಸ್ಸು, ಇನ್ನಷ್ಟು ಕ್ರಿಯಾ ಶೀಲತೆಯೊಂದಿಗೆ ಸಾಹಿತ್ಯ, ಸಂಘಟನೆಯಲ್ಲಿ ಮೊಗಸಾಲೆಯವರನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಲಿ. ಪ್ರಕಾಶನ, ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದ್ದು ಮೌಲಿಕ ಸಾಹಿತ್ಯ ಇನ್ನಷ್ಟು ಹೆಚ್ಚಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಗಣ್ಯರ ಉಪಸ್ಥಿತಿಯಲ್ಲಿ ಮೊಗಸಾಲೆ ದಂಪತಿಯನ್ನು ಗೌರವಿಸಲಾಯಿತು.ಸವಾಲಿನ ಸಾಧನೆ: ಬಿ. ಎ. ವಿವೇಕ ರೈ

ವಿಶ್ರಾಂತ ಕುಲಪತಿ, ಹಿರಿಯ ವಿದ್ವಾಂಸ ಪ್ರೊ.ಬಿ. ಎ. ವಿವೇಕ ರೈ ಅಭಿನಂದನಾ ಮಾತುಗಳನ್ನಾಡಿದರು. ಕಟ್ಟಡವೊಂದನ್ನು ಕಟ್ಟುವುದೇ ಸುಲಭ. ಆದರೆ ಮನುಷ್ಯರನ್ನು ಸೇರಿಸುವುದು, ಸಂಸ್ಥೆಯೊಂದನ್ನು ಕಟ್ಟಿ ನಿರಂತರವಾಗಿ ಬೆಳಸುವ ಸವಾಲಿನ ಕೆಲಸದಲ್ಲಿ ಮೊಗಸಾಲೆಯವರ ಕಾಂತಾವರ ಮಾದರಿ ಅದೊಂದು ಅಚ್ಚರಿ. ಕನ್ನಡದ ತೇರನ್ನು ನಿರಂತರ ಎಂಬಂತೆ ಎಳೆಯುತ್ತಾ ವರ್ಧಮಾನ ಸಾಹಿತ್ಯ, ಮುದ್ದಣ ಕಾವ್ಯದಂತಹ ಶ್ರೇಷ್ಠ ಪುರಸ್ಕಾರಗಳು, ಯಾವ ಅಕಾಡೆಮಿ, ವಿವಿಯೂ ಮಾಡದ ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಜಿಲ್ಲೆಯ ಮುನ್ನೂರಕ್ಕೂ ಅಧಿಕ ಸಾಧಕರ ಕೃತಿಗಳ ಲೋಕಾರ್ಪಣೆ, ಅಲ್ಲಮ ಪ್ರಭು ಪೀಠ, ಕಾಂತಾವರ ದತ್ತಿ ಪುರಸ್ಕಾರ , ಸಾಹಿತ್ಯ, ಸಮ್ಮಾನಗಳ ನಿರಂತರ ಕಾರ್ಯಗಳು ನಾಡಿಗೇ ಮಾದರಿ ಎಂದರು.

ಮಾಜಿ ಸಚಿವ, ಸಮಾಜ ಮಂದಿರ ಸಭಾ ಅಧ್ಯಕ್ಷ ಕೆ. ಅಭಯಚಂದ್ರ ಜೈನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂತಾವರದ ಮೂಲಕ ಮೊಗಸಾಲೆಯವರು ಕನ್ನಡದ ಧ್ವನಿಯಾಗಿ ಬೆಳೆದವರು ಎಂದರು. ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿಯ ಕಾರ್ಯದರ್ಶಿ ಸದಾನಂದ ನಾರಾವಿ ವಂದಿಸಿದರು. ಡಾ. ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ಹರೀಶ್ ಅದೂರು ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಕಾಂತಾವರ ಕನ್ನಡ ಸಂಘದ ನುಡಿತೇರು ಸಾಕ್ಷ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿತು. ಡಾ.ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ಬಿ. ಜನಾರ್ದನ ಭಟ್, ಡಾ. ರವಿಶಂಕರ ಜಿ. ಕೆ., ಡಾ.ಸುಭಾಷ್ ಪಟ್ಟಾಜೆ, ಅಂಶುಮಾಲಿ ಮಣಿಪಾಲ ಇವರು ಮೊಗಸಾಲೆಯವರ ಕೃತಿ ಸಮೀಕ್ಷೆ ಮತ್ತು ಕೃತಿಕಾರರಿಗೆ ಗೌರವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡ ಸಂಘದ ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ಕೃತಿ ಸಮೀಕ್ಷೆ ಕಲಾಪದಲ್ಲಿ ವಂದಿಸಿದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್