ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಸಮಸ್ಯೆ ಪರಿಹರಿಸಿ: ಸಂಸದ ಕಾಗೇರಿ

KannadaprabhaNewsNetwork |  
Published : Nov 24, 2026, 01:15 AM IST
ಈ ಸಭೆಯಲ್ಲಿ ಮಂಗಳೂರಿನ ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕರು (GM) ಹೇಮಂತ್ ಸದಾಶಿವ್, ಕಾರವಾರದ ಉಪ ಪ್ರಧಾನ ವ್ಯವಸ್ಥಾಪಕರು (DGM) ಮಲ್ಲಿಕಾರ್ಜುನ ತಾಳಿಕೋಟಿ, ವಿವಿಧ ವಿಭಾಗಗಳ ಸಹಾಯಕ ಪ್ರಧಾನ ವ್ಯವಸ್ಥಾಪಕರು (AGM) ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಜಿಲ್ಲೆಗೆ ಈಗಾಗಲೇ ಹೊಸದಾಗಿ ಮಂಜೂರಾಗಿರುವ ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣಕ್ಕಾಗಿ ಸೂಕ್ತ ಸ್ಥಳಗಳನ್ನು ಶೀಘ್ರವಾಗಿ ಗುರುತಿಸಿ, ಮುಂದಿನ ತಾಂತ್ರಿಕ ಪ್ರಕ್ರಿಯೆಗಳಿಗೆ ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.

ಶಿರಸಿ: ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಬಲವರ್ಧನೆ ಕುರಿತು ನಗರದ ಸಂಸದರ ಕಾರ್ಯಾಲಯದಲ್ಲಿ ಸೋಮವಾರ ಸಂಬಂಧಿಸಿದ ಹಿರಿಯ ಬಿಎಸ್‌ಎನ್‌ಎಲ್ ಅಧಿಕಾರಿಗಳ ಜತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉನ್ನತ ಮಟ್ಟದ ಸಭೆ ನಡೆಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತ್ತು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ 4ಜಿ ಮೊಬೈಲ್ ನೆಟ್‌ವರ್ಕ್ ಜತೆಗೆ ಅಂತರ್ಜಾಲ ಸೇವೆ ಕಲ್ಪಿಸುವ ಉದ್ದೇಶದಿಂದ ಸಂಸದರು ಜಿಲ್ಲೆಯಲ್ಲಿನ ದೂರಸಂಪರ್ಕ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ ಮತ್ತು ನೆಟ್‌ವರ್ಕ್ ಗುಣಮಟ್ಟವನ್ನು ಸುಧಾರಿಸುವ ಸಂಬಂಧ ಸುದೀರ್ಘವಾಗಿ ಚರ್ಚಿಸಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಜಿಲ್ಲೆಯ ಅನೇಕ ಭಾಗಗಳಲ್ಲಿ ಹೊಸ 4ಜಿ ಟವರ್‌ಗಳು ಕಾರ್ಯಾರಂಭ ಮಾಡಿದ್ದರೂ ತಾಂತ್ರಿಕ ದೋಷಗಳಿಂದಾಗಿ ಜನರಿಗೆ ಸಮರ್ಪಕವಾಗಿ ನೆಟ್‌ವರ್ಕ್ ತಲುಪದೆ ತೊಂದರೆಯಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿ ಗ್ರಾಹಕರಿಗೆ ಅಡೆತಡೆಯಿಲ್ಲದ ಸೇವೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಲ್ಲದೆ, ನಿರಂತರ ನೆಟ್‌ವರ್ಕ್ ಸೇವೆಗಾಗಿ ಟವರ್‌ಗಳ ಬ್ಯಾಟರಿ ಬ್ಯಾಕಪ್ ಮತ್ತು ಪವರ್ ಪ್ಲಾಂಟ್‌ಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸುವಂತೆ, ಹಳೆಯ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಆಧುನೀಕರಣಗೊಳಿಸುವುದರ ಜತೆಗೆ ಅಗತ್ಯವಿರುವ ಕಡೆ ಹೊಸ ಒಎಫ್‌ಸಿ ಲೈನ್‌ಗಳನ್ನು ತ್ವರಿತವಾಗಿ ಅಳವಡಿಸುವಂತೆ ಕಟ್ಟುನಿಟಿನ ಸಲಹೆ ನೀಡಿದರು.ಇದರೊಂದಿಗೆ, ಹೊಸ 4ಜಿ ಟವರ್‌ಗಳಿಗೆ ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿರುವ ತಾಂತ್ರಿಕ ಸಿಬ್ಬಂದಿಗಳ ಕೊರತೆಯನ್ನು ನೀಗಿಸಿ ನಿರ್ವಹಣೆಯನ್ನು ಚುರುಕುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲೆಗೆ ಈಗಾಗಲೇ ಹೊಸದಾಗಿ ಮಂಜೂರಾಗಿರುವ ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣಕ್ಕಾಗಿ ಸೂಕ್ತ ಸ್ಥಳಗಳನ್ನು ಶೀಘ್ರವಾಗಿ ಗುರುತಿಸಿ, ಮುಂದಿನ ತಾಂತ್ರಿಕ ಪ್ರಕ್ರಿಯೆಗಳಿಗೆ ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯು ಅತಿ ಹೆಚ್ಚು ಬಿಎಸ್‌ಎನ್‌ಎಲ್ ಟವರ್‌ಗಳು ಹಾಗೂ ಅತ್ಯಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ನಮ್ಮ ಜಿಲ್ಲೆಯ ಜನರಿಗೆ ಬಿಎಸ್‌ಎನ್‌ಎಲ್ ಜೀವನಾಡಿಯಂತಿದೆ. ಆದ್ದರಿಂದ ವಿಶೇಷ ಆದ್ಯತೆಯ ಮೇರೆಗೆ ಬಿಎಸ್‌ಎನ್‌ಎಲ್‌ನ ಪ್ರಮುಖ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಧಿಕಾರಿಗಳು ಯಾವುದೇ ನೆಪ ಅಥವಾ ಕಾರಣ ನೀಡದೆ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಜನರಿಗೆ ಅತ್ಯುತ್ತಮ ಸೇವೆ ತಲುಪಿಸಬೇಕು ಎಂದರು.ಸಭೆಯಲ್ಲಿ ಮಂಗಳೂರಿನ ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕ ಹೇಮಂತ್ ಸದಾಶಿವ್, ಕಾರವಾರದ ಉಪ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ತಾಳಿಕೋಟಿ, ವಿವಿಧ ವಿಭಾಗಗಳ ಸಹಾಯಕ ಪ್ರಧಾನ ವ್ಯವಸ್ಥಾಪಕರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವ ವಿಕಲಚೇತನರ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಿ: ಡಾ. ದುರಗೇಶ್
ಯುವಜನ ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ಶಾಸಕ ದಿನಕರ ಶೆಟ್ಟಿ