ಭೂತ ಬಂಗಲೆಯಂತಾದ ಬಿಎಸ್ಎನ್ಎಲ್ ಕೇಂದ್ರ ಕಟ್ಟಡ

KannadaprabhaNewsNetwork |  
Published : Jun 21, 2025, 12:48 AM ISTUpdated : Jun 21, 2025, 12:49 AM IST
ಚಿತ್ರಶೀರ್ಷಿಕೆ19ಎಂಎಲ್ ಕೆ1ಮೊಳಕಾಲ್ಮುರು ತಾಲೂಕಿನ ಬಿಜಿ ಕೆರೆ ಸಮೀಪದ ಕಮರಾಕಾವಲ್ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಿ ಸ್ಥಗಿತ ಹೊಂದಿರುವ  ಬಿಎಸ್ಎನ್ಎಲ್ ಗೋಪುರ ಕೇಂದ್ರ.ಚಿತ್ರಶೀರ್ಷಿಕೆ19ಎಂಎಲ್ ಕೆ2ಮೊಳಕಾಲ್ಮುರು ತಾಲೂಕಿನ ಬಿಜಿ ಕೆರೆ ಸಮೀಪದ ಕಮರಾಕಾವಲ್ ಅರಣ್ಯ ಪ್ರದೇಶದಲ್ಲಿನ  ಬಿಎಸ್ಎನ್ಎಲ್ ಕೇಂದ್ರದ ಕಟ್ಟಡ ಬಿಕೋ ಎನ್ನುತ್ತಿರುವುದು. ಚಿತ್ರಶೀರ್ಷಿಕೆ19ಎಂಎಲ್ ಕೆ3ಮೊಳಕಾಲ್ಮುರು ತಾಲೂಕಿನ ಬಿಜಿ ಕೆರೆ ಸಮೀಪದ ಕಮರಾಕಾವಲ್ ಅರಣ್ಯ ಪ್ರದೇಶದಲ್ಲಿನ  ಬಿಎಸ್ಎನ್ಎಲ್ ಕೇಂದ್ರದ ಆವರಣದಲ್ಲಿ ತುಕ್ಕು ಹಿಡಿದ ಜನರೇಟರ್ ಚಿತ್ರಶೀರ್ಷಿಕೆ19ಎಂಎಲ್ ಕೆ4ಮೊಳಕಾಲ್ಮುರು ತಾಲೂಕಿನ ಬಿಜಿ ಕೆರೆ ಸಮೀಪದ ಕಮರಾಕಾವಲ್ ಅರಣ್ಯ ಪ್ರದೇಶದಲ್ಲಿನ  ಬಿಎಸ್ಎನ್ಎಲ್ ಕೇಂದ್ರದ ಆವರಣದಲ್ಲಿ ಮರಗಿಡಗಳು ತುಂಬಿರುವುದು. | Kannada Prabha

ಸಾರಾಂಶ

ನಾಲ್ಕೈದು ವರ್ಷಗಳಿಂದ ಸಾರ್ವಜನಿಕ ಸೇವೆ ಸ್ಥಗಿತ । ಕಳ್ಳರ ಕೈ ಚಳಕಕ್ಕೆ ವಸ್ತುಗಳು ಕಣ್ಮರೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಬಿ.ಜಿ.ಕೆರೆ ಬಸವರಾಜ

ಹಿಂದುಳಿದ ಗಡಿ ಪ್ರದೇಶದ ಸಾವಿರಾರು ಜನರ ಸಂಪರ್ಕ ಹೊಂದಲು ಕಾರ್ಯ ನಿರ್ವಹಿಸಬೇಕಿದ್ದ

ಬಿ.ಜಿ.ಕೆರೆ ಸಮೀಪದ ಕಮರಾ ಕಾವಲ್ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಬಿಎಸ್ಎನ್ಎಲ್ ಮೈಕ್ರೋವೇವ್ (ಸೂಕ್ಷ್ಮ ತರಂಗ ಕೇಂದ್ರ) ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದೊಂದು ದಶಕದಿಂದ ನಿರ್ವಹಣೆ ಇಲ್ಲದೆ ಕಟ್ಟಡ ಭೂತ ಬಂಗಲೆಯಾಗಿದೆ.

ಹೌದು ತಾಲೂಕಿನ ಬಿ.ಜಿ.ಕೆರೆ ಸಮೀಪದ ಕಮರಾ ಕಾವಲ್ ಅರಣ್ಯ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್‌ ಟವರ್ ಮೈಕ್ರೋ ವೇವ್ ಸೂಕ್ಷ್ಮತರಂಗ ಕೇಂದ್ರ ನಿರ್ಮಿಸಲಾಗಿದೆ. ದಶಕಗಳ ಕಾಲ ಎಲ್ಲವೂ ಸರಿಯಾಗಿಯೇ ಇದ್ದ ಈ ಕೇಂದ್ರವು ಪ್ರಸ್ತುತ ಕಳೆದ ನಾಲ್ಕೈದು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆ ನಿಲ್ಲಿಸಿದೆ. ಇದರಿಂದಾಗಿ ಕಟ್ಟಡದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು ರಕ್ಷಣೆ ಇಲ್ಲದೆ ಕಳ್ಳರ ಕೈ ಚಳಕಕ್ಕೆ ಅಲ್ಲಿನ ವಸ್ತುಗಳು ಕಣ್ಮರೆಯಾಗತೊಡಗಿವೆ.

ಅರಣ್ಯ ಪ್ರದೇಶದ ಹೃದಯ ಭಾಗದಲ್ಲಿ ತಲೆ ಎತ್ತಿದ್ದ ಈ ಕೇಂದ್ರವು ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸಿ ಗಿಡ ಮರಗಳ ನಡುವೆ ವಿದ್ಯುತ್ ದೀಪಗಳಿಂದ ಸುಂದರವಾಗಿ ಕಾಣಸಿಗುತ್ತಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಕೆಲಸ ಸ್ಥಗಿತ ಗೊಳಿಸಿದ್ದು ಕಟ್ಟಡಕ್ಕೆ ರಕ್ಷಣೆ ಇಲ್ಲದಾಗಿ ಎಷ್ಟೋ ವರ್ಷಗಳಿಂದ ನಿರ್ವಹಣೆ ಇಲ್ಲದೆ ಕಟ್ಟಡದ ಬಳಿ ತೆರಳುವವರ ಎದೆ ಕ್ಷಣ ಕಾಲ ದಸಕ್ಕೆನ್ನುವಂತ ಭೂತ ಬಂಗಲೆಯಂತೆ ಭಾಸವಾಗುತ್ತಿದೆ.

ಲಕ್ಷಾಂತರ ರು.ಖರ್ಚು ಮಾಡಿ ನಿರ್ಮಿಸಿದ ಮೈಕ್ರೋ ವೇವ್(ಸೂಕ್ಷ್ಮ ತರಂಗ ಕೇಂದ್ರ) ದ

ಮಿಶನರಿಗಳು, ಬ್ಯಾಟರಿ, ಅಲ್ಲಿನ ಜನರೇಟರ್ ತುಕ್ಕು ಹಿಡಿದಿವೆ. ಕಿಟಕಿ ಬಾಗಿಲುಗಳು ಮುರಿದು ಬಿದ್ದಿವೆ. ನೂರು ಮೀಟರ್ ಎತ್ತರದ ಗೋಪುರದಲ್ಲಿ ವಿದ್ಯುತ್ ಸಂಪರ್ಕದ ವೈರುಗಳು ಜೋತು ಬಿದ್ದಿವೆ. ಕಬ್ಬಿಣದ ಗೇಟು ಸಂಪೂರ್ಣವಾಗಿ ಹಾಳಾಗಿವೆ ಆವರಣದಲ್ಲಿ ಮರಗಿಡಗಳು ಬೆಳೆದು ಕಾಡು ಪ್ರಾಣಿಗಳ ವಾಸಸ್ತಾನವಾಗಿದೆ.

ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಕೆಲವೇ ಕೆಲವು ಬಿಎಸ್ಎನ್ಎಲ್ ಪುನರಾವರ್ತನಾ ಕೇಂದ್ರಗಳ ಪೈಕಿ ಕಮರಾ ಕಾವಲ್ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಕೇಂದ್ರವೂ ಒಂದಾಗಿದೆ. 2 ಕಿಮೀ ವ್ಯಾಪ್ತಿಯಲ್ಲಿ ನೂರಾರು ಜನರಿಗೆ ಮೊಬೈಲ್ ಸಂಪರ್ಕಕ್ಕೆ ನೆರವಾಗಿತ್ತು ಇಲ್ಲಿನ ಕೇಂದ್ರ ಸ್ಥಗಿತಗೊಂಡ ಪರಿಣಾಮವಾಗಿ ಸುತ್ತಲಿನ ಪ್ರದೇಶದಲ್ಲಿ ಬಿಎಸ್ಎನ್ಎಲ್ ಸಂಪರ್ಕ ಸಮಸ್ಯೆ ಕಾಡುತ್ತಿದೆ. ಮತ್ತೊಬ್ಬರ ಬಳಿ ಮಾತನಾಡುವಾಗ ನೆಟ್‌ವರ್ಕ್ ಕಿರಿಕಿರಿ ಅನುಭವಿಸುವಂತಾಗಿದ್ದರೂ ಸಂಬಂದಿಸಿದ ಇಲಾಖೆ ಸಮಸ್ಯೆ ಸರಿದೂಗಿಸುವತ್ತ ಮುಖ ಮಾಡುತ್ತಿಲ್ಲ.

ತಾಲೂಕನ್ನು ಬಳಸಿಕೊಂಡು ಸಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಪರ್ಕ ಕಲ್ಪಿಸುತ್ತಿದ್ದ ವೈರ್‌ಗಳು ಹಾಳಾಗಿದೆ. ದುರಸ್ತಿಗೆ ಕ್ರಮ ವಹಿಸಿಲ್ಲ. ಅಲ್ಲದೆ ಇದು ಪುನರಾವರ್ತಿತ ಕೇಂದ್ರವಾಗಿದ್ದು ಪ್ರಸ್ತುತ ಮೊಬೈಲ್ ಸಂಪರ್ಕ ಇಲ್ಲದಾಗಿದ್ದು ಕೇವಲ ಪೋಲಿಸ್ ರಿಪಿಟರ್ಸ್ ಸಂಪರ್ಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ಸಂಬಂದಿಸಿದ ಅಧಿಕಾರಿಗಳ ಅಂಬೋಣ.

ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಗ್ರಾಮಿಣ ಭಾಗದಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಖಾಸಗಿ ಮೊಬೈಲ್ ನೆಟ್‌ವರ್ಕ್ ಗೋಪುರಗಳು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವಲ್ಲಿ ತೀವ್ರ ಪೈಪೋಟಿ ನಡೆಸುತ್ತಿವೆ. ಅಲ್ಲದೆ ಜನಸಂಖ್ಯೆಯು ಹೆಚ್ಚಿದಂತೆ ಮೊಬೈಲ್ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಮೊಬೈಲ್ ನೆಟ್‌ವರ್ಕ್ ಗೆ ಹೋಲಿಕೆ ಮಾಡಿಕೊಂಡಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಪರ್ಕ ತಾಲೂಕಿನಲ್ಲಿ ತುಸು ಕಡಿಮೆ ಎನ್ನಬಹುದು. ಅದರಲ್ಲೂ ದೇವಸಮುದ್ರ ಹೋಬಳಿಯ ಕೆಲ ಹಳ್ಳಿಗಳಲ್ಲಿ ದಶಕಗಳೇ ಕಳೆದರೂ ಇಂದಿಗೂ ಸಂಪರ್ಕ ಸಿಗುವುದು ವಿರಳ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನ ನಡುವೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಗಡಿ ತಾಲೂಕಿನಲ್ಲಿ ಬಿಎಸ್‌ಎನ್‌ಎಲ್ ಸಂಪರ್ಕ ಹೆಚ್ಚಿಸುವ ಜತಗೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಬಿಎಸ್ಎನ್ಎಲ್ ನೆಟ್‌ವರ್ಕ್ ಆರಂಭಿಸಿ ನಿರ್ವಹಣೆ ಮಾಡಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

PREV

Recommended Stories

ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು
ರೈಲಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ