- ಗ್ರಾಮಗಳಲ್ಲಿ ನೆಟ್‌ವರ್ಕ್ ಸೌಲಭ್ಯವಿಲ್ಲದೇ ನಿತ್ಯ ತೊಂದರೆ । ಅಧಿವೇಶನದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಸದೆ ತಾಕೀತು
ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಾಲೇಶಪುರ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸ್ಥಾಪನೆ ಕುರಿತು ಬುಧವಾರ ನಡೆದ ಸಂಸತ್ ಅಧಿವೇಶನದ ಶೂನ್ಯವೇಳೆಯಲ್ಲಿ ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸರ್ಕಾರದ ಗಮನ ಸೆಳೆದರು.
ಅಧಿವೇಶನದಲ್ಲಿ ಮಾತನಾಡಿದ ಅವರು, ಡಿಜಿಟಲ್ ಇಂಡಿಯಾ ಮಿಷನ್‌ನ ಮೂಲಭೂತ ಉದ್ದೇಶಗಳಲ್ಲಿ ಪ್ರಮುಖವಾದುದು ಡಿಜಿಟಲ್ ಅಂತರ ನಿವಾರಿಸುವುದು ಮತ್ತು ಅಂತಿಮ ಹಂತದ ಸಂಪರ್ಕ ಖಚಿತಪಡಿಸುವುದಾಗಿದೆ. ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚನ್ನಗಿರಿ ತಾಲೂಕಿನ ಹಾಲೇಶಪುರ, ಅರಳಿಕಟ್ಟೆ, ಚಿಕ್ಕಕೋಗಲೂರು ಗ್ರಾಮಗಳು, ಹೊನ್ನಾಳಿ ತಾಲ್ಲೂಕಿನ ಮುಸ್ಸೇನಹಾಳು ಗ್ರಾಮ ಹಾಗೂ ಹರಪನಹಳ್ಳಿ ತಾಲೂಕಿನ ಕೋಂಗನಹೊಸೂರು ಮತ್ತು ಒಳತಾಂಡ ಗ್ರಾಮಗಳ ಜನತೆ ಇಂದಿಗೂ ಮೂಲಭೂತ ಮೊಬೈಲ್ ನೆಟ್‌ವರ್ಕ್ ಸೌಲಭ್ಯವಿಲ್ಲದೇ ಗ್ರಾಮಸ್ಥರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.ಈ ವಿಷಯ ಹಲವಾರು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ವಿಷಯದ ಬಗ್ಗೆ ಈಗಾಗಲೇ ಶಿವಮೊಗ್ಗ ವಲಯ ಕಚೇರಿಗೆ 4 ಪತ್ರಗಳು, ಬಳ್ಳಾರಿ ವಲಯ ಕಚೇರಿಗೆ 2 ಪತ್ರಗಳು, ಸಂವಹನ ಸಚಿವಾಲಯಕ್ಕೆ 2025ರ ಮಾ.16 ಮತ್ತು ಸೆ.20ರಂದು ಪತ್ರಗಳನ್ನು ಕಳುಹಿಸಲಾಗಿದೆ. ಸಂವಹನ ಸಚಿವಾಲಯದಿಂದ ಅ.17ರಂದು ಉತ್ತರ ಬಂದಿದ್ದರೂ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸ್ಥಾಪನೆ ಕುರಿತು ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
- - -
(ಬಾಕ್ಸ್) * ಅಫೋರ್ಡಬಿಲಿಟಿ ಷರತ್ತು ರದ್ದುಪಡಿಸಲು ಒತ್ತಾಯ 2017 ರಿಂದ ಬಾಕಿ ಉಳಿದಿರುವ ಬಿಎಸ್‌ಎನ್‌ಎಲ್ ನೌಕರರ 3ನೇ ವೇತನ ಪರಿಷ್ಕರಣೆ ನೀಡುವುದರಲ್ಲಿ "ಅಫೋರ್ಡಬಿಲಿಟಿ ಕ್ಲಾಸ್ " ಎಂಬ ಷರತ್ತು ವಿಧಿಸಲಾಗಿದೆ. ಈ ಷರತ್ತು ಅನ್ಯಾಯಕರವಾಗಿದೆ. ಏಕೆಂದರೆ ಬಿಎಸ್‌ಎನ್‌ಎಲ್ ಲಾಭಕ್ಕಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲ. ಇದು ರಾಷ್ಟ್ರಸೇವೆಗೆ ಮೀಸಲಾಗಿರುವ ಸಾರ್ವಜನಿಕ ವಲಯದ ಸಂಸ್ಥೆ. ಆದ್ದರಿಂದ, ನ್ಯಾಯದ ದೃಷ್ಟಿಯಿಂದ ಈ ಅಫೋರ್ಡಬಿಲಿಟಿ ಷರತ್ತನ್ನು ರದ್ದುಪಡಿಸಿ, 3ನೇ ವೇತನ ಪರಿಷ್ಕರಣೆಯನ್ನು 2026ರ ಮಾ.31ರೊಳಗೆ ಬಿಎಸ್‌ಎನ್‌ಎಲ್ ನೌಕರರಿಗೆ ಅನುಗ್ರಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.- - -
-3ಕೆಡಿವಿಜಿ31: ಡಾ.ಪ್ರಭಾ ಮಲ್ಲಿಕಾರ್ಜುನ